ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮತ್ಸ್ಯ ಗ್ರಾಮ ನಿರ್ಮಾಣ-ಮಟ್ಟಾರು ರತ್ನಾಕರ ಹೆಗ್ಡೆ

ಮಂಗಳೂರು : ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸೋಲಾರ್ ಮೂಲಕ ಒಣಮೀನು ತಯಾರಿ, ಮತ್ಸ್ಯ ಗ್ರಾಮ ನಿರ್ಮಾಣ ಮಾಡುವುದು, ಕುಚ್ಚಲಕ್ಕಿಗೆ ಜಿಯೋ ಟ್ಯಾಗ್ ಕೊಡುವ ಯೋಜನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ತಿಳಿಸಿದರು.

ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲಾರ್ ಮೂಲಕ ಒಣಮೀನು ತಯಾರಿಯ ಯೋಜನೆಗೆ ಸಂಬಂಧಿಸಿದಂತೆ ಪ್ರಾಧಿಕಾರ ಉತ್ಸುಕವಾಗಿದೆ.

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಈ ಯೋಜನೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.ಸೋಲಾರ್ ಮೂಲಕ ಒಣಮೀನು ತಯಾರಿಯಿಂದ ಒಣಮೀನಿನ ಗುಣಮಟ್ಟದ ಜೊತೆಗೆ ಬೇಡಿಕೆ ಹೆಚ್ಚಾಗಲಿದೆ. ಈ ಯೋಜನೆಗಾಗಿ ಮಲ್ಪೆಯಲ್ಲಿ 20 ಸೆಂಟ್ಸ್ ಜಾಗದಲ್ಲಿ ಅಂದಾಜು 2 ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಲಾಗುವುದು. ಈ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಮತ್ಸ್ಯ ಸಂಪದ ಕಾರ್ಯಕ್ರಮದಡಿಯಲ್ಲಿ ಮತ್ಸ್ಯ ಗ್ರಾಮ ನಿರ್ಮಾಣ ಮಾಡುವ ಪ್ರಸ್ತಾವನೆಯಿದೆ. ಸುಮಾರು 5 ಎಕರೆ ಜಾಗದಲ್ಲಿ ಮೀನುಗಾರಿಕಾ ಚಟುವಟಿಕೆಗಳಾದ ಮೀನು ಹಿಡಿದು ಬಂದು ಸಗಟು ಮತ್ತು ರಿಟೈಲ್ ಮಾರಾಟ, ಒಣಮೀನು ತಯಾರಿ, ಬಲೆ ನಿರ್ಮಾಣ, ಕೋಲ್ಡ್ ಸ್ಟೋರೇಜ್ ಮೊದಲಾದ ಕಾರ್ಯಗಳನ್ನು ಇಲ್ಲಿ ಮಾಡಲಾಗುವುದು.ಮಂಗಳೂರಿನ ಸಸಿಹಿತ್ಲುವಿನಲ್ಲಿ ಇದನ್ನು ಮಾಡುವ ಚಿಂತನೆಯಿದೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿಯು ಇದರ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಇದೆ ಎಂದರು. ಇನ್ನೂ ಕರಾವಳಿಯ ಕುಚ್ಚಲಕ್ಕಿಗೆ ಜಿಯೋ ಟ್ಯಾಗ್ ಮಾನ್ಯತೆಗಾಗಿ ಪ್ರಕ್ರಿಯೆ ನಡೆಸಲು‌ ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸಮುದ್ರ ನೀರಿನ ಗುಣಮಟ್ಟ ಪರಿಶೀಲನೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಗೋವಾದ ಮೂಲಕ ಕರ್ನಾಟಕದ ಎಲ್ಲಾ ಮೂರು ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ನೀರಿನ ಮಟ್ಟದ ವಿಶ್ಲೇಷಣೆಯನ್ನು ನಡೆಸಲು ಯೋಜಿಸಲಾಗಿದೆ.ಈ ನಿಟ್ಟಿನಲ್ಲಿ ಎಲ್ಲಾ ಮೂರು ಕರಾವಳಿ ಜಿಲ್ಲೆಗಳ ಸಂಬಂಧಪಟ್ಟ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.

Leave A Reply

Your email address will not be published.