ಬೆಳ್ತಂಗಡಿ: ತಾಲೂಕಿನ ಏಕೈಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ನಿಧನ

ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ 98 ವರ್ಷದ ಹಿರಿಯ ದೇಶಾಭಿಮಾನಿ ಪಡಂಗಡಿಯ ಭೋಜರಾಜ ಹೆಗ್ಡೆ ಅವರು ನಿನ್ನೆ ಸಂಜೆ ತಮ್ಮ ಪಡಂಗಡಿಯ ಸ್ವಗ್ರಹದಲ್ಲಿ ನಿಧನರಾದರು.

ಅಪ್ಪಟ ಗಾಂಧಿವಾದಿಯಾಗಿ ಬದುಕಿದ್ದ ಭೋಜರಾಜ ಹೆಗ್ಡೆಯವರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಅವರು ಪಾತ್ರರಾಗಿದ್ದರು. ನೇರ ನಡೆ-ನುಡಿ, ಸದಾ ಖಾದಿ ವಸ್ತ್ರದಾರಿ, ಸರಳ ಜೀವನ, ಉನ್ನತಚಿಂತನೆ, ನಿತ್ಯಜೀವನದಲ್ಲಿ ಧರ್ಮದ ಅನುಷ್ಠಾನ, ಸದಾ ಪರರ ಹಿತಕ್ಕಾಗಿ ಶ್ರಮಿಸುವ ಜೀವಿಯಾಗಿದ್ದರು ಭೋಜರಾಜ ಹೆಗ್ಡೆ.

1923ರ ಫೆಬ್ರವರಿ 13 ರಂದು ಪಡಂಗಡಿಯಲ್ಲಿ ಶಾಂತಿರಾಜ ಶೆಟ್ಟಿ ಮತ್ತು ಲಕ್ಷ್ಮೀಮತಿ ದಂಪತಿಯ ಪುತ್ರನಾಗಿ ಭೋಜರಾಜ ಹೆಗ್ಡೆ ಜನಿಸಿದ್ದರು. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ 1942ರಲ್ಲಿ ಆಯೋಜಿಸಿದ್ದ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಧಾರ್ಮಿಕ, ಸಾಮಾಜಿಕ, ಸಹಕಾರಿ, ಶೈಕ್ಷಣಿಕ ಕ್ಷೇತ್ರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. ಅಲ್ಲದೇ, ಉಜಿರೆ ರಬ್ಬರ್ ಸೊಸೈಟಿ, ಮುಂಡಾಜೆಯ ಶತಾಬ್ದಿ ವಿದ್ಯಾಲಯ ಸಮಿತಿಯ‌ ಉಪಾಧ್ಯಕ್ಷರಾಗಿ ಹಲವು ಕಾಲ ಸೇವೆ ಸಲ್ಲಿಸಿದ್ದರು.

ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗ್ಗಡೆ ಸೇರಿದಂತೆ ಅನೇಕ ರಾಜಕೀಯ ನಾಯಕರ ನಿಕಟ ಸಂಪರ್ಕವನ್ನು ಹೊಂದಿದ್ದರು. ತುರ್ತು ಪರಿಸ್ಥಿತಿ ಸಂದರ್ಭ ಜೈಲುವಾಸವನ್ನು ಅನುಭವಿಸಿದ್ದರು. ಹೋರಾಟದಲ್ಲಿ ಧೋತಿ ಹರಿದಾಗ ಅಂದು ಖಾದಿ ಬಟ್ಟೆ ಖರೀದಿಸಿ ಧರಿಸಿದವರು ಇಂದಿನವರೆಗೆ ಖಾದಿ ದಿರಿಸನ್ನೇ ತೊಡುತ್ತಿದ್ದರು.

ಅಹ್ಮದಾಬಾದ್‌ನಲ್ಲಿ ಮೊರಾರ್ಜಿ ದೇಸಾಯಿ ಅವರ ಸೇವೆಯನ್ನು ಗುರುತಿಸಿ ಗ್ರಾಮೋದ್ಧಾರಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಳೆದ ಎರಡು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಇವರು ಬಳಲುತ್ತಿದ್ದರು.

ಮೃತರು ಪುತ್ರ ವಿನಯ ಪ್ರಸಾದ್, ಪುತ್ರಿ ವೀಣಾ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

Leave A Reply

Your email address will not be published.