‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಯತ್ತ ಕರ್ನಾಟಕ ದಾಪುಗಾಲು !! | ಇನ್ನು ಮುಂದೆ ಡಿಜಿಲಾಕರ್ ನಲ್ಲೇ ಸಿಗಲಿದೆ ಶೈಕ್ಷಣಿಕ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ

ಇದೀಗ ಡಿಜಿಟಲ್ ಯುಗ. ಎಲ್ಲಾ ಪಾವತಿಗಳು, ದಾಖಲೆಗಳು, ಬ್ಯಾಂಕಿಂಗ್ ಕೆಲಸಗಳು ಎಲ್ಲಾ ಡಿಜಿಟಲ್ ವ್ಯವಹಾರಗಳಾಗಿ ಮಾರ್ಪಟ್ಟಿವೆ. ಭಾರತವೀಗ ಡಿಜಿಟಲ್ ಇಂಡಿಯಾವಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಪರಿಕಲ್ಪನೆಯಲ್ಲಿ ಇದೀಗ ಕರ್ನಾಟಕ ಮಹತ್ತರ ಹೆಜ್ಜೆಯೊಂದನ್ನಿಟ್ಟಿದೆ.

‘ಡಿಜಿಟಲ್ ಇಂಡಿಯಾ’ ಪರಿಕಲ್ಪನೆಯ ಪ್ರಯೋಜನಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ದಾಪುಗಾಲಿಟ್ಟಿದೆ. ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ನ್ಯಾಷನಲ್ ಅಕಾಡೆಮಿ ಡೆಪಾಸಿಟಿರಿ) ಭಾಗವಾಗಿ ಇನ್ನು ಮುಂದೆ ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರ ಡಿಜಿಲಾಕರ್‌ನಲ್ಲಿ ಸಿಗಲಿವೆ.

ಮುಂದಿನ ಎರಡು ವಾರದಲ್ಲಿ 2.5 ಕೋಟಿಗೂ ಅಧಿಕ ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿಗಳು ಡಿಜಿಲಾಕರ್‌ನಲ್ಲಿ ಲಭ್ಯವಾಗುತ್ತಿದೆ. ಜೊತೆಗೆ ರಾಜ್ಯದ 35 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣ ಪತ್ರಗಳು ಸಹ ಕೆಲವೇ ತಿಂಗಳಲ್ಲಿ ಡಿಜಿಲಾಕರ್‌ನಲ್ಲಿ ಬಂದು ಕೂರಲಿದೆ.

ಇ- ಆಡಳಿತ ಇಲಾಖೆಯ ವಿಶೇಷ ಪ್ರಯತ್ನ ದೇಶದಲ್ಲೇ ರಾಜ್ಯವನ್ನು ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸಿದ್ದು, ಶೈಕ್ಷಣಿಕ ವ್ಯವಸ್ಥೆಯಲ್ಲಿ ಇದೊಂದು ಮಹತ್ವಪೂರ್ಣ ಘಟ್ಟವೂ ಆಗಲಿದೆ. 2003ರಿಂದ ಈಚೆಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಸಾರ್ವತ್ರಿಕ ಪರೀಕ್ಷೆ ಎದುರಿಸಿದ ಮಕ್ಕಳ ಅಂಕಪಟ್ಟಿ ಡಿಜಿಲಾಕರ್‌ಗೆ ಅಪ್ ಲೋಡ್ ಕೆಲಸ ಪ್ರಗತಿಯಲ್ಲಿದ್ದು, ಮುಂದಿನ 15 ದಿನಗಳಲ್ಲಿ ಲಭ್ಯವಾಗುವುದು. 2019- 20ನೇ ಸಾಲಿನ ಪ್ರಮಾಣ ಪತ್ರ ಅಳವಡಿಕೆ ಕಾರ್ಯ ಮುಗಿದಿದೆ.

ಪಿಯು ಶಿಕ್ಷಣ ಇಲಾಖೆ 2008ರಿಂದೀಚೆಗೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಪಟ್ಟಿ ಸಹ ಇಷ್ಟರಲ್ಲೇ ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದೆ. 32 ವಿಶ್ವವಿದ್ಯಾಲಯ ಹಿಂದಿನ ವರ್ಷಗಳ ಅಂಕಪಟ್ಟಿ- ಪ್ರಮಾಣ ಪತ್ರ ಅಳವಡಿಸುವ ಕೆಲಸ ಶರವೇಗದಿಂದ ನಡೆದಿದೆ. ಒಟ್ಟಾರೆ ರಾಜ್ಯದಲ್ಲಿರುವ 82 ವಿವಿಗಳು- ಶೈಕ್ಷಣಿಕ ಸಂಸ್ಥೆ ಇದ್ದು, 8 ಸಂಸ್ಥೆಗಳು ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಒದಗಿಸಲು ನೋಂದಣಿ ಮಾಡಿಕೊಂಡಿವೆ. ನ್ಯಾಷನಲ್ ಅಕಾಡೆಮಿ ಡೆಪಾಸಿಟಿರಿ ಅನುಷ್ಠಾನದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ ಪ್ರಮಾಣ ಪತ್ರವನ್ನು ಡಿಜಿಲಾಕರ್‌ನಲ್ಲಿ ಸಿಗುವಂತೆ ಮಾಡಿದೆ. ಈಗ ಹಿಂದಿನ ವರ್ಷದ ದಾಖಲೆ ಸಿಗುವಂತೆ ಮಾಡುವ ಕೆಲಸ ಮಾಡಲಾಗಿದೆ.

