ವಿಚ್ಛೇದನೆ ಪಡೆದವರ ‘ಪೋಷಕತ್ವ ಹಂಚಿಕೆ’ ಕುರಿತ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ | ಮಗು ಅಪ್ಪನ ಬಳಿಗೋ? ಅಮ್ಮನ ಬಳಿಗೋ?

ಒಂದಾಗಿ ಬಾಳಬೇಕು ಎಂದು ಕೈಹಿಡಿದ ಜೋಡಿಗಳು ಯಾವುದೋ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಾರೆ. ಹೀಗೆ ದೂರಾಗುವ ಜೊಡಿಗಳು ನೆಮ್ಮದಿ ಬೇಕು, ಸ್ವತಂತ್ರ ಬೇಕು ಎಂದು ಬೇರೆಯಾದರೂ ಅವರ ಮುಂದಿನ ಬಾಳು ಹಸನಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಬೇರೆಯಾದರೆ ಅದರಿಂದ ಹೆಚ್ಚು ಕಷ್ಟ ಅನುಭವಿಸುವರು ಏನೂ ಅರಿಯದ ಮಕ್ಕಳು.

ಮಕ್ಕಳು ಮತ್ತು ವಿಚ್ಛೇದನವನ್ನು ಒಂದಾಗಿ ಕಾಣಲು ಸಾಧ್ಯವಾಗದಿದ್ದರೂ ಈ ಅಪ್ಪ-ಅಮ್ಮನ ಜಗಳದಲ್ಲಿ ಮಕ್ಕಳ ಪುಟ್ಟ ಕನಸುಗಳು ಕಮರಿ ಅವರ ಬಾಳಿನ ನೆಮ್ಮದಿ ಚಿಂದಿಯಾಗುವುದಂತೂ ಸತ್ಯ. ಇದನ್ನು ಸ್ವಲ್ಪ ಮಟ್ಟಿಗಾದರೂ ತಡೆಯಲು ಇದೀಗ ಕೋರ್ಟ್ ಮುಂದಾಗಿದೆ. ತಂದೆ-ತಾಯಿ ಇಬ್ಬರ ಪ್ರೀತಿಯು ಮಕ್ಕಳಿಗೆ ದೊರಕಬೇಕೆಂಬ ಇಚ್ಛೆ ವ್ಯಕ್ತಪಡಿಸಿದೆ.

ಕೌಟುಂಬಿಕ ವ್ಯಾಜ್ಯಗಳಾದಾಗ ಮಕ್ಕಳನ್ನು ಸುಪರ್ದಿಗೆ ಪಡೆಯುವ ವಿಷಯದಲ್ಲಿ ತಂದೆ-ತಾಯಿ ಇಬ್ಬರಿಗೂ ‘ಸಮಾನ ಪೋಷಕತ್ವ ಹಂಚಿಕೆ’ಯಾಗುತ್ತದೆ. ಈ ಪರಿಕಲ್ಪನೆಯನ್ನು ಅಳವಡಿಸಿಕೊಂಡಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ ಈಗ ಎತ್ತಿಹಿಡಿದಿದೆ.

ಅಲ್ಲದೇ, ಮಕ್ಕಳನ್ನು ಸುಪರ್ದಿಗೆ ನೀಡುವ ವಿಚಾರದಲ್ಲಿ ಕೌಟುಂಬಿಕ ನ್ಯಾಯಾಲಯಗಳು ಯಾವ್ಯಾವ ನಿಯಮಗಳನ್ನು ಪಾಲನೆ ಮಾಡಬೇಕೆಂದೂ ಮಾರ್ಗಸೂಚಿಯನ್ನು ಹೈಕೋರ್ಟ್‌ ಹೊರಡಿಸಿದೆ.

