ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೆನಪು ಮಾತ್ರ | ತಾಯಿಯ ಪಕ್ಕದಲ್ಲೇ ಮಣ್ಣಲ್ಲಿ ಮಣ್ಣಾದ ಕರುನಾಡ ‘ಯುವರತ್ನ’

ಪುನೀತ್ ರಾಜ್​ಕುಮಾರ್ ಅವರ ಹಠಾತ್​ ನಿಧನ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಇಂದು ಪುನೀತ್​ ರಾಜ್​ಕುಮಾರ್ ಅವರ ಅಂತ್ಯ ಸಂಸ್ಕಾರ ನಡೆದಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್ ರಾಜ್​ಕುಮಾರ್ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಅಮ್ಮನ ಪಕ್ಕದಲ್ಲೇ ಕರುನಾಡಿನ ‘ಯುವರತ್ನ‘ ಚಿರನಿದ್ರೆಗೆ ಜಾರಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದ್ದು, ಅಂತಿಮ ವಿಧಿವಿಧಾನಗಳನ್ನು ರಾಘವೇಂದ್ರ ರಾಜಕುಮಾರ್ ಪುತ್ರ ವಿನಯ್ ರಾಜಕುಮಾರ್ ನೆರವೇರಿಸಿದ್ದಾರೆ. ಈಡಿಗ ಸಂಪ್ರದಾಯದಂತೆ ಪುನೀತ್ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ.

ಪಾರ್ಥಿವ ಶರೀರದ ಎದುರು ಪೊಲೀಸ್ ಬ್ಯಾಂಡ್ ನುಡಿಸಿ, ಕುಶಾಲತೋಪು ಹಾರಿಸಿ ಗೌರವ ವಂದನೆ ಸಲ್ಲಿಸಿದ ನಂತರ ಕುಟುಂಬದವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಲಾಗಿದೆ.

ಇಂದು ಮುಂಜಾನೆ 4.28ಕ್ಕೆ ಕಂಠೀರವ ಸ್ಟೇಡಿಯಂಗೆ ಸಿಎಂ ಆಗಮಿಸಿ, 4.34ಕ್ಕೆ ವೇದಿಕೆ ಬಳಿ ತೆರಳಿ ಶಿವಣ್ಣ ಜೊತೆ ಮಾತುಕತೆ ನಡೆಸಿದರು. ನಂತರ ಪುನೀತ್ ಗೆ ಅಂತಿಮ ನಮನ ಸಲ್ಲಿಸಿ ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸಿದರು. ಬಳಿಕ 4.43ಕ್ಕೆ ಅಂತಿಮ ಯಾತ್ರೆ ಆರಂಭವಾಯಿತು. ಅಂತಿಮ ಯಾತ್ರೆ ವೇಳೆ ಒಟ್ಟು 10 ಪೊಲೀಸ್ ಬೈಕ್ ಗಳ ಎಸ್ಕಾರ್ಟ್ ನಿಯೋಜನೆ ಮಾಡಲಾಗಿತ್ತು. 5.30ಕ್ಕೆ ಯಶವಂತುರದಿಂದ ಮೃತದೇಹ ಪಾಸ್ ಆಗಿದ್ದು, 5.44ಕ್ಕೆ ಸ್ಟುಡಿಯೋಗೆ ತಲುಪಿತು. 5.52ಕ್ಕೆ ತೆರೆದ ವಾಹನದಿಂದ ಪುನೀತ್ ಮೃತದೇಹ ಇಳಿಸಿದ್ದು, 6.10ಕ್ಕೆ ಸಿಎಂ ಆಗಮಿಸಿದರು. 6.17 ಕ್ಕೆ ಸರ್ಕಾರದಿಂದ ಗೌರವ ವಂದನೆ ಸಲ್ಲಿಸಲಾಯಿತು.
ಕುಟುಂಬದವರು, ಬಂಧುಗಳು ಪೂಜೆ ಸಲ್ಲಿಸಿದ ನಂತರ ತಂದೆ, ತಾಯಿ ಸಮಾಧಿ ಸಮೀಪದಲ್ಲಿ ಪುನೀತ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ರಾಜ್ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಪುನೀತ್ ರಾಜಕುಮಾರ್ ಪತ್ನಿ, ಪುತ್ರಿಯರು ಕಣ್ಣೀರಿಟ್ಟಿದ್ದಾರೆ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಕೊನೆಯ ಬಾರಿಗೆ ತಮ್ಮನನ್ನು ಕಣ್ಣುಂಬಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಂಧು ಬಾಂಧವರು ಕೊನೆಯ ಬಾರಿ ಮುಖ ನೋಡಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ಅಲ್ಲಿದ್ದವರ ಕಣ್ಣಾಲಿಗಳೆಲ್ಲಾ ಒದ್ದೆಯಾಗಿವೆ.

Leave A Reply

Your email address will not be published.