ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಬಾಲಿವುಡ್ ನತ್ತ ಎದ್ದು ನಡೆದ ಪ್ರತಿಭೆ |
ಬಾಲಿವುಡ್ ಸಹಿತ ಅನೇಕ ಸೆಲೆಬ್ರೆಟಿಗಳ ಸೌಂದರ್ಯದ ಹಿಂದಿದೆ ಇವರ ಕೈಚಳಕ !!

ಇದು ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಎದ್ದು ನಿಂತು ದುಬೈನ ವೈಭವದ ಲೋಕದಲ್ಲಿ ಬಣ್ಣ ಬೆಳಗಿದ ಹುಡುಗನ ಕಥೆ. ಅಲ್ಲಿಂದ ಬಾಲಿವುಡ್ಡಿನ ಥಳುಕು ಬಳುಕಿನ ಸೌಂದರ್ಯ ಲೋಕದಲ್ಲಿ ಮತ್ತಷ್ಟು ಪ್ರಖರ ಬೆಳಕು ಹಿಡಿದ ನಮ್ಮೂರ ಲೋಕಲ್ ಬಾಯ್ ಸಾಧನೆಯ ವಿವರ.

ಕುಟುಂಬ ಸದಸ್ಯರೊಂದಿಗೆ

ಖ್ಯಾತ ಸೆಲೆಬ್ರಿಟೀಸ್ ಗಳಾದ ಸಚಿನ್ ತೆಂಡೂಲ್ಕರ್ ನಿಂದ ಹಿಡಿದು ಬಾಲಿವುಡ್ ನ ದೀಪಿಕಾ ಪಡುಕೋಣೆವರೆಗೆ, ಫುಡ್ ಫೋಟೋಗ್ರಾಫಿ ಇಂದ ಮನೆ, ವಾಹನ, ಲೈಫ್ ಸ್ಟೈಲ್ ಹೀಗೆ ಆತ ಕಣ್ಣು ಹಾಕದ ಜಾಗವಿಲ್ಲ. ಕಣ್ಣು ಬೀರಿದ ಕಡೆ ಕ್ಯಾಮರಾದ ಬೆಳಕು ಬೆಳಗಿದೆ. ಆಯಾ ಐಟಂ ನ ನೈಸರ್ಗಿಕ ಸೌಂದರ್ಯ ಆತನ ಕ್ಯಾಮರಾದಲ್ಲಿ ಬಂಧಿಯಾಗಿದೆ. ಅಷ್ಟೆ ಅಲ್ಲದೆ, ಸೌಂದರ್ಯಕ್ಕೆ ಹೊಸ ಮೆರುಗು ತರುವಲ್ಲಿ ಪ್ರಮುಖ ಪಾತ್ರವಹಿಸಿದ ಈ ಮೇಧಾವಿಯ ಬಗೆಗೆ ಒಂದಿಷ್ಟು ತಿಳಿದುಕೊಳ್ಳೋಣ.

ನಾವಿಂದು ಹೇಳುತ್ತಿರುವ ಸ್ಟೋರಿ ಓರ್ವ ಫೋಟೋಗ್ರಾಫರ್ ನ ಬಗೆಗೆ.ಇಲ್ಲೋರ್ವ ಛಾಯಾಗ್ರಾಹಕ ತನ್ನ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ದೂರದ ಅರಬ್ ರಾಷ್ಟ್ರವಾದ ದುಬೈ ನಲ್ಲಿ ಅತ್ಯಂತ ಶ್ರೇಷ್ಠ ಫೋಟೋಗ್ರಾಫರ್ ಆಗಿ ಹೆಸರುವಾಸಿಯಾಗಿದ್ದಾರೆ. ಹಲವಾರು ಸೆಲೆಬ್ರಿಟಿ ವ್ಯಕ್ತಿಗಳ, ಖ್ಯಾತ ವ್ಯಕ್ತಿಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿ ತೆರೆಯಮೇಲೆ ಹೊಸರೂಪದೊಂದಿಗೆ ಪ್ರದರ್ಶಿಸಿ ಎಲ್ಲೆಡೆ ಭಾರೀ ಮೆಚ್ಚುಗೆಗಳಿಸಿಕೊಂಡಿದ್ದಾರೆ. ನಾವು-ನೀವು ದಿನನಿತ್ಯ ನೋಡುತ್ತಿರುವ ಹಲವಾರು ಚಲನಚಿತ್ರ ನಟ-ನಟಿಯರ ಅಂದಚಂದವಾದ ಫೋಟೋಶೂಟ್ ಗಳ ಹಿಂದೆ ಕಾಣದ ಕೈಯೊಂದು ಕೆಲಸ ನಿರ್ವಹಿಸಿದೆ ಎಂದರೆ ಅದರ ಕ್ರೆಡಿಟ್ ನಲ್ಲಿ ಇವರಿಗೂ ಒಂದು ಪಾಲು ಇದ್ದೇ ಇದೆ !

