ಅತ್ಯಾಧುನಿಕ ಪ್ರಕ್ಷೇಪಕ ಕ್ಷಿಪಣಿ(ಎಸ್ ಎಲ್ ಬಿಎಂ)ಯ ಯಶಸ್ವಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಸಬ್ ಮೆರಿನ್ ನಿಂದ ಉಡಾಯಿಸುವ ಅತ್ಯಾಧುನಿಕ ಪ್ರಕ್ಷೇಪಕ ಕ್ಷಿಪಣಿ(ಎಸ್ ಎಲ್ ಬಿಎಂ)ಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಉತ್ತರಕೊರಿಯಾ ದೃಢಪಡಿಸಿದ್ದು ಕ್ಷಿಪಣಿ ಉಡಾವಣೆಯ ಕುರಿತ ಹಲವು ಫೋಟೋ ಗಳನ್ನು ಬುಧವಾರ ಬಿಡುಗಡೆಗೊಳಿಸಿದೆ.

ಅತ್ಯಾಧುನಿಕ ತಂತ್ರಜ್ಞಾನದ ನಿಯಂತ್ರಣ ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿರುವ ಕ್ಷಿಪಣಿ ಇದಾಗಿದ್ದು 5 ವರ್ಷದ ಹಿಂದೆ ದೇಶದ ಪ್ರಥಮ ಎಸ್ ಎಲ್ ಬಿಎಂ ಉಡ್ಡಯನ ನಡೆಸಿದ್ದ ಪೂರ್ವಕರಾವಳಿ ತೀರದಲ್ಲೇ ಮತ್ತೆ ಉಡ್ಡಯನ ಕಾರ್ಯ ಯಶಸ್ವಿಯಾಗಿದೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ(ಕೆಸಿಎನ್ಎ) ‘ ವರದಿ ಮಾಡಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳು ತನ್ನ ವಿರುದ್ಧ ದ್ವೇಷದ ಕಾರ್ಯನೀತಿ ಮುಂದುವರಿಸಿರುವುದರಿಂದ ದೇಶದ ಸುರಕ್ಷತೆಗೆ ಮತ್ತು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಸೇನೆಯ ಬಲವರ್ಧನೆ ಅಗತ್ಯವಾಗಿದೆ ಎಂದು ಉತ್ತರಕೊರಿಯಾ ಅಧ್ಯಕ್ಷ ಕಿಮ್ ಜಾಂಗ್‌ಉನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಸಿಂಪೊ ನಗರದ ಬಳಿ ನಡೆಸಲಾದ ಈ ಉಡಾವಣೆ ಸೆಪ್ಟೆಂಬರ್ ಬಳಿಕದ 5ನೇ ಕ್ಷಿಪಣಿ ಪ್ರಯೋಗವಾಗಿದೆ ಮತ್ತು ಈ ವರ್ಷ ನಡೆಸಿರುವ 8ನೇ ಕ್ಷಿಪಣಿ ಪರೀಕ್ಷೆಯಾಗಿದೆ. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಗೆ ವಿಶ್ವಸಂಸ್ಥೆ ನಿರ್ಬಂಧ ಹೇರಿದ್ದರೂ ಆ ದೇಶ ಕ್ಷಿಪಣಿ ಪರೀಕ್ಷೆಯನ್ನು ಮುಂದುವರಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿತ್ತು. ಈ ಮಧ್ಯೆ, ಬುಧವಾರ ಉತ್ತರಕೊರಿಯಾದ ವಿಷಯಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ತುರ್ತು ಸಭೆ ನಡೆಸಿದೆ ಎಂದು ವರದಿಯಾಗಿದೆ.

Leave A Reply

Your email address will not be published.