ಇನ್ನು ಮುಂದೆ ಹಾಲಿನ ಕಲಬೆರಕೆಗೆ ಬೀಳಲಿದೆ ಕಡಿವಾಣ | ಹಾಲಿನ ಕಲಬೆರಕೆ ಪತ್ತೆಹಚ್ಚುಲು ನೂತನ ವಿಧಾನವನ್ನು ಆವಿಷ್ಕರಿಸಿದ ಬೆಂಗಳೂರಿನ ವಿಜ್ಞಾನಿಗಳು

ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಕಲಬೆರಕೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಹಾಲಿಗೆ ರಾಸಾಯನಿಕಗಳ ಕಲಬೆರಕೆ ಪಿಡುಗಾಗಿ ಕಾಡುತ್ತಿದೆ. ನಾವು ಆರೋಗ್ಯಕರ ಎಂದು ಕುಡಿದ ಹಾಲು ಅದು ಅಮೃತವಾಗಿರದೆ, ಅದನ್ನು ವಿಷವಾಗಿಸಿರುತ್ತಾರೆ. ಇದೀಗ ಇದರ ಪತ್ತೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ(ಐಐಎಸ್‌ಸಿ) ವಿಜ್ಞಾನಿಗಳು ನೂತನ ವಿಧಾನ ಆವಿಷ್ಕರಿಸಿದ್ದಾರೆ.

ಹಾಲಿಗೆ ನೀರು ಮಾತ್ರವಲ್ಲದೆ, ಅಪಾಯಕಾರಿ ಅಂಶಗಳ ಸೇರಿಸಲಾಗುತ್ತಿದ್ದು, ಐಐಎಸ್‌ಸಿಯ ಇಬ್ಬರು ಸಂಶೋಧಕರು ನಡೆಸಿರುವ ಆವಿಷ್ಕಾರವು ಈ ನಿಟ್ಟಿನಲ್ಲಿ ಸುಲಭ ಉಪಾಯವನ್ನು ಒದಗಿಸಿಕೊಡುವ ಭರವಸೆ ನೀಡಿದೆ. ಹಾಲಿಗೆ ನೀರು ಮಿಶ್ರಣ ಮಾಡಿದರೆ ಅದನ್ನು ಪತ್ತೆ ಹಚ್ಚಲು ಲ್ಯಾಕ್ಟೋಮೀಟರ್ ಬಳಕೆ ಮಾಡಲಾಗುತ್ತದೆ ಹಾಗೂ ಹಾಲಿನ ಘನೀಕರಿಸುವ ಬಿಂದು ವಿಧಾನವನ್ನು ಹೆಚ್ಚಾಗಿ ಬಳಕೆ ಮಾಡುತ್ತದೆ. ಆದರೆ ಈ ವಿಧಾನದಲ್ಲಿ ಸಾಕಷ್ಟು ಮಿತಿಗಳಿವೆ. ಒಟ್ಟು ಹಾಲಿನ ಶೇ.3.5 ನೀರಿನ ಮಿಶ್ರಣವನ್ನಷ್ಟೆ ಘನೀಕರಣ ವಿಧಾನದಿಂದ ಪತ್ತೆ ಹಚ್ಚಬಹುದು. ಹೆಚ್ಚು ನಿಖರತೆ ಹೊಂದಿರುವ ಬಯೋಮಾಸ್ ವಿಧಾನವಿದ್ದರೂ ಅದು ಹೆಚ್ಚು ದುಬಾರಿ ಹಾಗೂ ಕಾಲಕ್ರಮೇಣ ಅದರ ನಿಖರತೆ ಕಡಿಮೆ ಆಗುತ್ತದೆ.

ಆದರೆ ಇದೀಗ ಐಐಎಸ್ ಸಿಯಲ್ಲಿ ಸ್ನಾತಕೋತ್ತರ ಸಂಶೋಧಕ ವೀರ್‌ಕೇಶ್ವರ್ ಕುಮಾರ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಸ್ಮಿತಾ ದಾಸ್ ನಡೆಸಿರುವ ಮಾದರಿಯಲ್ಲಿ ಶೇ.30ರವರೆಗೆ ನೀರಿನ ಮಿಶ್ರಣವನ್ನು ಪತ್ತೆ ಮಾಡಲಿದ್ದು, ಸಂಶೋಧನಾ ಪ್ರಬಂಧವು ಪ್ರಸಿದ್ಧ ನಿಯತಕಾಲಿಕ ಎಸಿಎಸ್ ಒಮೇಗಾದಲ್ಲಿ ಪ್ರಕಟವಾಗಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ನೀರಿನ ಹೆಚ್ಚು ಮಿಶ್ರಣದಿಂದ ಹಾಲು ತಿಳಿಯಾಗಿ, ಬಿಳಿಯ ಬಣ್ಣ ಕಡಿಮೆಯಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಹೆಚ್ಚಾಗಿ ಯೂರಿಯಾ ಬೆರೆಸಲಾಗುತ್ತದೆ. ಯೂರಿಯಾವನ್ನು ನಿಯಮಿತವಾಗಿ ಸೇವಿಸುವುದರಿಂದ ಯಕೃತ್ತು, ಮೂತ್ರಪಿಂಡ ಹಾಗೂ ಹೃದಯದ ಸಹಜ ಕಾರ್ಯಕ್ಕೆ ಧಕ್ಕೆಯಾಗಿ ಅನಾರೋಗ್ಯಕ್ಕೀಡಾಗುತ್ತವೆ. ಇದೀಗ ಐಐಎಸ್‌ಸಿ ವಿಜ್ಞಾನಿಗಳು ಸಂಶೋಧಿಸಿರುವ ವಿಧಾನವು ಕೇವಲ ಶೇ.0.4 ಪ್ರಮಾಣದ ಯೂರಿಯಾ ಮಿಶ್ರಣವಾಗಿದ್ದರೂ ಪತ್ತೆ ಮಾಡಬಹುದಾಗಿದೆ.

