ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ !! | ಈ ಕುರಿತು ಪೊಲೀಸ್ ಇಲಾಖೆಗೆ ನೋಟಿಸ್ ನೀಡಿದ ಮಹಿಳಾ ಆಯೋಗ

ಈ ಬಾರಿಯ ವಿಶ್ವಕಪ್ ನ ಮೊದಲ ಪಂದ್ಯವನ್ನು ಭಾರತ ಪಾಕಿಸ್ತಾನದೊಂದಿಗೆ ಆರಂಭಿಸಿ, ಆ ಪಂದ್ಯದಲ್ಲಿ ಮುಗ್ಗರಿಸಿತ್ತು. ಇದು ಭಾರತೀಯರಿಗೆ ತುಂಬಾ ನಿರಾಸೆ ಮೂಡಿಸಿತ್ತು. ಆದರೆ ಕೆಲ ನೀಚ ಮನಸ್ಥಿತಿಯ ಸೋಕಾಲ್ಡ್ “ಅಭಿಮಾನಿಗಳು” ಈ ಸೋಲಿಗೆ ಮಿತಿ ಮೀರಿದ ವರ್ತನೆ ತೋರಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ ಒಡ್ಡಿದ್ದಾರೆ !!

ಕಳೆದ ಐಪಿಎಲ್‌ನಲ್ಲಿ ಎಂ.ಎಸ್. ಧೋನಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅವರ ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ ಬಂದಿದ್ದವು. ಇದೀಗ ವಿರಾಟ್ ಕೊಹ್ಲಿಯ 9 ತಿಂಗಳ ಮಗಳು ವಮಿಕಾಗೆ ಅದೇ ರೀತಿಯ ಬೆದರಿಕೆಗಳು ಬಂದಿವೆ.

ತೀವ್ರ ಟೀಕೆಗೆ ಗುರಿಯಾದ ತಮ್ಮ ಟೀಮ್ ಮೇಟ್ ಮೊಹಮ್ಮದ ಶಮಿ ಪರ ನಿಂತಿದ್ದಕ್ಕೆ ಕೊಹ್ಲಿಗೆ ಈ ಬೆದರಿಕೆಗಳು ಬಂದಿವೆ ಎನ್ನಲಾಗಿದೆ. ಕ್ರೀಡೆಯನ್ನು ಕ್ರೀಡಾಸ್ಪೂರ್ತಿಯಿಂದ ನೋಡದ ಕಿಡಿಗೇಡಿಗಳು ಪುಟ್ಟ ಮಗುವಿಗೂ ರೇಪ್ ಬೆದರಿಕೆ ಹಾಕುತ್ತಾರೆಂದರೆ ಅವರ ಮನಸ್ಥಿತಿಯಿಂದ ಆತಂಕದ ವಾತಾವರಣ ಮೂಡುವುದರ ಸಂಶಯವಿಲ್ಲ.

ಇನ್ನು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಪುಟ್ಟ ಮಗಳಿಗೆ ರೇಪ್ ಬೆದರಿಕೆ ಹಾಕಿರುವುದರ ಕುರಿತು ದೆಹಲಿ ಮಹಿಳಾ ಆಯೋಗ ದೆಹಲಿ ಪೊಲೀಸ್‌ಗೆ ನೋಟಿಸ್ ನೀಡಿದೆ.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸೋತ ಬೆನ್ನಲ್ಲೇ ಮೊಹಮ್ಮದ್ ಶಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದವು. ಪಾಕಿಸ್ತಾನದಿಂದ ಎಷ್ಟು ಹಣ ತೆಗೆದುಕೊಂಡಿದ್ದೀಯಾ? ನೀನು ದೇಶದ್ರೋಹಿ ಎಂಬೆಲ್ಲ ಆರೋಪಗಳನ್ನು ಮಾಡಲಾಯಿತು. ಇದರ ಬೆನ್ನಲ್ಲೇ ಕೊಹ್ಲಿ, ಮೊಹಮ್ಮದ್ ಶಮಿ ಪರವಾಗಿ ನಿಂತರು. ಇದರ ಬೆನ್ನಲ್ಲೇ ಕೊಹ್ಲಿ ಮಗಳಿಗೆ ರೇಪ್ ಬೆದರಿಕೆಗಳು ಬಂದಿವೆ.

ದೆಹಲಿ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಮತ್ತು ಸೈಬರ್ ಕ್ರೈಂ ಬ್ರಾಂಚ್‌ಗೆ ನೋಟಿಸ್ ನೀಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಮಾಧ್ಯಮ ವರದಿಗಳ ಆಧಾರದ ಮೇಲೆ ಆಯೋಗ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿದೆ ಎಂದು ಹೇಳಿದ್ದಲ್ಲದೆ, ಈ ಪ್ರಕರಣ ಸಂಬಂಧ ಪೊಲೀಸರು ತೆಗೆದುಕೊಂಡಿರುವ ಕ್ರಮದ ಬಗ್ಗೆ ತಿಳಿಸಲು ಕೋರಿದ್ದಾರೆ ಮತ್ತು ದಾಖಲಾಗಿರುವ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ನಕಲು ಮತ್ತು ಬಂಧಿತ ಆರೋಪಿಗಳ ವಿವರಗಳನ್ನು ಕೇಳಿದ್ದಾರೆ.

ಈ ಪ್ರಕರಣದಲ್ಲಿ ಪೊಲೀಸರು ಈವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ಈ ಬಗ್ಗೆ ಕೈಗೊಂಡ ಕ್ರಮಗಳನ್ನು ವಿವರಿಸಬೇಕು ಮತ್ತು ವಿವರವಾದ ಕ್ರಮ ಕೈಗೊಂಡ ವರದಿಯನ್ನು ನೀಡಬೇಕು ಎಂದು ಕೇಳಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಪೊಲೀಸರು ನವೆಂಬರ್ 8 ರೊಳಗೆ ಮಹಿಳಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಮಲಿವಾಲ್ ಸಹಿ ಮಾಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಅತ್ಯಾಚಾರ ಬೆದರಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿ ಆರೋಪಿಯನ್ನು ಹಿಡಿದು ಕಠಿಣ ಕ್ರಮ ತೆಗೆದುಕೊಳ್ಳುವ ಆಗ್ರಹಿಸಲಾಗಿದೆ.

Leave A Reply

Your email address will not be published.