ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ | ಕಾಂಗ್ರೆಸ್ ನಾಯಕರ ಮಕ್ಕಳಾದ ಉಮರ್ ನಲಪಾಡ್, ದರ್ಶನ್ ಜೊತೆಗೆ ಹ್ಯಾಕರ್ ಶ್ರೀಕಿ ಒಡನಾಟ !!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಹಗರಣದಲ್ಲಿ ಇದೀಗ ಮತ್ತೊಂದು ಸುಳಿವು ಸಿಕ್ಕಂತಾಗಿದ್ದು,ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರಿಕಿ ಜೊತೆಗೆ ಕಾಂಗ್ರೆಸ್ ನಾಯಕರ ಮಕ್ಕಳ ಒಡನಾಟ ಇರುವುದು ಗೊತ್ತಾಗಿದೆ.

ಕಾಂಗ್ರೆಸ್ ಪಕ್ಷದ ಶಾಸಕ ಹ್ಯಾರಿಸ್ ಅವರ ಪುತ್ರ ಉಮರ್ ನಲಪಾಡ್ ಮತ್ತು ಮಾಜಿ ಸಚಿವ ಲಮಾಣಿ ಅವರ ಪುತ್ರ ದರ್ಶನ್ ಜೊತೆಗೆ ಶ್ರೀಕಿ ಒಡನಾಟ ಹೊಂದಿದ್ದರು ಎನ್ನುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪ್ರತ್ಯೇಕ ಆರೋಪಪಟ್ಟಿಯಲ್ಲಿ ಈ ಕುರಿತಂತೆ ಉಲ್ಲೇಖಿಸಲಾಗಿದೆ.

ಆನ್‌ಲೈನ್‌ ಗೇಮ್‌ ಕಂಪನಿಗಳು, ಸರ್ಕಾರಿ ವೆಬ್‌ಸೈಟ್‌ಗಳಿಗೆ ಕನ್ನ ಹಾಗೂ ಬಿಟ್‌ ಕಾಯಿನ್‌ ದಂಧೆ ಮೂಲಕ ಕುಖ್ಯಾತಿ ಪಡೆದಿರುವ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಐಷರಾಮಿ ಜೀವನ ಚರಿತ್ರೆಯನ್ನು ಸಿಸಿಬಿ ತನಿಖೆಯಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದೆ.

ಉಮರ್ ನಲಪಾಡ್ ಮತ್ತು ದರ್ಶನ್ ಅವರೊಂದಿಗೆ ಶ್ರೀಕಿ ವ್ಯವಹಾರ ನಡೆಸಿದ್ದ. ಉಮರ್ ನಲಪಾಡ್ ಸಹೋದರ ಮೊಹಮದ್ ನಲಪಾಡ್ ವಿರುದ್ಧ ದಾಖಲಾಗಿದ್ದ ಗಲಾಟೆ ಪ್ರಕರಣದಲ್ಲಿ ಶ್ರೀಕಿ ಆರೋಪಿಯಾಗಿದ್ದ. ದರ್ಶನ್ ಲಂಬಾಣಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಸಂದರ್ಭದಲ್ಲಿ ಶ್ರೀಕಿಯನ್ನು ಕೂಡ ಬಂಧಿಸಲಾಗಿತ್ತು. ಸಿಸಿಬಿ ಈ ಬಗ್ಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ಹೇಳಲಾಗಿದೆ.

ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುವಂತೆ ಕೋರಿ ಜಾರಿ ನಿರ್ದೇಶನಾಲಯ, ಇಂಟರ್ಪೋಲ್ ಗೆ ರಾಜ್ಯ ಸರ್ಕಾರ ಮಾರ್ಚ್, ಏಪ್ರಿಲ್ ನಲ್ಲಿ ಪತ್ರ ಬರೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿಟ್ ಕಾಯಿನ್ ವಿಚಾರವಾಗಿ ಆರೋಪ-ಪ್ರತ್ಯಾರೋಪ ಕೇಳಿಬರುತ್ತಿದ್ದು, ಇದು ಮತ್ತೊಂದು ಹಂತ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Leave A Reply

Your email address will not be published.