ಪುನೀತ್‌ ರಾಜ್‌ಕುಮಾರ್‌ ಅವರಿಗೆ 2021ನೇ ಸಾಲಿನ ‘ಬಸವಶ್ರೀ ಪ್ರಶಸ್ತಿ’

ಇತ್ತೀಚೆಗೆ ಅಗಲಿದ ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್‌ರವರಿಗೆ ಮರಣೋತ್ತರವಾಗಿ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲು ಮುರುಘಾ ಮಠ ನಿರ್ಧರಿಸಿದೆ. ಮುಂದಿನ ವರ್ಷ ಬಸವ ಜಯಂತಿಯಂದು ಪುನೀತ್ ರಾಜ್‌ಕುಮಾರ್ ಕುಟುಂಬಕ್ಕೆ ಪ್ರಶಸ್ತಿ ಪ್ರದಾನ ಮಾಡುಲಾಗುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಈ ಕುರಿತು ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪುನೀತ್ ರಾಜ್‌ಕುಮಾರ್‌ರವರು ಸರ್ಕಾರದ ಹಲವು ಸೇವೆಗಳಿಗೆ ಸಂಭಾವನೆ ಪಡೆಯದೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಾಲನಟನಾಗಿ, ನಾಯಕನಟನಾಗಿ, ನಿರ್ಮಾಪಕನಾಗಿ, ಹಾಡುಗಾರನಾಗಿ ಕನ್ನಡ ಚಿತ್ರರಂಗಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಈ ಸೇವೆಯನ್ನು ಪರಿಗಣಿಸಿ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಬಸವಶ್ರೀ ಪ್ರಶಸ್ತಿಯು 5 ಲಕ್ಷ ರೂ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಪುನೀತ್‌ ರಾಜ್‌ಕುಮಾರ್‌ರವರನ್ನು ಕಳೆದುಕೊಂಡು ಇಡೀ ನಾಡು ದುಃಖದಲ್ಲಿದೆ. ಇದೇ ನವೆಂಬರ್ 10 ರಂದು ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಂತಾಪಗಳನ್ನು ತಿಳಿಸುತ್ತೇವೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

Aಪ್ರತಿಭಾನ್ವಿತ ನಟ ಪುನೀತ್ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ‘ಕರ್ನಾಟಕ ರತ್ನ’ ಗೌರವ ನೀಡಬೇಕು ಎಂಬ ಕೂಗು ಅಭಿಮಾನಿಗಳು ಮತ್ತು ಚಿತ್ರರಂಗದಿಂದ ಕೇಳಿ ಬರುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ’ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬ ಬೇಡಿಕೆ ಚಿತ್ರರಂಗ ಮತ್ತು ಅಭಿಮಾನಿಗಳಿಂದ ಕೇಳಿ ಬಂದಿದೆ. ತಕ್ಷಣಕ್ಕೆ ಈ ಬೇಡಿಕರ ಬಗ್ಗೆ ಏನು ಹೇಳಲಾಗದು. ಈ ಬಗ್ಗೆ ಪ್ರಮುಖರ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

Leave A Reply

Your email address will not be published.