ಜೇನಿನ ವಿಷ ಸಂಗ್ರಹಿಸುವಲ್ಲಿ ಯಶಸ್ವಿಯಾದ ಮಂಗಳೂರಿನ ಯುವಕ | ಜೇನಿನ ವಿಷಕ್ಕೂ ಮಾರುಕಟ್ಟೆಯಲ್ಲಿದೆಯಂತೆ ಬಹುಬೇಡಿಕೆ!!?

ಜೇನು ಸವಿಯುವುದು ಮಧುರ. ಜೇನು ಹುಳದಿಂದ ಕಡಿಸಿಕೊಳ್ಳುವುದು ಕಟು ಮಧುರ! ಮಧು ಎಂದರೇ ಜೇನು. ಜೇನು ಸವಿಯದ ಮನುಷ್ಯನಿಲ್ಲ ಎನ್ನಬಹುದು. ನಮ್ಮ ಆಯುರ್ವೇದ ಪಂಡಿತರಿಗಂತೂ ಮೂಲಿಕೆಗಳ ಜೊತೆ ತೇಯ್ದು ಕೊಡಲು ಜೇನು ಬೇಕೇ ಬೇಕು. ವಿಶ್ವದ ನಾನಾ ಕಡೆಗಳು ಹಲವು ವೈದ್ಯಕೀಯ ಪದ್ಧತಿಗಳೂ ಜೇನಿನ ಪ್ರಾಮುಖ್ಯವನ್ನು ಮಾನ್ಯ ಮಾಡಿವೆ.

ಹೂವಿನ ಮಕರಂದ ಹೀರಿ ಜೇನು ತುಪ್ಪ ಉತ್ಪಾದಿಸುವ ಜೇನುನೊಣ ಪರೋಪಕಾರಿ ಜೀವಿ. ಕರಾವಳಿ ಭಾಗದಲ್ಲಿ ಈ ಜೇನು ಕೃಷಿ ಮಾಡುವ ಅನೇಕ ಕೃಷಿಕರಿದ್ದಾರೆ. ಆದರೆ ಮಂಗಳೂರಿನ ಯುವಕನೊಬ್ಬ ಜೇನು ನೊಣಗಳಿಂದ ಜೇನು ವಿಷ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಕರಾವಳಿ ಭಾಗದಲ್ಲಿ ಜೇನುತುಪ್ಪ ಸಂಗ್ರಹಿಸುವ ಸಾಕಷ್ಟು ಕೃಷಿಕರಿದ್ದರೂ ಉಪಉತ್ಪನ್ನವಾದ ಜೇನು ವಿಷ ಸಂಗ್ರಹಿಸುವರಿಲ್ಲ.

ಆದರೆ ಮಂಗಳೂರು ಹೊರವಲಯದ ಕಿನ್ನಿಗೋಳಿಯ ಪ್ರಜ್ವಲ್ ಶೆಟ್ಟಿಗಾರ್ ಜೇನು ವಿಷ ಅಂದರೆ ಬೀ ವೇನಮ್ ಪಡೆಯುವ ಯಂತ್ರವನ್ನು ಸ್ವತಃ ತಯಾರಿಸಿ ವಿಷ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಜ್ವಲ್ ಕಳೆದೊಂದು ತಿಂಗಳಿನಿಂದ ವಿವಿಧ ಪ್ರದೇಶಗಳಲ್ಲಿ ವಿಷ ಸಂಗ್ರಹ, ನೊಣಗಳ ಚಟುವಟಿಕೆ, ಫ್ರಿಜ್‌ನಲ್ಲಿ ಕಾಪಾಡುವ ಅಧ್ಯಯನ ಮಾಡಿ ಪರಿಪೂರ್ಣ ಯಶಸ್ವಿಯಾಗಿದ್ದಾರೆ. ಸದ್ಯ ಐದು ರೀತಿಯ ಬೀ ವೆನಮ್ ಎಕ್ಸ್‌ಟ್ರಾಕ್ಟರ್ ರೆಡಿ ಮಾಡಿದ್ದಾರೆ. ಕರಾವಳಿ, ಮಲೆನಾಡಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಸೆರೆನಾ ಜೇನು ಹುಳ ತಳಿಯಿಂದ ವಿಷ ಸಂಗ್ರಹಿಸುವ ಯಂತ್ರ ಲಭ್ಯವಿಲ್ಲದ ಕಾರಣ ಸ್ವತಃ ಸಂಶೋಧನೆಗಿಳಿದು ಪ್ರತ್ಯೇಕ ಬೀ ವೆನಮ್ ಎಕ್ಸ್ಟ್ರಾಕ್ಟರ್ ಕಂಡುಹಿಡಿದಿದ್ದಾರೆ.

