ಯಡಿಯೂರಪ್ಪರವರ ಜನ ಸ್ವರಾಜ್ ಉತ್ತರ ಕರ್ನಾಟಕ ಯಾತ್ರೆ ನ.19 ರಿಂದ ಪ್ರಾರಂಭ|ಈ ಬಾರಿಯೂ ಬಿ. ಎಸ್.ವೈ ವೈಯಕ್ತಿಕ ಪ್ರವಾಸಕ್ಕೆ ತಡೆ!

ಬೆಂಗಳೂರು: ಜನ ಸ್ವರಾಜ್ ಯಾತ್ರೆಯ ಮೂಲಕ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರ ವೈಯಕ್ತಿಕ ಪ್ರವಾಸಕ್ಕೆ ತಡೆಯಾಗಿದೆ. ಇವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಉತ್ತರ ಕರ್ನಾಟಕದ 8 ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದ್ದು,ಇದನ್ನು ತಂಡ 2 ಎಂದು ಕರೆಯಲಾಗುತ್ತಿದ್ದು ನವೆಂಬರ್ 19ರಿಂದ 21ರವರೆಗೆ ನಡೆಯಲಿದೆ.

ತಂಡ 3ರ ಜವಾಬ್ದಾರಿಯನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರಿಗೆ ನೀಡಲಾಗಿದ್ದು ಅವರು ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಮಂಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಸೇರಿದಂತೆ 9 ಜಿಲ್ಲೆಗಳ ಉಸ್ತುವಾರಿಯನ್ನು ಜನ ಸ್ವರಾಜ್ ಯಾತ್ರೆಯಲ್ಲಿ ವಹಿಸಲಿದ್ದಾರೆ.

ಈ ಮೂಲಕ ಬಿಜೆಪಿ ಮತ್ತೊಮ್ಮೆ ಬಿ ಎಸ್ ಯಡಿಯೂರಪ್ಪನವರ ವೈಯಕ್ತಿಕ ರಾಜ್ಯ ಪ್ರವಾಸ ಯೋಜನೆಯನ್ನು ತಡೆಹಿಡಿದಿದೆ ಎನ್ನಬಹುದು. ಕಳೆದ ಜುಲೈಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ವೈಯಕ್ತಿಕವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಹೇಳಿದ್ದರು. ಬಿ ಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಮತ್ತು ಕರಾವಳಿ ಭಾಗಗಳಲ್ಲಿ ಬಿಜೆಪಿ ಈಗಾಗಲೇ ಪ್ರಬಲವಾಗಿರುವುದರಿಂದ ದುರ್ಬಲವಾಗಿರುವ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚು ಪ್ರಭಾವ ಬೀರಿ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸೀಟುಗಳು ದೊರಕುವಂತೆ ಮಾಡಲು ಯಡಿಯೂರಪ್ಪನವರಿಗೆ ಉತ್ತರ ಕರ್ನಾಟಕ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.

ಆದರೆ ಯಡಿಯೂರಪ್ಪನವರ ಬೆಂಬಲಿಗರು ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಾಲ್ಕನೇ ತಂಡದಲ್ಲಿ ಬಿಎಸ್ ವೈ ಪುತ್ರ ಬಿ ವೈ ವಿಜಯೇಂದ್ರ ಅವರಿದ್ದು ಅವರು ಮಧ್ಯ ಕರ್ನಾಟಕ ಭಾಗದಲ್ಲಿ ಜನ ಸ್ವರಾಜ್ ಯಾತ್ರೆ ಮಾಡಬೇಕಿದೆ. ಅವುಗಳಲ್ಲಿ ದಾವಣಗೆರೆ ಮತ್ತು ದಕ್ಷಿಣ ಕರ್ನಾಟಕ ಭಾಗಗಳು ಸೇರಿವೆ. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಈ ತಂಡ ಒಳಗೊಂಡಿದೆ.

ಸಾಮೂಹಿಕ ನಾಯಕತ್ವದಡಿ ಪಕ್ಷ ಜನರ ಮುಂದೆ ಹೋಗುವುದು, 6ಕ್ಕೂ ಹೆಚ್ಚು ನಾಯಕರನ್ನೊಳಗೊಂಡ ವಿವಿಧ ತಂಡಗಳನ್ನು ರಚಿಸುವುದು ಇಲ್ಲಿ ಮುಖ್ಯವಾಗಿದೆ. ತಂಡಗಳ ಜವಾಬ್ದಾರಿ ನೀಡಿಕೆಯಲ್ಲಿ ಯಾವುದೇ ನಿಖರ ಸಂದೇಶವಿಲ್ಲ ಎಂದು ಪಕ್ಷದ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳುತ್ತಾರೆ.

Leave A Reply

Your email address will not be published.