ಡಿಜಿಲಾಕರ್ ಮೊಬೈಲ್ ಆಪ್ ಬಳಕೆ ಹೆಚ್ಚಾಗುತ್ತಿದೆ. ಬಳಕೆ ಮಾಡಿಕೊಳ್ಳದವರು ಡಿಜಿಲಾಕರ್ ಡೌನ್‌ಲೋಡ್ ಮಾಡಿಕೊಂಡು ಸೇವೆ ಪಡೆದುಕೊಳ್ಳಬಹುದು. ಆಧಾರ್ ಆಧಾರಿತ ಡಿಜಿಲಾಕರ್‌ನ ಒಳಪ್ರವೇಶಿಸಿ ತಮಗೆ ಯಾವ ಸಂಸ್ಥೆ ಅಂಕಪಟ್ಟಿ-ಪ್ರಮಾಣ ಪತ್ರವನ್ನು ನೀಡಿದೆಯೋ ಅದನ್ನು ಡೌನ ಲೋಡ್ ಮಾಡಿಕೊಳ್ಳಲು ಅವಕಾಶ ಇರಲಿದೆ. ರೋಲ್ ನಂಬರ್, ರಿಜಿಸ್ಟರ್ ನಂಬರ್, ಅಭ್ಯರ್ಥಿ ಹೆಸರು, ವರ್ಷವನ್ನು ನಮೂದಿಸಿದರೆ ಡಿಜಿಟಲ್ ರೂಪದಲ್ಲಿ ದಾಖಲೆ ಸಿಗುತ್ತದೆ. ಸಂಬಂಧಪಟ್ಟ ವಿದ್ಯಾರ್ಥಿ ಡಿಜಿಲಾಕರ್‌ಗೆ ನೇರವಾಗಿ ಪ್ರಮಾಣ ಪತ್ರವನ್ನು ಕಳಿಸುವ ವ್ಯವಸ್ಥೆ ಕೂಡ ಬರುತ್ತಿದೆ.

ಲಭ್ಯ ಅಂಕಪಟ್ಟಿಗಳು

*2003ರಿಂದ ಈಚೆಗಿನ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
*2008ರಿಂದ ಈಚೆಗಿನ ದ್ವಿತೀಯ ಪಿಯುಸಿ ಅಂಕಪಟ್ಟಿ
*32 ವಿಶ್ವವಿದ್ಯಾಲಯಗಳ ಪದವಿ ಪ್ರಮಾಣ ಪತ್ರ
*ಇನ್ನೂ 50 ವಿಶ್ವವಿದ್ಯಾಲಯಗಳ ಪ್ರಮಾಣ ಪತ್ರ ಶೀಘ್ರ ಲಭ್ಯವಾಗಲಿದೆ
*ಡಿಪ್ಲೊಮಾ ವಿಟಿಯುನ ಹಿಂದಿನ ವರ್ಷದ ಪ್ರಮಾಣ ಪತ್ರ ಶೀಘ್ರದಲ್ಲೇ ಸಿಗಲಿದೆ

ಲಾಭವೇನು?

*ಅಂಕಪಟ್ಟಿ ಕಳೆದುಹೋದರೆ ಸಂಬಂಧಪಟ್ಟ ಬೋರ್ಡ್‌ಗೆ ಅಲೆದಾಟ ತಪ್ಪಲಿದೆ
*ಉದ್ಯೋಗ ಸಂಬಂಧ ಅಂಕಪಟ್ಟಿ ಸಲ್ಲಿಸುವಾಗ ಡಿಜಿಟಲ್ ರೂಪದಲ್ಲಿ ಸಲ್ಲಿಸಬಹುದು *ಉದ್ಯೋಗದಾತರು ಆ ಕ್ಷಣವೇ ಅಂಕಪಟ್ಟಿ ನೈಜತೆ ಪರಿಶೀಲಿಸಬಹುದು
*ಮುಂದಿನ ದಿನಗಳಲ್ಲಿ ನಕಲಿ ಅಂಕಪಟ್ಟಿ ಹಾವಳಿಗೆ ಕಡಿವಾಣ ಬೀಳಬಹುದು
*ಸರ್ಕಾರಿ ವ್ಯವಸ್ಥೆಯಲ್ಲಿ ನಿರ್ವಹಣೆಯಾಗುವುದರಿಂದ ಮಾನ್ಯತೆ
*ಸಮಯ ಮತ್ತು ಹಣದ ಉಳಿತಾಯವೂ ಆಗಲಿದೆ.

ಈ ವ್ಯವಸ್ಥೆ ಜನರಿಗೆ ತುಂಬಾ ಉಪಕಾರಿಯಾಗಿದೆ ಜೊತೆಗೆ ಡಿಜಿಟಲ್ ಇಂಡಿಯಾದ ಪರಿಕಲ್ಪನೆಯು ಆಗಿದೆ.  ಈಗ ಎಲ್ಲ ಮೊಬೈಲ್ ನಲ್ಲಿಯೇ ವ್ಯವಹಾರ ನಡೆಸುತ್ತಿರುವಾಗ ಅಂಕಪಟ್ಟಿಯೂ ಮೊಬೈಲ್ ನಲ್ಲೇ ಲಭ್ಯವಾದರೆ ಅದಕ್ಕಿಂತ ಹೆಚ್ಚಿನ ವ್ಯವಸ್ಥೆ ಇನ್ನೇನು ಬೇಕು.

Leave A Reply

Your email address will not be published.