ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್ !! | ಶಿಕ್ಷಣದಲ್ಲಿ ರಾಜಕೀಯವೇಕೆ ಬೆರಕೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ನ್ಯಾಯಾಲಯ

ಬೆಂಗಳೂರು: ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸುವ ಬಗೆಗೆ ನಡೆದ ವಾದ-ವಿವಾದಗಳಲ್ಲಿ ಹೈಕೋರ್ಟ್ ಮತ್ತು ಸರ್ಕಾರಕ್ಕೆ ನಡೆದ ಚರ್ಚೆಯಲ್ಲಿ,ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ನೀತಿಯಲ್ಲಿ ಕನ್ನಡ ಕಲಿಕೆಗೆ ಅವಕಾಶವಿದೆಯೇ? ಇದ್ದರೆ ದಾಖಲೆ ಕೊಡಿ. ಶಿಕ್ಷಣದಲ್ಲಿ ರಾಜಕೀಯವನ್ನು ಏಕೆ ಸೇರಿಸುತ್ತೀರಿ?ಎಂದು ಹೈಕೋರ್ಟ್ ಪ್ರಶ್ನೆ ಹಾಕಿದೆ.

ರಾಜ್ಯದಲ್ಲಿ ಪದವಿ ಶಿಕ್ಷಣ ಹಂತದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ, ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಸರಕಾರಕ್ಕೆ ಹೈಕೋರ್ಟ್ ಈ ರೀತಿ ಪ್ರಶ್ನಿಸಿದೆ.

ಸರಕಾರ ತನ್ನ ನೀತಿಯನ್ನು ಸಮರ್ಥಿಸಿಕೊಂಡು ಆಕ್ಷೇಪಣೆ ಸಲ್ಲಿಸಿದೆ. ಭಾಷಾ ಕಲಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪ್ರೋತ್ಸಾಹಿಸುತ್ತದೆ. ಈ ಕುರಿತು ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಬೇಕಿದ್ದು, ಸೋಮವಾರಕ್ಕೆ ವಿಚಾರಣೆ ಮುಂದೂಡಬೇಕು ಎಂದು ಸರಕಾರದ ಪರ ವಕೀಲರು ಕೋರಿದರು.ಇದಕ್ಕೆ ನ್ಯಾಯಪೀಠ ಆಕ್ಷೇಪಿಸಿತು.

ಸರಕಾರದ ನಿರ್ಧಾರ ಮರು ಪರಿಶೀಲಿಸುವ ಬಗ್ಗೆ ಮಾಹಿತಿ ನೀಡುವಂತೆ ಹಿಂದಿನ ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ಗೆಹೇಳಲಾಗಿತ್ತು. ಅದೇನಾಯಿತು? ಭಾಷೆ ಕಲಿಕೆಯನ್ನು ಉತ್ತೇಜಿಸಬಹುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆಯೇ ವಿನಾ ಕಡ್ಡಾಯಗೊಳಿಸಬಹುದು ಎಂದಿಲ್ಲ. ಹೀಗಿದ್ದಾಗ ಶಿಕ್ಷಣದಲ್ಲಿ ರಾಜಕೀಯ ಏಕೆ ಸೇರಿಸುತ್ತಿದ್ದೀರಿ ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಉನ್ನತ ಶಿಕ್ಷಣದಲ್ಲಿ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂಬ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಲ್ಲ ಎಂದರು.ಅಂತಿಮವಾಗಿ ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ ಎಂಬ ಸರಕಾರದ ಪರ ವಕೀಲರ ಮನವಿ ಪುರಸ್ಕರಿಸಿದ ನ್ಯಾಯಪೀಠ ವಿಚಾರಣೆಯನ್ನು ನ. 15ಕ್ಕೆ ಮುಂದೂಡಿತು.

ಉನ್ನತ ಶಿಕ್ಷಣದಲ್ಲಿ ಕೇವಲ 6 ತಿಂಗಳ ಕಾಲ ಪ್ರಾಥಮಿಕ ಕನ್ನಡ ಕಲಿಸಲಾಗುವುದು. ಸಣ್ಣ ಪುಟ್ಟ ಕನ್ನಡ ಪದ ಕಲಿಯಲು ಹೇಳಿ ಕೊಡಲಾಗುತ್ತದೆಯಷ್ಟೇ. ಇದು ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವ ವಿಧಾನ. ರಾಜ್ಯದಲ್ಲಿ ನೆಲೆಸುವವರಿಗೆ ಸ್ಥಳೀಯರೊಂದಿಗೆ ಸಂವಾದ ನಡೆಸಲು ಅನುಕೂಲವಾಗುವಷ್ಟು ಕನ್ನಡ ಕಲಿಸಲಾಗುತ್ತದೆ. ಈ ಕ್ರಮವನ್ನು ಉಷಾ ಮೆಹ್ತಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅನುಮೋದಿಸಿದೆ ಎಂದು ಸರಕಾರದ ಪರ ವಕೀಲರು ಸಮರ್ಥಿಸಿಕೊಂಡರು.

10 ವರ್ಷಗಳಿಂದ ಎಂಜಿನಿಯರ್‌ ವ್ಯಾಸಂಗದಲ್ಲಿ ಕನ್ನಡ ಕಲಿಕೆ ಇದೆ. ಇದು 10ನೇ ತರಗತಿ ಅನಂತರ ಕನ್ನಡ ಕಲಿಯದವರಿಗೆ ಅನುಕೂಲಕರ. ಈ ವಿಧಾನ ಯಶಸ್ವಿಯೂ ಆಗಿದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

Leave A Reply

Your email address will not be published.