ಪರವೂರಿನಲ್ಲಿ ತನ್ನದೇ ಆದ ಫೋಟೋಗ್ರಫಯಿಂದ ಮೋಡಿ ಮಾಡಿದ ಆ ಪ್ರತಿಭೆಯೇ ಸುಜಿತ್. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಸುಜಿತ್ ಅಂಬಲ್ ಅವರೇ ನಮ್ಮ ಹೀರೋ. ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿರುವ ಸುಜಿತ್, ‘ಅಂಬಲ್ ಫೋಟೋಗ್ರಫಿ’ ಹೆಸರಿನಲ್ಲಿ ಹಲವಾರು ಸ್ಟುಡಿಯೋ ನಿರ್ಮಿಸಿ ದುಬೈನಲ್ಲಿ ಓರ್ವ ಅತ್ಯುತ್ತಮ ಛಾಯಾಗ್ರಾಹಕ ಆಗಿ ರೂಪುಗೊಂಡರು. ತನ್ನ ಪ್ರಾಥಮಿಕ ಶಿಕ್ಷಣವನ್ನು ನೆಲ್ಯಾಡಿಯಲ್ಲಿ ಪಡೆದು, ಪದವಿ ಶಿಕ್ಷಣವನ್ನು ಮಂಗಳೂರಿನ ಅಲೋಷಿಯಸ್ ಕಾಲೇಜಿನಲ್ಲಿ ಮುಂದುವರಿಸಿದ ಇವರು ನಂತರ ತನ್ನ ನೆಚ್ಚಿನ ಕ್ಷೇತ್ರ  ಛಾಯಾಗ್ರಾಹಣದಲ್ಲಿ  ಮುಂದುವರೆಯುತ್ತಿದ್ದಾರೆ.

ಬಾಲ್ಯದಿಂದಲೇ ಫೋಟೋಗ್ರಫಿ ಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಇವರು ತನ್ನ ಕಾಲೇಜಿನಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳ ಫೋಟೋಗಳನ್ನು ಸೆರೆಹಿಡಿಯುವ ಜವಾಬ್ದಾರಿ ಹೊತ್ತು, ಎಲ್ಲರಿಂದಲೂ ಮೆಚ್ಚುಗೆಗಳಿಸಿಕೊಂಡಿದ್ದರು. ಅದೇ ಇವರ ಪಾಲಿಗೆ ಆಶೀರ್ವಾದವಾಗಿ ಓರ್ವ ಉತ್ತಮ ಛಾಯಾಗ್ರಾಹನಾಗಿ ರೂಪುಗೊಳ್ಳಲು ಸಹಕಾರಿಯಾಯಿತು ಎನ್ನುತ್ತಾರೆ ಸುಜಿತ್.

