ಮಂಗಳೂರು : ನಾಪತ್ತೆಯಾಗಿದ್ದ ನಾಗನ ಕಲ್ಲುಗಳು ಸಮೀಪದ ಗದ್ದೆಯಲ್ಲಿ ಪತ್ತೆ

ಮಂಗಳೂರು ನಗರದ ಕೂಳೂರಿನ ನಾಗನಕಟ್ಟೆಯಿಂದ ನಾಪತ್ತೆಯಾಗಿದ್ದ 6 ನಾಗನ ಕಲ್ಲುಗಳು (ನಾಗನ ಬಿಂಬ) ನಿನ್ನೆ ಸಮೀಪದ ಗದ್ದೆಯಲ್ಲಿ ಪತ್ತೆಯಾಗಿವೆ.

ಕೂಳೂರಿನ ನಾಗನಕಟ್ಟೆಯಲ್ಲಿ ಒಟ್ಟು 19 ನಾಗನ ಕಲ್ಲುಗಳಿದ್ದವು. ಆ ಪೈಕಿ 6 ನಾಗನಕಲ್ಲುಗಳು ಕಳೆದ ಶನಿವಾರ ನಾಪತ್ತೆಯಾಗಿದ್ದವು. ಅದಲ್ಲದೆ ಒಂದು ಕಲ್ಲನ್ನು ಒಡೆದು ಹಾನಿಗೊಳಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿರುವ ಕಾವೂರು ಪೊಲೀಸರು ಮಂಗಳವಾರ ಬೆಳಗ್ಗೆ ನಾಗನ ಕಲ್ಲಿಗಾಗಿ ಹುಡುಕಾಟ ಆರಂಭಿಸಿದ್ದರು.

ಅದರಂತೆ ನಾಗನಕಟ್ಟೆ ಸಮೀಪದ ಬಾವಿಯ ನೀರನ್ನು ಖಾಲಿ ಮಾಡಿ ಹುಡುಕಲಾಯಿತು. ಆದರೆ ಕಲ್ಲು ಪತ್ತೆಯಾಗಿರಲಿಲ್ಲ. ಬಳಿಕ ಸಮೀಪದಲ್ಲೇ ಇರುವ‌ ಗದ್ದೆಯ ನೀರು ತುಂಬಿದ ಸ್ಥಳದಲ್ಲಿ ಕಲ್ಲುಗಳು ಪತ್ತೆಯಾಗಿವೆ. ಆದರೆ ನಾಗನಕಟ್ಟೆಗೆ ಹಾನಿ ಮಾಡಿ ಕಲ್ಲುಗಳನ್ನು ಎಸೆದಿರುವ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.