ಆವಿಗೊಳಿಸುವಿಕೆ ವಿಧಾನ:

ಸೂಚಿತ ಪ್ರಮಾಣದ ಹಾಲನ್ನು ನಿರ್ದಿಷ್ಟ ಸ್ಥಿತಿಯಲ್ಲಿ ಆವಿಗೊಳಿಸುವ ಸರಳ ವಿಧಾನ ಇದಾಗಿದೆ. ಹಾಲು ಆವಿಯಾದ ನಂತರ ತಳಭಾಗದಲ್ಲಿ ಉಳಿದುಕೊಳ್ಳುವ ಗುರುತು ಹಾಗೂ ವಿನ್ಯಾಸಗಳನ್ನು ಅಧ್ಯಯನ ನಡೆಸಿ ಅದರ ಆಧಾರದಲ್ಲಿ ಕಲಬೆರಕೆ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಬಹುದು. ಯಾವುದೇ ಕಲಬೆರಕೆ ಇಲ್ಲದ ಶುದ್ಧ ಹಾಲನ್ನು ಆವಿಯಾಗುವಂತೆ ಮಾಡಿದಾಗ ಕೊನೆಗೆ, ಮಧ್ಯಭಾಗದಲ್ಲಿ ಅಮೀಬಾ ರೀತಿಯಲ್ಲಿ ಆಕಾರವೊಂದು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಸ್ಥಳೀಯವಾಗಿ ಪಡೆದ ಹಾಲು, ತಿರುಮಲ ಹಾಲು ಹಾಗೂ ನಂದಿನ ಹಾಲಿನ ಮಾದರಿ ಪಡೆಯಲಾಗಿದೆ. ಮೂರೂ ಮಾದರಿಯಲ್ಲಿ ಅಮೀಬಾ ರೀತಿಯ ಆಕೃತಿ ಕಂಡುಬಂದಿದೆ. ಅದೇ ರೀತಿಯಲ್ಲಿ ನೀರು ಹಾಗೂ ಯೂರಿಯಾ ಸೇರಿಸಿದ ಮಾದರಿಗಳನ್ನು ಆವಿಗೊಳಿಸಲಾಗಿದೆ. ನೀರನ್ನು ಸೇರಿಸಿದ ಹಾಲಿನಲ್ಲಿ ಈ ಆಕಾರ ಸಂಪೂರ್ಣ ಮರೆಯಾಗಿದೆ. ಯೂರಿಯಾ ಬೆರೆಸಿದ ಹಾಲಿನಲ್ಲೂ ಆಕೃತಿ ಕಣ್ಮರೆಯಾಗಿದೆ. ಯೂರಿಯಾ ಕಣಗಳು ಆವಿಯಾಗುವ ಬದಲಿಗೆ ನಡುವೆ, ಸುತ್ತಲೂ ಹರಳಿನ ರೂಪದಲ್ಲಿ ಶೇಖರಣೆಯಾಗಿವೆ.

ಚಿತ್ರದ ಅಧ್ಯಯನ ವಿಧಾನ

ಈ ವಿಧಾನದಲ್ಲಿ ಶುದ್ಧ ಹಾಗೂ ಕಲಬೆರಕೆ ಹಾಲಿನ ಮಾದರಿಗಳ ಚಿತ್ರಗಳನ್ನು ದಾಖಲಿಸಿ, ಪರೀಕ್ಷಿಸಲ್ಪಡುವ ಹಾಲಿನ ಜೊತೆಗೆ ಕಂಪ್ಯೂಟರ್ ಸಹಾಯದಿಂದ ಹೋಲಿಕೆ ಮಾಡುವ ಮೂಲಕ ಕಲಬೆರಕೆ ಪ್ರಮಾಣವನ್ನು ಪತ್ತೆ ಮಾಡಬಹುದಾಗಿದೆ. ಈ ವಿಧಾನವು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಬಳಕೆ ಮಾಡಬಹುದು. ಹಾಲಿಗೆ ಮಿಶ್ರಣ ಮಾಡುವ ತೈಲ, ಡಿಟರ್ಜೆಂಟ್ ಮುತಾದವುಗಳನ್ನು ಪತ್ತೆಹಚ್ಚುವ ವಿಧಾನವನ್ನು ಮುಂದಿನ ಸಂಶೋಧನೆಗಳಲ್ಲಿ ಪತ್ತೆ ಮಾಡಲಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಏನೇ ಆಗಲಿ ಈ ರೀತಿಯ ಸಂಶೋಧನೆಗಳು ದೈನಂದಿನ ಬದುಕಿಗೆ ಹೆಚ್ಚು ಸಹಾಯಕವಾಗುತ್ತದೆ. ಅದಲ್ಲದೆ ಈ ರೀತಿಯ ಕಲಬೆರಕೆಗೂ ಕಡಿವಾಣ ಬಿದ್ದಂತಾಗುತ್ತದೆ.

Leave a Reply

error: Content is protected !!
Scroll to Top
%d bloggers like this: