ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಮಾಧ್ಯಮ ಕಾರ್ಯಾಗಾರ

ಪುತ್ತೂರು ಅ.೨೩: ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಇದರ ವತಿಯಿಂದ ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳಿಗೆ, ‘ಸಾಮಾಜಿಕ ಜಾಲ, ವೆಬ್‌ಸೈಟ್ ಮತ್ತು ಮಾಧ್ಯಮಗಳ ಅವಶ್ಯಕತೆ ಮತ್ತು ಅನುಷ್ಠಾನ’ ಎಂಬ ವಿಷಯದ ಕುರಿತಾಗಿ, ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರಿಗಾಗಿ ಒಂದು ದಿನದ ಕಾರ್ಯಾಗಾರವು ಇಲ್ಲಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆಯಿತು. ಈ ಕಾರ್ಯಾಗಾರಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಯಂ. ಕೃಷ್ಣ ಭಟ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳಿಧರ ಕೆ. ಪ್ರಸ್ತಾವನೆಗೈದು ಸ್ವಾಗತಿಸಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಅಕ್ಷರೋಧ್ಯಮದ ಸುನಿಲ್ ಕುಲ್ಕರ್ಣಿ ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ, ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆರಂಭವಾಗಲಿರುವ ವೆಬ್ ಮೀಡಿಯಾ ‘ವಿಕಸನ ನ್ಯೂಸ್.ಇನ್’ ಗೆ ಚಾಲನೆ ನೀಡಿದರು. ಉಪ್ಪಿನಂಗಡಿಯ ಶ್ರೀರಾಮ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ರಘುರಾಮ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರದಲ್ಲಿ ವಿವಿಧ ಗೋಷ್ಠಿಗಳು ನಡೆದವು. ಮಂಗಳೂರಿನ ಅಕ್ಷರೋಧ್ಯಮದ ಸುನಿಲ್ ಕುಲ್ಕರ್ಣಿ ಶೈಕ್ಷಣಿಕವಾಗಿ ವೆಬ್‌ಸೈಟ್‌ಗಳ ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬಹುದು ಎನ್ನುವ ಕುರಿತಾಗಿ ಮಾಹಿತಿ ನೀಡಿದರು. ಪತ್ರಕರ್ತ ಬಿ.ಟಿ. ರಂಜನ್ ಮುದ್ರಣ ಮಾಧ್ಯಮದ ವರದಿಗಾರಿಕೆ ಕುರಿತಾಗಿ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಉಪನ್ಯಾಸಕ ಅಜಯ್‌ಶಾಸ್ತ್ರೀ ಸಾಮಾಜಿಕ ಜಾಲಗಳ ಕುರಿತಾಗಿ ಹಾಗೂ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ವೆಬ್ ಮೀಡಿಯಾಗಳ ಬಳಕೆಯ ಕುರಿತಾಗಿ ಮಾಹಿತಿ ನೀಡಿದರು.

ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಕಾರ್ಯದರ್ಶಿ ಶಿವಪ್ರಸಾದ್ ವಹಿಸಿದ್ದರು. ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳೀಧರ್ ಉಪಸ್ಥಿತರಿದ್ದರು.

Leave A Reply

Your email address will not be published.