ಏನಿದು ಪ್ರಕರಣ?:

ಹುಬ್ಬಳ್ಳಿಯ ಜ್ಯೋತಿ ಪ್ರಿಯಾ ಮತ್ತು ಬೆಂಗಳೂರಿನ ಪಾಲ್‌ ಗುಡ್ವಿನ್‌ ಜೆ 2005ರಲ್ಲಿ ಮದುವೆಯಾಗಿದ್ದರು. ಮುಂದಿನ ವರ್ಷ ಅವರಿಗೆ ಮೊದಲ ಗಂಡು ಮಗು ಜನಿಸಿತ್ತು. 2012ರಲ್ಲಿ ಹೆಣ್ಣು ಮಗು ಜನಿಸಿತ್ತು. ದಂಪತಿ ಮಧ್ಯೆ ಮನಸ್ತಾಪ ಉಂಟಾಗಿ 2015ರಲ್ಲಿ ತಂದೆಯು ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಮಕ್ಕಳನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಕೋರಿದ್ದರು. ಅರ್ಜಿಗೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದರು. ಈ ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌, ಈಗ ಎತ್ತಿ ಹಿಡಿದಿದ್ದು ಮಹತ್ವದ ಆದೇಶ ನೀಡಿದೆ.

ಕೋರ್ಟ್‌ ಹೇಳಿದ್ದೇನು?:

ಧಾರವಾಡ ಹೈಕೋರ್ಟ್‌ ಪೀಠದಲ್ಲಿ ನ್ಯಾ. ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯಪೀಠವು, ”ಕೌಟುಂಬಿಕ ವ್ಯಾಜ್ಯಗಳಲ್ಲಿ ಮಕ್ಕಳ ಹಿತಾಸಕ್ತಿಯೇ ಮುಖ್ಯ,” ಎಂದು ಪುನರುಚ್ಚರಿಸಿದೆ. ಅಲ್ಲದೇ, ರಜಾ, ಹಬ್ಬ ಹರಿದಿನಗಳು, ಹುಟ್ಟಿದ ಹಬ್ಬ ಮತ್ತು ಕೌಟುಂಬಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಎಷ್ಟು ದಿನ ಯಾರ ಕಸ್ಟಡಿಯಲ್ಲಿ ಮಗು ಇರುತ್ತದೆಯೋ, ಅಷ್ಟೇ ದಿನ ಆ ಮಗು ಇನ್ನೊಬ್ಬ ಕಸ್ಡಡಿಯಲ್‌ ಪೇರೆಂಟ್‌ (ಮಗು ಸುಪರ್ದಿಯಲ್ಲಿ ಹೊಂದಿಲ್ಲದವರ) ಬಳಿಯೂ ಇರಬೇಕು ಎಂದು ಆದೇಶಿಸಿದೆ.

ಮಕ್ಕಳ ಸುಪರ್ದಿ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳನ್ನು 30 ದಿನಗಳಲ್ಲಿ ಇತ್ಯರ್ಥಪಡಿಸಬೇಕು ಎಂದು ನ್ಯಾಯಪೀಠ ಹೇಳಿದ್ದು, ಹಲವು ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ನೀಡಿದೆ. ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲ ಕೌಟುಂಬಿಕ ನ್ಯಾಯಾಲಯಗಳಿಗೆ ಕಳುಹಿಸುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ನಿರ್ದೇಶನ ನೀಡಿದೆ.

ಮಾರ್ಗಸೂಚಿಯಲ್ಲಿ ಏನಿದೆ?

