ನೂರು ದಿನಗಳ ಮುಖ್ಯಮಂತ್ರಿ ಸ್ಥಾನ ಪೂರೈಸಿದ ಬೊಮ್ಮಾಯಿ|ಪೆಟ್ರೋಲ್ ಮತ್ತು ಡೀಸೆಲ್ ದರ 7. ರೂ ಕಡಿತ ಮಾಡುವ ಮೂಲಕ ಜನತೆಗೆ ದೀಪಾವಳಿ ಉಡುಗೊರೆ|ಇತಿಹಾಸದಲ್ಲೇ ಮೊದಲ ಬಾರಿಗೆ ದರ ಕಡಿಮೆ ಮಾಡುವಲ್ಲಿ ಯಶಸ್ವಿಯಾದ ಸರ್ಕಾರ

ಬೆಂಗಳೂರು:ರಾಜ್ಯಾದ್ಯಂತ ಇಂದು ಸಂಜೆಯಿಂದಲೇ ಅನ್ವಯವಾಗುವಂತೆ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ದರದಲ್ಲಿ 7 ರೂ. ಕಡಿತವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಇತಿಹಾಸದಲ್ಲೇ ಯಾವುದೇ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ದರವನ್ನು ಕಡಿಮೆ ಮಾಡಿರಲಿಲ್ಲ ಎಂದು ಸಮರ್ಥಿಸಿಕೊಂಡರು.

ನಿನ್ನೆಯಷ್ಟೇ ಕೇಂದ್ರ ಸರ್ಕಾರ ಪ್ರತಿ ಲೀಟರ್ ಡೀಸೆಲ್ ದರವನ್ನು 10 ರೂ. ಹಾಗೂ ಪೆಟ್ರೋಲ್ ದರವನ್ನು 5 ರೂ. ಇಳಿಸಿತ್ತು.ಇದೀಗ ರಾಜ್ಯ ಸರ್ಕಾರ ಪ್ರತಿ ಲೀಟರ್‍ಗೆ 7 ರೂ. ಕಡಿತ ಮಾಡಿರುವ ಪರಿಣಾಮ ರಾಜ್ಯದಲ್ಲಿ ಇನ್ನು ಮುಂದೆ ಡೀಸೆಲ್ ದರ ಪ್ರತಿ ಲೀಟರ್‍ಗೆ 92.50 ಹಾಗೂ ಪೆಟ್ರೋಲ್ ದರ 94.30 ರೂ. ಆಗಲಿದೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ದೇಶದ ಜನತೆಗೆ ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆಯಾಗಿ ಪ್ರತಿ ಲೀಟರ್ ಡೀಸೆಲ್‍ಗೆ ರೂ. 10 ಹಾಗೂ ಪೆಟ್ರೋಲ್‍ಗೆ 5 ರೂ. ಇಳಿಕೆ ಮಾಡಿತ್ತು.ನಾನು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಎಲ್ಲ ರಾಜ್ಯಗಳಲೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಕೆ ಮಾಡಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ ಎಂದರು.ತಕ್ಷಣವೇ ನಾನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಮಾರಾಟ ದರವನ್ನು 7 ರೂ.ಗೆ ಕಡಿತ ಮಾಡಲು ತೀರ್ಮಾನಿಸಿದೆ.