ದುಬೈ ನಲ್ಲಿ ತನ್ನ ಸ್ವಂತ ಸ್ಟುಡಿಯೋ ತೆರೆದು ಅಲ್ಲಿನ ಜನರ ಮನಗೆದ್ದ ಸುಜಿತ್ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರೆಮರೆಯಲ್ಲಿದ್ದಾರೆ ಎನ್ನುವುದೇ ಬೇಸರದ ಸಂಗತಿ. ತನ್ನ ಪ್ರತಿಭೆಯಿಂದ ಪರವೂರಿನಲ್ಲಿ ಪ್ರಖ್ಯಾತಿ ಪಡೆದಿರುವ ಇವರು ನೆಲ್ಯಾಡಿಯಲ್ಲಿ ಒಂದು ಸ್ಟುಡಿಯೋ ಸಹಿತ ಛಾಯಾಗ್ರಾಹಣದಲ್ಲಿ ಆಸಕ್ತಿ ಇರುವವರಿಗಾಗಿ ಟ್ಯೂಷನ್ ಕೂಡಾ ನೀಡುತ್ತಿದ್ದರೂ ಹಲವರಿಗೆ ಇದು ತಿಳಿಯದೆ ಇರುವ ಸಂಗತಿ.

ಓರ್ವ ಉತ್ತಮ ಫೋಟೋಗ್ರಾಫರ್ ಆಗಬೇಕಾದರೆ ಫೋಟೋ ತೆಗೆಯುವುದರಲ್ಲಿಯೂ ಕೌಶಲ್ಯತೆ, ನೈಪುಣ್ಯತೆ ಬೇಕಾಗುತ್ತದೆ. ಇಂತಹ ಕೌಶಲ್ಯತೆ ಇರುವಂತಹ ಜನರಲ್ಲಿ ಸುಜಿತ್ ಅಂಬಲ್ ಕೂಡ ಒಬ್ಬರಾಗಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಕೊನೆಗೆ ಜೀವ ಎಳೆಯುವುದು ತಾನು ಹುಟ್ಟಿದ,ಓದಿದ, ಚಿಕ್ಕಂದಿನಲ್ಲಿ ಆಡಿದ್ದ ನೆಲದ ಕಡೆಗೆ ಎಂಬ ಮಾತಿನಂತೆ ತನ್ನೂರಿನಲ್ಲಿಯೂ ವಿಭಿನ್ನವಾದ ಚಾಕಚಕ್ಯತೆ ಮೆರೆಯಲು ಸಜ್ಜಾಗಿ, ತನ್ನ ಕಲಾತ್ಮಕ ಕ್ಯಾಮೆರಾ ಕಣ್ಣುಗಳಿಂದ ಹೊಸತನ್ನು ಸಾಧಿಸಲು ಹೊರಟಿದ್ದಾರೆ ಸುಜಿತ್ ಅಂಬಲ್. ಈಗ ನಮ್ಮ ಗ್ರಾಮೀಣ ಪ್ರತಿಭೆಯೊಂದು ಹೊರದೇಶದಲ್ಲಿ ಪ್ರಜ್ವಲಿಸುತ್ತಿದೆ, ಮುಂದೆಯೂ ಇವರ ಕನಸು ನನಸಾಗಲಿ. ನಮ್ಮ ಜಿಲ್ಲೆಯಲ್ಲೂ ಅವರ ಹೆಜ್ಜೆ ಗುರುತುಗಳು ಮೂಡಲಿ. ಇವರ ಈ ಪ್ರತಿಭೆ ವಿಶ್ವದಾದ್ಯಂತ ಪ್ರಜ್ವಲಿಸಲಿ ಎಂಬುವುದೇ ಊರವರ ಇವತ್ತಿನ ಆಶಯ. ಇವರ ಫೋಟೋ ಜಾಣ್ಮೆಯ ಬಗ್ಗೆ ಹೆಚ್ಚು ಮಾತುಗಳು ಬೇಕಿಲ್ಲ. ಅವರೇ ಕ್ಲಿಕ್ಕಿಸಿದ ಈ ಆಲ್ಬಮ್ ನೋಡಿದರೆ ಸಾಕಾಗುತ್ತೆ. ಇವರ ಪ್ರತಿಭೆಗೆ ಈ ಫೋಟೋ ಗಳೇ ಸಾಕ್ಷಿ.

?ದೀಪಕ್ ಹೊಸ್ಮಠ

Leave A Reply

Your email address will not be published.