ಮಹಿಳೆಯ ಕಿವಿಯೊಳಗೆ ಬಲೆ ಕಟ್ಟಿ ನವಜೀವನ ಪ್ರಾರಂಭಿಸಿದ ಜೇಡ | ಒಳಗಿದ್ದ ‘ಸ್ಪೈಡರ್ ಮ್ಯಾನ್’ ಸಂಸಾರ ನೋಡಿ ಬೆಚ್ಚಿಬಿದ್ದ ವೈದ್ಯರು !!

ಜಿರಳೆ, ಇರುವೆ, ಜೇಡ, ತಿಗಣೆ ಸೇರಿದಂತೆ ನಾನಾ ತರಹದ ಕೀಟಗಳು ನಮ್ಮ ಮನೆಯೊಳಗೆ ಮನೆ ಮಾಡುವುದುಂಟು. ಅವುಗಳ ನಾಶಕ್ಕೆ ಶತ ಪ್ರಯತ್ನ ಮಾಡಿದರೂ ಸಾಲದು. ಏಕೆಂದರೆ ಅವುಗಳು ಮತ್ತೆ ಮತ್ತೆ ಮನೆಯೊಳಗೆ ಬಂದು ವಕ್ಕರಿಸಿಕೊಳ್ಳುತ್ತವೆ ಅಲ್ಲವೇ!!

ಹೀಗಿರುವಾಗ ಮನೆಯೊಳಗೆ ಸಾಲದು ಎಂಬಂತೆ ಅವುಗಳು ಮನುಷ್ಯನ ದೇಹದೊಳಗೂ ಮನೆ ಮಾಡಿದರೆ ಹೇಗಿರುತ್ತದೆ? ಈ ಪ್ರಶ್ನೆಗೆ ಉತ್ತರ ಬೇರೆ ಯಾರಿಗೆ ಗೊತ್ತಿದೆಯೋ ಇಲ್ಲವೋ, ಚೀನಾದ ಯೀ ಎಂಬ ಮಹಿಳೆಗಂತೂ ಖಂಡಿತಾ ಗೊತ್ತು.

ಯಾಕಂತೀರಾ? ಇತ್ತೀಚೆಗಷ್ಟೆ ಆಕೆಗೆ ಅಂತಹ ಒಂದು ಅನುಭವ ಆಗಿದೆ. ಕಿವಿಯಲ್ಲೇನೋ ಕಿರಿಕಿರಿಯೆಂದು ವೈದ್ಯರ ಬಳಿ ಹೋದರೆ, ತನ್ನ ಕಿವಿಯೊಳಗೆ ಜೇಡವೊಂದು ಬೆಚ್ಚಗೆ ಮನೆ ಮಾಡಿದೆ ಎಂದು ತಿಳಿದು ಆಕೆ ಬೆಚ್ಚಿ ಬಿದ್ದಳು, ಜೊತೆಗೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ಕೂಡ.

ಅಸಲಿಗೆ ನಡೆದದ್ದು ಹೀಗೆ:

ಚೀನಾದ ಯೀ ಎಂಬ ಮಹಿಳೆಗೆ ಕಿವಿಯೊಳಗೆ ಅದೇನೋ ಕಿರಿಕಿರಿ ಆಗುತ್ತಿತ್ತು ಮತ್ತು ವಿಚಿತ್ರವಾದ ಶಬ್ದವು ಕೂಡ ಬರತೊಡಗಿತ್ತು. ವೈದ್ಯರ ಬಳಿ ಹೋಗುವ ಮೊದಲಿನ ಸಂಜೆ, ಹೊರಾಂಗಣದಲ್ಲಿ ಇದ್ದಾಗಲೇ ಆಕೆಗೆ ಮೊದಲ ಬಾರಿ ಆ ಸಮಸ್ಯೆ ಅನುಭವಕ್ಕೆ ಬಂದಿತ್ತು. ಕಿವಿಯೊಳಗಿನ ತುರಿಕೆಯನ್ನು ಇನ್ನು ಸಹಿಸಲು ಸಾಧ್ಯವೇ ಇಲ್ಲ ಎಂದೆನಿಸತೊಡಗಿದಾಗ, ಆಕೆ ತನ್ನ ಕಿವಿಗೆ ಏನೋ ಸೋಂಕು ತಗುಲಿರಬೇಕೆಂದು ವೈದ್ಯರನ್ನು ಭೇಟಿ ಮಾಡಲು ನಿರ್ಧರಿಸಿದಳು.

ವೈದ್ಯರು ಮೊದಲು ಅವಳನ್ನು ಪರೀಕ್ಷಿಸಿದಾಗ, ಕಿವಿಯಲ್ಲಿ ಏನೋ ಅಡ್ಡವಾಗಿ ಇರಬೇಕು ಎಂದು ಭಾವಿಸಿದರು. ಆದರೆ, ಸರಿಯಾಗಿ ಪರೀಕ್ಷಿಸಿ ನೋಡಿದಾಗ, ಆಕೆಯ ಕಿವಿಯ “ ಟೈಂಪನಿಕ್ ಮೆಂಬರೇನ್ ಮೇಲ್ಮೈಯಲ್ಲಿ” ಜೇಡವೊಂದು ತೆವಳುತ್ತಿರುವುದು ಕಂಡುಬಂತು.

