ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣಕ್ಕೆ ಬಿತ್ತು ತೆರೆ!!! ಹೊಸಮಠ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದ ಅವ್ಯವಹಾರದಲ್ಲಿ ಸಿಬ್ಬಂದಿಯೇ ಆರೋಪಿ

ಕಳೆದ ಕೆಲ ಸಮಯಗಳಿಂದ ಹಲವು ಆಯಾಮಗಳನ್ನು ಹಲವು ತಿರುವುಗಳನ್ನು ಹಲವಾರು ಊಹಾಪೋಹಗಳನ್ನು ಕಂಡಿದ್ದ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿನ ಅವ್ಯವಹಾರ ಪ್ರಕರಣಕ್ಕೆ ಕೊನೆಗೂ ತೆರೆಬಿದ್ದಿದೆ.

ಅಕ್ಟೋಬರ್ 18 ರಂದು ಕುಟ್ರುಪಾಡಿ ಶಾಲಾ ವಠಾರದಲ್ಲಿ ಸಂಘದ ಅಧ್ಯಕ್ಷ ಶಶಾಂಕ್ ಗೋಖಲೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸುತ್ತಿರುವಾಗ ಅವ್ಯವಹಾರದ ಸುದ್ದಿ ಪ್ರಸ್ತಾಪವಾಗಿತ್ತು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಶಶಾಂಕ್ ಗೋಖಲೆ ಸಂಘದ ಸಿಬ್ಬಂದಿ ರಾಜೀವಿಯವರು 36,56,881 ರೂಪಾಯಿ ಹಣವನ್ನು ತನ್ನ ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಿದ್ದು, ವಿಶ್ವಾಸ ಜೊತೆಗೆ ಸಂಘಕ್ಕೆ ದ್ರೋಹ ಮಾಡಿದ ಅವರನ್ನು ಸಂಘದಿಂದ ವಜಾ ಮಾಡಲಾಗಿದೆ ಎಂದರು.ಅದಲ್ಲದೇ ಪ್ರಕರಣದ ತನಿಖೆಗೆ ನೋಟರಿ ವಕೀಲರನ್ನು ನೇಮಿಸಿದ್ದು, ಈಗಾಗಲೇ 36 ಲಕ್ಷ ಹಣವನ್ನು ರಾಜೀವಿಯಿಂದ ವಸೂಲಿ ಮಾಡಲಾಗಿದೆ ಎಂದವರು ವಿವರಿಸಿದರು.

ದಲಿತ ಮುಖಂಡರ ಮೇಲೆ ಆರೋಪ ಹೊರಿಸಿ ಠಾಣೆ ಮೆಟ್ಟಿಲೇರಿದ್ದ ಐನಾತಿ!

ಸಂಘದಲ್ಲಿನ ಅವ್ಯವಹಾರ ಕುರಿತು ಒಂದು ಮೂಲೆಯಲ್ಲಿ ಧ್ವನಿ ಏಳುತ್ತಿರುವಾಗ ಇಡೀ ಸಂಘದ ಸದಸ್ಯರ ಕಿವಿಗೆ ವಿಷಯ ತಲುಪಿತ್ತು. ಇನ್ನೇನು ತನ್ನ ಬಣ್ಣ ಬಯಲಾಗುತ್ತದೆ ಎಂದರಿತ ಸಿಬ್ಬಂದಿ ರಾಜೀವಿ, ತಾನು ಹಣ ತೆಗೆದಿದ್ದರೂ ತೆಗೆದ ಹಣವನ್ನು ದಲಿತ ಮುಖಂಡರೊಬ್ಬರಿಗೆ ನೀಡಿದ್ದಾಗಿ ಹೇಳಿಕೆ ನೀಡಿದ್ದರು. ಕಳೆದ ವರ್ಷ ಮೃತಪಟ್ಟ ದಲಿತ ಮುಖಂಡರೊಬ್ಬರ ಮೇಲೆ ಆರೋಪ ಹೊರಿಸಿ ತಾನು ಬಚಾವ್ ಆಗಬಯಸಿದ್ದ ಸಿಬ್ಬಂದಿ ತೋರಿಕೆಗೆ ಠಾಣೆ ಮೆಟ್ಟಿಲನ್ನೂ ಏರಿದ್ದರು. ಅವ್ಯವಹಾರದ ಸುದ್ದಿ ಇಡೀ ಕಡಬ ತಾಲೂಕು ಸಹಿತ ಹಲವೆಡೆ ಹಬ್ಬಿತ್ತು. ಸದ್ಯ ಪ್ರಕರಣದ ನೈಜ ಆರೋಪಿಯ ಬಣ್ಣ ಬಯಲಾಗಿದೆ.

ವಾರ್ಷಿಕ ಸಭೆಯಲ್ಲಿ ಮಾಜಿ ನಿರ್ದೇಶಕರ ಸಹಿತ ಸಂಘದ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.