ವೈದ್ಯಲೋಕದಲ್ಲಿ ನಡೆದಿದೆ ಹೊಸ ಪ್ರಯೋಗ | ಮೊಟ್ಟಮೊದಲ ಬಾರಿಗೆ ಮನುಷ್ಯನಿಗೆ ಹಂದಿಯ ಕಿಡ್ನಿ ಕಸಿ!!

ವೈದ್ಯಲೋಕದಲ್ಲಿ ದಿನಕ್ಕೊಂದು ಹೊಸ ಕಸಿ ಪ್ರಯೋಗಗಳು ಆಗುತ್ತಿರುತ್ತವೆ. ತಂತ್ರಜ್ಞಾನ ಮುಂದುವರೆದಷ್ಟು ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಹಾಗೆಯೇ ನ್ಯೂಯಾರ್ಕ್ ನಲ್ಲಿ ಹೊಸ ಪ್ರಯೋಗವೊಂದು ನಡೆದಿದ್ದು, ಅದು ಸಫಲವಾಗಿದೆ.

ಇದೇ ಮೊದಲ ಬಾರಿಗೆ ಹಂದಿಯ ಮೂತ್ರಪಿಂಡ (ಕಿಡ್ನಿ)ವನ್ನು ಮಾನವನಿಗೆ ಪ್ರಾಯೋಗಿಕವಾಗಿ ಕಸಿ ಮಾಡಲಾಗಿದೆ. ಕಿಡ್ನಿ ಅಳವಡಿಸಿದ ರೋಗಿಯ ಆರೋಗ್ಯ ಮತ್ತು ಪ್ರತಿರೋಧಕ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎಂದು ಈ ಶಸ್ತ್ರಚಿಕಿತ್ಸೆ ನಡೆಸಿದ ನ್ಯೂಯಾರ್ಕ್ ವೈದ್ಯರು ಹೇಳಿದ್ದಾರೆ.

‘ನ್ಯೂಯಾರ್ಕ್ ಲಾಂಗ್‌ಒನ್ ಹೆಲ್ತ್’ (ಎನ್‌ವೈಎಲ್) ಸಂಸ್ಥೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದ್ದು, ಮಿದುಳು ನಿಷ್ಕ್ರಿಯವಾಗಿ ಜೀವರಕ್ಷಕ ಸಾಧನದ ಮೇಲೆ ಜೀವಂತವಿರುವ ಮಹಿಳೆಗೆ ವಂಶವಾಹಿ ಪರಿವರ್ತಿಸಲಾದ ಹಂದಿ ಕಿಡ್ನಿ ಕಸಿ ಮಾಡಲಾಗಿದೆ. ಇದರಿಂದ ಹಂದಿಯ ಕಿಡ್ನಿಯನ್ನು ಮಾನವ ದೇಹ ತಕ್ಷಣಕ್ಕೆ ತಿರಸ್ಕರಿಸುವುದಿಲ್ಲ ಎಂಬುದು ಸಿದ್ಧವಾಗಿದೆ ಎಂದು ಎನ್‌ವೈಎಲ್ ಸಂಸ್ಥೆ ತಿಳಿಸಿದೆ. ಕಿಡ್ನಿ ಕಸಿಯಾದ ಮೇಲೆ ಮೂರು ದಿನ ಅದನ್ನು ಆಕೆಯ ದೇಹದ ಹೊರಗೆ ನಿರ್ವಹಿಸಲಾಯಿತು. ಅಗತ್ಯ ಪ್ರಮಾಣದಷ್ಟು ಮೂತ್ರ ಆಕೆಯಿಂದ ಹೊರಬಂತು. ಯಾವುದೇ ಸಮಸ್ಯೆ ಆಗಿಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಲಾಯಿತು. ಈ ಪ್ರಯೋಗಾತ್ಮಕ ಶಸ್ತ್ರಚಿಕಿತ್ಸೆ ನಡೆಸುವುದಕ್ಕೂ ಮೊದಲು ಮಿದುಳು ನಿಷ್ಕ್ರಿಯವಾದ ಮಹಿಳೆಯ ಕುಟುಂಬದವರ ಒಪ್ಪಿಗೆಯನ್ನು ಪಡೆಯಲಾಯಿತು ಎಂದು ಎನ್‌ವೈಎಲ್ ವಿವರಿಸಿದೆ.

ಮಹತ್ವದ ಪ್ರಯೋಗ:

ಮಿದುಳು ನಿಷ್ಕ್ರಿಯ ಮಹಿಳೆಯ ಮೂತ್ರಪಿಂಡ ಕಳಪೆಯಾಗಿತ್ತು. ಅಸಹಜವಾಗಿ ಕಾರ್ಯನಿರ್ವಹಿಸುತ್ತಿತ್ತು. ಹಂದಿ ಕಿಡ್ನಿ ಅಳವಡಿಸಿದ ನಂತರ ಅದರ ಕಾರ್ಯ ಸಹಜವಾಗಿ ನಡೆಯಲು ಆರಂಭಿಸಿತು ಎಂದು ನ್ಯೂಯಾರ್ಕ್ ಲಾಂಗ್‌ಒನ್ ಹೆಲ್ತ್ ಸಂಶೋಧನ ತಂಡದ ಮುಖ್ಯಸ್ಥ ಡಾ. ರಾಬರ್ಟ್ ಮಾಂಟೊಮೆರಿ ಹೇಳಿದ್ದಾರೆ.

ಮಾನವರಿಗೆ ಪ್ರಾಣಿಗಳ ಅಂಗಗಳನ್ನು ಜೋಡಿಸುವ ಬಗ್ಗೆ ಸಂಶೋಧನೆಗಳು ದಶಕದಿಂದ ನಡೆಯುತ್ತಿವೆ. ಆದರೆ, ಕಸಿ ಮಾಡಿದ ತಕ್ಷಣ ಮಾನವ ದೇಹ ಅದನ್ನು ತಿರಸ್ಕರಿಸಿದ ನಿದರ್ಶನವೇ ಹೆಚ್ಚು. ರಾಬರ್ಟ್ ಅವರ ತಂಡ ಈ ನಿಟ್ಟಿನಲ್ಲಿ ಮೊದಲ ಹಂತದ ಯಶಸ್ಸನ್ನು ಗಳಿಸಿದೆ. ಹಂದಿ ಕಿಡ್ನಿಯನ್ನು ಮಾನವನ ದೇಹ ತಕ್ಷಣ ತಿರಸ್ಕರಿಸದಿರುವುದು ಮಹತ್ತರ ಬೆಳವಣಿಗೆ ಆಗಿದೆ. ತಳಿ ಮಾರ್ಪಡಿಸಿದ ಹಂದಿಯ ಕಿಡ್ನಿಗೆ ‘ಗಾಲ್ ಸೇಫ್’ ಎಂದು ಹೆಸರಿಸಲಾಗಿದೆ. ಈ ಪ್ರಯೋಗವನ್ನು ಯುನೈಟೆಡ್ ಕಾರ್ಪ್ಸ್ ರಿವಿವಿಕಾರ್ ಯುನಿಟ್ (ಯುಟಿಎಚ್ಆರ್.ಒ) ಮಾಡಿದೆ.

Leave A Reply

Your email address will not be published.