ತಾನು ಕಿವಿಯೊಳಗಿನ ಅಡಚಣೆ ಎಂದು ಭಾವಿಸಿದ್ದು, ಬೇರೇನೂ ಅಲ್ಲ, ಕಿವಿಯ ನಾಳದಲ್ಲಿ ಡೇರೆ ಹಾಕಿಕೊಳ್ಳಲು ನಿರ್ಧರಿಸಿರುವ ಜೇಡ ಎಂಬುದನ್ನು ತಿಳಿದು ದಂಗಾದರು. ವೈದ್ಯರು ಆಕೆಯ ಕಿವಿಯೊಳಗೆ ಕ್ಯಾಮರಾ ಇರಿಸಿದಾಗ, ಜೇಡ ತೆವಳಿಕೊಂಡು ಕ್ಯಾಮರಾದ ಮಸೂರದ ಕಡೆಗೆ ಬಂತು, ಆಗ ಅದು ಇನ್ನಷ್ಟು ದೊಡ್ಡದಾಗಿ ಕಾಣಿಸಿತು.

ಆ ಜೇಡವು ಇಡೀ ರಾತ್ರಿಯನ್ನು ಮಹಿಳೆಯ ಕಿವಿಯೊಳಗೆ ಕಳೆದಿತ್ತು. ವೈದ್ಯರು, ಸಾಮಾನ್ಯವಾಗಿ ರೋಗಿಗಳ ಕಿವಿಯೊಳಗೆ ನೋಡಲು ಉಪಯೋಗಿಸುವ ಒಂದು ಸಾಧನವಾಗಿರುವ ಎಲೆಕ್ಟ್ರಿಕ್ ಓಟೋಸ್ಕೋಪ್‍ನ ಸಹಾಯದಿಂದ ಜೇಡವನ್ನು ಆ ಮಹಿಳೆಯ ಕಿವಿಯಿಂದ ಹೊರಗೆ ತೆಗೆದರು.

ಈ ಘಟನೆ ನಡೆದದ್ದು, ದಕ್ಷಿಣ ಚೀನಾದ ಹುನಾನ್ ಪ್ರಾಂತ್ಯದ ಝೂಝೌನಲ್ಲಿ. ಹಾಗಂತ , ಚೀನಾದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. 2019ರಲ್ಲಿ ಮತ್ತೊಬ್ಬ ಚೀನೀ ವ್ಯಕ್ತಿ ತನ್ನ ಕಿವಿಯಲ್ಲಿ ವಿಪರೀತ ತುರಿಕೆ ಎಂದು ವೈದ್ಯ ಬಳಿಗೆ ಹೋದರೆ, ಆ ಕಿವಿಯೊಳಗೆ ಜೀವಂತ ಜೇಡವೊಂದು ವಾಸವಾಗಿದ್ದು, ತನಗಾಗಿ ಬಲೆಯೊಂದನ್ನು ಕೂಡ ಹೆಣೆಯುತ್ತಿರುವುದು ತಿಳಿದು ಬಂತು.

ಆತನಿಗೆ ದೀರ್ಘ ಕಾಲದಿಂದ ತನ್ನ ಕಿವಿಯೊಳಗೆ ನಿರಂತರ ತೀವ್ರ ತುರಿಕೆ ಉಂಟಾಗುತ್ತಿತ್ತು. ವೈದ್ಯರು ಮೈಕ್ರೋಸ್ಕೋಪ್ ಬಳಸಿ, ಆತನ ಕಿವಿಯ ಒಳ ಭಾಗ ನೋಡಿದಾಗ, ಕಿವಿಯ ಕಾಲುವೆಯಲ್ಲಿ ಒಂದು ಬೂದು ಬಣ್ಣದ ಜೇಡ ತೆವಳುತ್ತಿರುವುದು ಗಮನಕ್ಕೆ ಬಂತು. ಕೆಲವು ಸಮಯದಿಂದ ಆತನ ಕಿವಿಯೊಳಗೆ ವಾಸವಿದ್ದ ಆ ಜೇಡವನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದರು. ಅದೃಷ್ಟವಶಾತ್, ಆತನಿಗೆ ಈ ಸಮಸ್ಯೆಯ ಕಾರಣದಿಂದ ಯಾವುದೇ ಗಾಯಗಳಾಗಿಲ್ಲ.

ಈ ರೀತಿಯ ಘಟನೆಗಳನ್ನು ಕೇಳಿದರೆ ಎಲ್ಲರಿಗೂ ಒಮ್ಮೆ ಬೆಚ್ಚಿ ಬಿದ್ದಂತಾಗುತ್ತದೆ. ಹಾಗಿದ್ದರೆ ಆ ಮಹಿಳೆಯ ಸ್ಥಿತಿ ಹೇಗಾಗಿರಬೇಡ. ಏನೇ ಆಗಲಿ ಈ ಬಗ್ಗೆ ಎಲ್ಲರೂ ಜಾಗರೂಕರಾಗಿರುವುದು ಒಳ್ಳೆಯದು. ಇಲ್ಲದಿದ್ದರೆ ಮುಂದೆ ಈ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾದೀತು.

Leave A Reply

Your email address will not be published.