ಪ್ರಜ್ವಲ್ ಶೆಟ್ಟಿಗಾರ್

ಇಲ್ಲಿ ಜೇನುಪೆಟ್ಟಿಗೆಯ ಮುಂಭಾಗ ನೋಣಗಳ ಓಡಾಟ ದ್ವಾರದಲ್ಲಿ ವಿಷ ಸಂಗ್ರಹಿಸುವ ಪ್ಲೇಟ್ ಇಟ್ಟು ಬ್ಯಾಟರಿ ಮೂಲಕ ಸಣ್ಣ ವೋಲ್ವೇಜ್‌ನಲ್ಲಿ ವಿದ್ಯುತ್ ಪ್ರವಹಿಸಲಾಗುತ್ತದೆ. ನೊಣಗಳು ಪ್ಲೇಟ್ ಮೇಲೆ ಕೂತಾಗ ವೈಬ್ರೇಶನ್‌ಗೊಳಗಾಗಿ ವಿಷ ಕೊಂಡಿಯಿಂದ ಗಾಜಿನ ಪ್ಲೇಟ್ ಮೇಲೆ ಕುಟುಕುತ್ತವೆ. ಆ ವೇಳೆ ವಿಷ ಗಾಜಿನ ಮೇಲೆ ಸಂಗ್ರಹವಾಗುತ್ತದೆ. ಈ ಜೇನು ವಿಷ ಔಷಧಕ್ಕೆ ಬಳಕೆಯಾಗುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ಬೃಹತ್ ಔಷಧ ಕಂಪನಿಗಳು ದೊಡ್ಡ ಮೊತ್ತ ನೀಡಿ ಖರೀದಿಸುತ್ತವೆ. ಪುಣೆ, ದೆಹಲಿ, ಮಹಾರಾಷ್ಟ್ರದಲ್ಲಿ ವಿಷ ಸಂಗ್ರಹ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ರೈತರಿಗೆ ಅಷ್ಟೊಂದು ಮಾಹಿತಿ ಇಲ್ಲ.

ಮನುಷ್ಯನ ಚರ್ಮದ ಮೇಲೆ ಜೇನುನೊಣಗಳು ಚುಚ್ಚಿದರೆ ಅವುಗಳ ಮುಳ್ಳು ಚರ್ಮದ ಒಳಗಡೆ ಉಳಿದುಕೊಂಡು ನೊಣಗಳು ಸಾವನ್ನಪ್ಪುತ್ತವೆ. ಆದರೆ ಈ ಯಂತ್ರದಲ್ಲಿ ನೊಣಗಳ ಸಾವು, ನೋವು ಸಂಭವಿಸದು. ಮನುಷ್ಯನಲ್ಲಿ ರಕ್ತ ಉತ್ಪತ್ತಿಯಾಗುವಂತೆ ಜೇನು ನೊಣದಲ್ಲಿ ವಿಷ ಉತ್ಪತ್ತಿಯಾಗುತ್ತದೆ.

ಬ್ರೂಡ್‌ನ ನೊಣಗಳ ಸಂಖ್ಯೆ ನೋಡಿಕೊಂಡು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಅರ್ಧ ಗಂಟೆ ಗೂಡಿನ ಬಳಿ ಬೀ ವೆನಮ್ ಎಕ್ಸ್ಟ್ರಾಕ್ಟರ್ ಇಡಬಹುದು. ಬ್ರೂಡ್‌ನಲ್ಲಿ ನೊಣಗಳು ತುಂಬಿದ್ದಾಗ ಮಾತ್ರ ಜೇನು ವಿಷ ಸಂಗ್ರಹಿಸಲಾಗುತ್ತದೆ. ಇದರಿಂದ ಅವುಗಳ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆಗಳಾಗದು. ವಿಷವನ್ನು ಫ್ರೀಜ್ ಮಾಡಿ ಸಂಗ್ರಹಿಸಿಡುವುದು ದೊಡ್ಡ ಸವಾಲು. ಸ್ವಲ್ಪ ವ್ಯತ್ಯಾಸವಾದರೂ ನಮ್ಮ ಶ್ರಮ ವ್ಯರ್ಥ ಅಂತಾ ಪ್ರಜ್ವಲ್ ಶೆಟ್ಟಿಗಾರ್ ಹೇಳುತ್ತಾರೆ.

ವಿಷ ಸಂಗ್ರಹದ ಪ್ರೇಟ್‌ಗೆ ಮಾರುಕಟ್ಟೆಯಲ್ಲಿ 20 ಸಾವಿರಕ್ಕೂ ಹೆಚ್ಚು ಬೆಲೆ ಇದೆ. ಇದು ಮೆಲ್ಲಿಫೆರಾ ತಳಿಗೆ ಮಾತ್ರ ಆಗುವಂತದ್ದು. ಆದರೆ ಕರಾವಳಿ ಮಲೆನಾಡು ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಇರುವುದು ಸೆರೆನಾ ತಳಿ. ಹೀಗಾಗಿ ವಿವಿಧ ಮೂಲಗಳಿಂದ ಮಾಹಿತಿ ಪಡೆದು ಸ್ವಂತ ಪ್ರಯೋಗಕ್ಕೆ ತೊಡಗಿ ಪ್ರಜ್ವಲ್ ಯಶಸ್ವಿಯಾಗಿದ್ದಾರೆ. ಜೇನು ವಿಷಕ್ಕೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಒಂದು ಗ್ರಾಂ ವಿಷಕ್ಕೆ ಹತ್ತು ಸಾವಿರ ರೂಪಾಯಿ ಇದೆ. ಒಂದು ಕೆ.ಜಿ ವಿಷ ಸಂಗ್ರಹ ಮಾಡಿದರೆ ಒಂದು ಕೋಟಿ ರೂಪಾಯಿ ಆದಾಯ ಗಳಿಸಬಹುದು. ಆದರೆ ಅಷ್ಟೇ ಶ್ರಮ, ಅಷ್ಟೇ ನಾಜೂಕಿನಿಂದ ಕೆಲಸವನ್ನು ಮಾಡಬೇಕಾಗುತ್ತದೆ. ದೊಡ್ಡ ಸಂಖ್ಯೆಯಲ್ಲಿ ಜೇನು ಪೆಟ್ಟಿಗೆಯನ್ನು ಹೊಂದಿರುವ ಕೃಷಿಕರಿಗೆ ಸದ್ಯ ಪ್ರಜ್ವಲ್ ತಯಾರಿಸಿರುವ ಹೊಸ ತಂತ್ರಜ್ಞಾನ ವರದಾನ ಆಗಬಹುದಾಗಿದೆ.

Leave A Reply

Your email address will not be published.