ಬರೋಬ್ಬರಿ 14 ವರ್ಷಗಳ ನಂತರ ಬೆಂಕಿಪೊಟ್ಟಣದ ಬೆಲೆಯಲ್ಲಿ ಏರಿಕೆ !! | ಡಿಸೆಂಬರ್ 1 ರಿಂದ ಹೊಸ ಬೆಲೆ ಜಾರಿಗೆ

ಕೊರೋನಾ ಕಪಿ ಮುಷ್ಠಿಯಲ್ಲಿ ಸಿಲುಕಿ ಇಡೀ ವಿಶ್ವವೇ ನಲುಗಿಹೋಗಿದೆ. ಈಗ ಕೊರೋನಾದ ಪ್ರಮಾಣ ಕಡಿಮೆಯಾಗಿದೆಯಾದರೂ ಕೊರೋನಾದಿಂದ ಆದ ಬದಲಾವಣೆಗಳು ಮಾತ್ರ ಜನಸಾಮಾನ್ಯರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲಿ ಪ್ರಮುಖವಾಗಿ ಬೆಲೆ ಏರಿಕೆ ಹೊರೆಯನ್ನು ಹೊರಲಾಗದೆ ಜನರು ಒದ್ದಾಡುತ್ತಿದ್ದಾರೆ.

ಕಾಫಿ ಕುಡಿಯಲು ಹೋಟೆಲ್ ಗೆ ಹೋದರೆ ದುಬಾರಿ, ಮನೆಗೆ ಬೇಕಿರುವ ಸಾಮಾಗ್ರಿಗಳು ತರಲು ಹೋದರೆ ದುಬಾರಿ, ಮನೆಯಲ್ಲೇ ಕೂತು ಬೇಜಾರಾಗಿ, ಮನರಂಜನೆಗಾಗಿ ಸಿನಿಮಾ ನೋಡಿ ಬರೋಣ ಎಂದು ಹೋದರೆ ಅಲ್ಲೂ ದುಬಾರಿ. ಹೌದು, ಎಲ್ಲ ವಸ್ತುಗಳು ಈಗ ದುಬಾರಿಯಾಗಿದೆ. ಅಗತ್ಯ ವಸ್ತುಗಳಂತೂ ಕೇಳಲೇ ಬೇಡಿ. ಪೆಟ್ರೋಲ್- ಡೀಸೆಲ್, ಅಡುಗೆ ಅನಿಲದಿಂದ ಹಿಡಿದು ಖಾದ್ಯತೈಲ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಕಂಗಲಾಗಿದ್ದಾರೆ. ಹಾಗೆಯೇ ಇದೀಗ ನಾವು ದಿನನಿತ್ಯ ಬಳಸುವ ಒಂದು ವಸ್ತುವಿನ ಬೆಲೆ ಕೂಡ ಹೆಚ್ಚಾಗಲಿದೆ. ಕಳೆದ 14 ವರ್ಷದಿಂದ ಬೆಲೆ ಏರಿಕೆಯಾಗದ ಬೆಂಕಿ ಪೊಟ್ಟಣದ ದರ ಕೂಡ ಹೆಚ್ಚಾಗಲಿದೆ.

ಬೆಂಕಿ ಪೊಟ್ಟಣ ಈಗ 2 ರೂಪಾಯಿ

ಗ್ಯಾಸ್ ಹಚ್ಚಲು, ದೇವರ ದೀಪ ಹಚ್ಚಲು, ಸಿಗರೇಟ್​ ಹಚ್ಚಲು ಹೀಗೆ ನೂರಾರು ಕೆಲಸಗಳಿಗೆ ಬೆಂಕಿ ಪೊಟ್ಟಣ ಬೇಕೇ ಬೇಕು. ಇಷ್ಟು ದಿನ ಒಂದು ರೂಪಾಯಿಯಿಗೆ ಸಿಗುತ್ತಿದ್ದ ಬೆಂಕಿ ಪೊಟ್ಟಣ ಇನ್ನು ಮುಂದೆ 2 ರೂಪಾಯಿಯಾಗಲಿದೆ. 14 ವರ್ಷಗಳ ದೀರ್ಘಾವಧಿಯ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆಯಾಗಲಿದೆ. ಇಲ್ಲಿಯವರೆಗೂ ಬೆಂಕಿ ಪೊಟ್ಟಣದ ದರ 1 ರೂ. ಇತ್ತು. ಆದರೆ ಇದೀಗ 2 ರೂ.ಗೆ ಏರಿಕೆಯಾಗುತ್ತಿದೆ. ಈ ಹೊಸ ಬೆಲೆ ಡಿಸೆಂಬರ್ 1ರಿಂದ ಜಾರಿಯಾಗಲಿದೆ. ಈ ಬೆಲೆ ಏರಿಕೆ ನಿರ್ಧಾರವನ್ನು ಎಲ್ಲಾ ಬೆಂಕಿ ಪೊಟ್ಟಣ ಕಂಪನಿಗಳ ಒಕ್ಕೂಟ ತೆಗೆದುಕೊಂಡಿದೆ. ಹಣದುಬ್ಬರ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸಾರಿಗೆ ವೆಚ್ಚಗಳಿಂದ ಬೆಂಕಿ ಪೊಟ್ಟಣವನ್ನು 1 ರೂಪಾಯಿಯಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಬೆಂಕಿ ಪೊಟ್ಟಣ ಕಂಪನಿಗಳು ತಿಳಿಸಿವೆ.

2007ರಲ್ಲಿ ಏರಿಕೆಯಾಗಿದ್ದ ಬೆಂಕಿ ಪೊಟ್ಟಣದ ಬೆಲೆ

ಬೆಂಕಿ ಪೊಟ್ಟಣದ ಬೆಲೆಯನ್ನು 2007ರಲ್ಲಿ 50 ಪೈಸೆಯಿಂದ 1 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ 14 ವರ್ಷದ ಬಳಿಕ ಮ್ಯಾಚ್​ಬಾಕ್ಸ್​ ಬೆಲೆಯನ್ನು 2 ರೂ.ಗೆ ಹೆಚ್ಚಿಸಲು ತಮಿಳುನಾಡಿನ ಶಿವಕಾಶಿಯಲ್ಲಿರುವ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಲೆ ಏರಿಕೆಯ ಹೊಡತವೇ ಇದ್ದಕ್ಕೆ ಕಾರಣ ಎಂದು ಒಕ್ಕೂಟ ಹೇಳುತ್ತಿದೆ. ತೈಲ ದರ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರಿಂದ ಕಚ್ಚಾವಸ್ತುಗಳ ಬೆಲೆಯೂ ಏರಿಕೆ ಕಂಡಿದೆ. ಹೀಗಾಗಿ ಅನಿರ್ವಾಯವಾಗಿ ಬೆಂಕಿಪೊಟ್ಟಣದ ಬೆಲೆಯನ್ನು ಏರಿಸಬೇಕಾಗಿದೆ ಎಂದು ಬೆಂಕಿ ಪೊಟ್ಟಣ ತಯಾರಿಕಾ ಕಂಪಿನಿಗಳ ಮಾಲೀಕರು ಹೇಳಿದ್ದಾರೆ.

Leave A Reply

Your email address will not be published.