ಸರ್ಕಾರದ ಈ ತೀರ್ಮಾನದಿಂದಾಗಿ ಬೊಕ್ಕಸಕ್ಕೆ ಅಂದಾಜು 2100 ಕೋಟಿ ಹೊರೆಯಾಗಲಿದೆ. ಆದರೂ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದು ನಮ್ಮ ಸರ್ಕಾರ ದೀಪಾವಳಿ ಹಬ್ಬಕ್ಕೆ ಜನತೆಗೆ ಕೊಡುತ್ತಿರುವ ಉಡುಗೊರೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಲ್ಲದೆ,ಪಡಿತರ ಧಾನ್ಯ ಸೇರಿದಂತೆ ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜನಸೇವಕ ಯೋಜನೆ ಇದೇ ತಿಂಗಳ 26ರಂದು ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈಗಾಗಲೇ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಸರ್ಕಾರದ ಸೇವೆಗಳು ಪರಿಣಾಮಕಾರಿಯಾಗಿ ಜನರ ಮನೆಬಾಗಿಲಿಗೆ ತಲುಪಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲವರಿಗೆ ತರಬೇತಿಯನ್ನು ನೀಡಲಾಗಿದೆ. ಇದೇ ರೀತಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ತರಬೇತಿ ನೀಡಬೇಕು. ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕು. ಮನೆಗೆ ತೆರಳಿದಾಗ ಆಧಾರ್ ಕಾರ್ಡ್ ಪರಿಶೀಲನೆ, ಗುರುತಿನಚೀಟಿ, ಲ್ಯಾಪ್‍ಟಾಪ್ ಬಳಕೆ ಸೇರಿದಂತೆ ನಾನಾ ರೀತಿಯ ತಾಂತ್ರಿಕ ಕಾರಣಗಳಿವೆ. ಹೀಗಾಗಿ ತುಸು ವಿಳಂಬವಾಗಿದೆ ಎಂದು ತಿಳಿಸಿದರು.ಎಸ್ಸಿ-ಎಸ್ಟಿ, ಒಬಿಸಿ ಸೇರಿದಂತೆ ಎಲ್ಲ ವರ್ಗದವರಿಗೂ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ತಲುಪಿಸಬೇಕು. ಜೊತೆಗೆ ಇನ್ನಷು ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು ಎಂಬುದು ನಮ್ಮ ಉದ್ದೇಶವಾಗಿದೆ.

ಮೊದಲ ಬಾರಿಗೆ ದೇಶದಲ್ಲೇ ನಾವು ಸಿಎಂ ಡ್ಯಾಶ್‍ಬೋರ್ಡ್ ಜಾರಿಗೆ ತಂದಿದ್ದೇವೆ. ಇದರಲ್ಲಿ ಎಲ್ಲ ಇಲಾಖೆಗಳ ಮಾಹಿತಿ ಇರುತ್ತದೆ. ಪ್ರತಿದಿನ ಅಕಾರಿಗಳು ಪರಿಶೀಲಿಸುತ್ತಾರೆ. ನಾನು 15 ದಿನಕ್ಕೊಮ್ಮೆ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.ಒಂದು ಸರ್ಕಾರ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾದರೆ ಅಕಾರಿಗಳ ಪಾತ್ರವು ಪ್ರಮುಖವಾಗಿದೆ. ಜೊತೆಗೆ ಸಾರ್ವಜನಿಕರ ಕೈ ಜೋಡಿಸುವಿಕೆಯೂ ಮುಖ್ಯ ಎಂದು ಅಭಿಪ್ರಾಯಪಟ್ಟರು.

ನಾನು ಮುಖ್ಯಮಂತ್ರಿಯಾದ ನಂತರ 100 ದಿನಗಳಲ್ಲಿ ಒಂದಿಷ್ಟು ಪ್ರಾಮಾಣಿಕವಾಗಿ ಜನರಿಗೆ ಉತ್ತಮ ಆಡಳಿತ ನೀಡುವ ಪ್ರಯತ್ನ ನಡೆಸಿದ್ದೇನೆ. ಅಕಾರ ವಹಿಸಿದ ಮರುಕ್ಷಣವೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಎಂದು ಹೇಳಿದರು. ಇದೇ 6ರಂದು ನವದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಲಿದೆ ನಾನು ಅಲ್ಲಿಗೆ ತೆರಳುವುದಿಲ್ಲ. ಬೆಂಗಳೂರಿನ ಪಕ್ಷದ ಕಚೇರಿಯಲ್ಲೇ ಕುಳಿತು ಮಾಹಿತಿ ನೀಡುವುದಾಗಿ ಬೊಮ್ಮಾಯಿ ತಿಳಿಸಿದರು.

Leave A Reply

Your email address will not be published.