ಗೋ ಮಂತ್ರದ ಜೊತೆಗೆ ಗೋ ಪೂಜೆಯಲ್ಲಿ ಸಮಸ್ತ ದೇಶವಾಸಿಗಳು ಪಾಲ್ಗೊಳ್ಳಿ -ಗೋಸೇವಾ ಗತಿವಿಧಿ ಕರ್ನಾಟಕ

ಈ ದೀಪಾವಳಿಯ ಅಮಾವಾಸ್ಯೆ ನಂತರ ಆರಂಭವಾಗುವ ಗೋನವರಾತ್ರಿಯ ಸಂದರ್ಭದಲ್ಲಿ ಗೋ, ಜನ ರಾಷ್ಟ್ರ ಜಗತ್ ಹಿತಾಯಚ “ಶ್ರೀ ಸುರಭ್ಯೈ ನಮಃ” ಮಂತ್ರಸ್ಯ ಜಪಂ ಅಹಂ ಕರಿಷ್ಯೇ ಎಂಬ ಸಂಕಲ್ಪದೊಂದಿಗೆ ಜಪಾನುಷ್ಠಾನದಲ್ಲಿ ಸಮಸ್ತ ದೇಶವಾಸಿಗಳು ಪಾಲ್ಗೊಳ್ಳಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ ಗತಿವಿಧಿಯ ಅಖಿಲ ಭಾರತ ಸಂಯೋಜಕರಾದ ಮಾನ್ಯ ಶ್ರೀ ಅಜಿತ್ ಪ್ರಸಾದ್ ಮಹಾಪಾತ್ರರವರು ಜನತೆಯಲ್ಲಿ ಮನವಿ ಮಾಡಿದರು.

ಈ ಗೋಮಂತ್ರ ಜಪಾನುಷ್ಠಾನ ಮಾಡುವುದನ್ನು ಅನೇಕ ಪೂಜ್ಯ ಸಂತರುಗಳ ಆಶೀರ್ವಾದ ಪಡೆದು ನಿರ್ಧರಿಸಲಾಗಿದೆ. ಶ್ರೀ ಸುರಭ್ಯೈ ನಮಃ ಈ ಮಂತ್ರ ಜಪದ ಅನುಷ್ಠಾನದಿಂದ ದೇಶದಲ್ಲಿ ಗುಣಾತ್ಮಕ ವಾತಾವರಣ ನಿರ್ಮಾಣವಾಗುವುದು. ಪ್ರತಿಯೊಬ್ಬ ವ್ಯಕ್ತಿಯೂ ಶೃದ್ಧೆಯಿಂದ ಈ ಜಪವನ್ನು ಒಂದೂಕಾಲು ಲಕ್ಷ ಸಲ ಮಾಡಿದರೆ ಮಂತ್ರಸಿದ್ಧಿ ಆಗುವುದು. ವ್ಯಕ್ತಿ ಮತ್ತು ಪರಿವಾರದವರೆಲ್ಲ ಸೇರಿಯೂ ಒಂದೂಕಾಲು ಲಕ್ಷ ಜಪಮಾಡಬಹುದು. ಬರುವ ನವೆಂಬರ್ 5 ರಂದು ಗೋವರ್ಧನ ಪೂಜೆಮಾಡಿ 12ನೇ ತಾರೀಖು ಗೋಪಾಷ್ಟಮಿ ತನಕ ಜಪಾನುಷ್ಠಾನ ಮಾಡಿ 13 ನೇ ತಾರೀಖು ಸಾಧ್ಯವಾದಷ್ಟು ಕಡೆ ಜಪ ಸಂಖ್ಯೆಯ ದಶಾಂಶ ಭಾಗದಿಂದ ಹವನ ಮಾಡಿ ಗೋಗ್ರಾಸ ನೀಡಿ ಪ್ರಸಾದವನ್ನು ವಿತರಿಸಬೇಕು ಎಂಬ ವಿಧಿಯನ್ನು ತಿಳಿಸಿದರು.