*ಕೌಟುಂಬಿಕ ನ್ಯಾಯಾಲಯಗಳು ಮಕ್ಕಳ ಸುಪರ್ದಿ ಅರ್ಜಿಗಳನ್ನು 30 ದಿನಗಳೊಳಗೆ ಇತ್ಯರ್ಥಪಡಿಸಬೇಕು.
*ಮಗುವಿನ ಶಿಕ್ಷಣ, ಆರೋಗ್ಯ, ಬೌದ್ಧಿಕ ಬೆಳವಣಿಗೆ ಮತ್ತು ಪೂರಕ ವಾತಾವರಣ ಮತ್ತಿತರ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಆದೇಶ ನೀಡಬೇಕು.
*ರಜಾದಿನಗಳು, ಹಬ್ಬ, ಹುಟ್ಟಿದ ಹಬ್ಬ ಮತ್ತು ಇತರ ಕೌಟುಂಬಿಕ ಕಾರ್ಯಕ್ರಮಗಳ ವೇಳೆ ಮಗುವಿನ ಸುಪರ್ದಿಯನ್ನು ಇಬ್ಬರಿಗೂ ಸಮಾನವಾಗಿ ಹಂಚಿಕೆ ಮಾಡಬೇಕು.
*ವಿಶೇಷ ದಿನಗಳಲ್ಲಿ ಅಪ್ಪನ ಬಳಿ ಮಗು 10 ದಿನ ಇದ್ದರೇ, ಅಷ್ಟೇ ದಿನ ಅಮ್ಮನ ಬಳಿಯೂ ಮಗು ಉಳಿಯಲು ಅವಕಾಶ ನೀಡಬೇಕು.
*ಪೋಷಕರು ಬೇರೆಬೇರೆ ಸ್ಥಳಗಳಲ್ಲಿ ನೆಲೆಸಿದ್ದರೆ ಆಗ ಮಗು ಯಾರ ಕಸ್ಡಡಿಯಲ್ಲಿ ಇರುವುದಿಲ್ಲವೋ ಅಂತಹವರಿಗೆ ಭೌತಿಕವಾಗಿ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು, ಒಂದು ವೇಳೆ ವಿದೇಶದಲ್ಲಿದ್ದರೆ ಫೋನ್‌/ವಿಡಿಯೊ ಸಂಪರ್ಕದ ಅವಕಾಶ ಕಲ್ಪಿಸಬೇಕು.

ಕೌಟುಂಬಿಕ ವ್ಯಾಜ್ಯಗಳಲ್ಲಿ ತೊಡಗಿರುವ ತಂದೆ-ತಾಯಿಗೆ ಮಗುವಿನ ಪೋಷಣೆಯ ಹೊಣೆಯನ್ನು ಸಮಾನವಾಗಿ ನೀಡುವುದನ್ನು ಸಮಾನ ಪೋಷಕತ್ವ ಎನ್ನುತ್ತೇವೆ. ಅಂದರೆ ಮಗು ತಾಯಿಯ ಬಳಿ ಎಷ್ಟು ದಿನ ಎಷ್ಟು ಸಮಯ ಇರುತ್ತದೋ ಅಷ್ಟೇ ಸಮಯ ತಂದೆಯ ಬಳಿಯೂ ಇರುವಂತೆ ಅವಕಾಶ ಕಲ್ಪಿಸುವುದು. ವಿದೇಶಗಳಲ್ಲಿ ಇದು ಹಲವು ವರ್ಷಗಳಿಂದ ಜಾರಿಯಲ್ಲಿದೆ. ಆದರೆ ಭಾರತದಲ್ಲಿ ಇನ್ನೂ ಆ ಪರಿಕಲ್ಪನೆ ಹೆಚ್ಚು ಪ್ರಚಲಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಕಾನೂನು ಆಯೋಗ, ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳೂ ಆ ಬಗ್ಗೆ ಧ್ವನಿ ಎತ್ತುತ್ತಿವೆ.

ವಿದೇಶಗಳಲ್ಲಿ ಷೇರ್ಡ್‌ ಪೇರೆಂಟಿಂಗ್‌ ಸಾಮಾನ್ಯವಾಗಿದೆ. ಭಾರತದಲ್ಲಿ ಅದರ ಜಾರಿಗೆ ವ್ಯಾಪಕ ಪ್ರಯತ್ನ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಹೈಕೋರ್ಟ್‌ ನ‌ ಈ ತೀರ್ಪು ಮಹತ್ವದ್ದಾಗಿದೆ.

Leave A Reply

Your email address will not be published.