ಈ ದೀಪಾವಳಿಯ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೋಮಯ ಹಣತೆಯಲ್ಲಿ ದೀಪ ಬೆಳಗಿಸಬೇಕು, ಗೋಜನ್ಯ ವಸ್ತುಗಳಿಂದ ತಯಾರಿಸಿದ ನಿತ್ಯೋಪಯೋಗಿ ವಸ್ತುಗಳನ್ನು ನಿತ್ಯ ಜೀವನದಲ್ಲಿ ಬಳಸಬೇಕು, ಗೋ ಆಧಾರಿತ ಕೃಷಿಯಲ್ಲಿ ಬೆಳೆದ ಆಹಾರ ಪದಾರ್ಥಗಳನ್ನೇ ಸೇವನೆ ಮಾಡುವ ಪ್ರಯತ್ನ ಮಾಡಬೇಕು, ಗೋಕಥಾ, ಸಾಹಿತ್ಯಗಳ ಮುಖಾಂತರ ಸಮಾಜದ ಜನರು ಗೋಸೇವಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದು ನಿವೇದನೆ ಮಾಡಿದರು. ಈ ನಿಟ್ಟಿನಲ್ಲಿ ರಾಷ್ಟ್ರದ ಎಲ್ಲ ರಾಜ್ಯಗಳಲ್ಲೂ ಚಟುವಟಿಕೆ ಪ್ರಾರಂಭವಾಗಿದ್ದು ಕರ್ನಾಟಕದಲ್ಲಿಯೂ ಗೋಮಂತ್ರ ಜಪಯಜ್ಞ ಸಮಿತಿಯ ರಚನೆಯ ಪ್ರಕ್ರಿಯೆ ನಡೆದಿದೆ.

ಶ್ರೀ ಭವರಲಾಲ ಆರ್ಯ, ರಾಜ್ಯ ಪ್ರಭಾರಿಗಳು ಪತಂಜಲಿ ಯೋಗ ಪೀಠ ಕರ್ನಾಟಕ ಇವರು ಗೋಮಂತ್ರ ಜಪಯಜ್ಞ ಸಮಿತಿಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿರುತ್ತಾರೆ. ನಾಡಿನ ಎಲ್ಲ ಪೂಜ್ಯ ಸಂತರುಗಳು ಮಾರ್ಗದರ್ಶಕ ಮಂಡಲಿಯಲ್ಲಿ ಇರುತ್ತಾರೆ. ರಾಜ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ಭವರಲಾಲ ಜೀ ಆರ್ಯರವರು ಪೂಜ್ಯ ಸಂತರುಗಳ ಮಾರ್ಗದರ್ಶನದಲ್ಲಿ ಗಣ್ಯರ ಸಂಘ-ಸಂಸ್ಥೆಗಳ, ಮಾತೃ ಮಂಡಳಿಗಳ, ಸಮಸ್ತ ಗೋಭಕ್ತರ ಸಹಕಾರದೊಂದಿಗೆ ಗೋಮಂತ್ರ ಜಪಾನುಷ್ಠಾನದ ಉದ್ದೇಶವನ್ನು ಸಾಕಾರಗೊಳಿಸಲು ನಾವೆಲ್ಲರೂ ಸಾಮೂಹಿಕ ಪ್ರಯತ್ನ ಮಾಡೋಣ ಎಂದು ಜನತೆಯಲ್ಲಿ ವಿನಂತಿಸಿದರು. ಗೋಸೇವಾ ಗತಿವಿಧಿಯ ಅಖಿಲ ಭಾರತ ಗೋ ಅನುಸಂಧಾನ ಪ್ರಮುಖರಾದ ಮಾನ್ಯ ಶ್ರೀ ಶಂಕರಲಾಲಜೀಯವರು, ಎಲ್ಲ ರೋಗಗಳಿಗೆ ಗವ್ಯೌಷಧಗಳು ಇದ್ದು ಇದರ ಉಪಯೋಗ ರಾಷ್ಟ್ರದ ತುಂಬಾ ವ್ಯಾಪಕವಾಗಿ ಬೆಳೆದಿದೆ ಎಂದು ಹೇಳಿದರು.

Leave A Reply

Your email address will not be published.