ಮುಸ್ಲಿಂ ಮದುವೆಯ ಬಗ್ಗೆ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್ | ಮುಸ್ಲಿಂ ವಿವಾಹ ಹಿಂದೂ ವಿವಾಹದಂತೆ ಸಂಸ್ಕಾರವಲ್ಲ, ಕೇವಲ ಒಪ್ಪಂದವೆಂದ ನ್ಯಾಯಾಲಯ!!

ಮುಸ್ಲಿಂ ಮದುವೆಯ ಬಳಿಕ ನಡೆಯುವ ತಲಾಖ್ ಅಥವಾ ವಿಚ್ಚೇದನ ಸಮಸ್ಯೆಯ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಮಸೂದೆ ಜಾರಿಗೆ ತಂದಿದೆ. ಇದು ಮುಸ್ಲಿಂ ಹೆಣ್ಣುಮಕ್ಕಳ ಜೀವನಕ್ಕೆ ನೆರವಾಗಿದೆ. ಇದರಿಂದ ಇದೀಗ ಅದೆಷ್ಟೋ ಹೆಣ್ಣು ಮಕ್ಕಳ ಜೀವನ ಸುಗಮ ಹಾದಿಯಲ್ಲಿ ಸಾಗುತ್ತಿದೆ.

ಆದರೆ ತ್ರಿವಳಿ ತಲಾಖ್ ಮಸೂದೆ ಜಾರಿಗೆ ಬರುವ ಮುನ್ನ ಕೋರ್ಟ್ ಮೆಟ್ಟಿಲೇರಿದ ಹಲವು ಪ್ರಕರಣಗಳು ಇನ್ನು ಇತ್ಯರ್ಥಗೊಂಡಿಲ್ಲ. ಈ ಕುರಿತು ಪ್ರಕರಣ ಒಂದರ ತೀರ್ಪು ನೀಡುವಾಗ ಮುಸ್ಲಿಂ ಮದುವೆ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಹಿಂದೂ ವಿವಾಹದ ರೀತಿಯ ಸಂಸ್ಕಾರ ಮುಸ್ಲಿಂ ಮದುವೆಯಲ್ಲಿ ಇಲ್ಲ. ಮುಸ್ಲಿಂ ಮದುವೆ ಒಪ್ಪಂದ ಮಾತ್ರ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಮುಸ್ಲಿಂ ಮದುವೆ ಹಲವು ಅರ್ಥಗಳ ಒಪ್ಪಂದವಾಗಿದೆ. ಹಿಂದೂ ವಿವಾಹದಂತೆ ಒಂದು ಸಂಸ್ಕಾರವಲ್ಲ. ಹೀಗಾಗಿ ವಿಚ್ಛೇದನ ವೇಳೆ ಉದ್ಭವಿಸುವ ಹಕ್ಕುಗಳು ಹಾಗೂ ಬಾಧ್ಯತೆಗಳಿಗೆ ಸೂಕ್ತ ಪರಿಹಾರ ಒದಗಿಸಲು ಅಡೆತಡೆಗಳಿವೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಎಜಾಜುರ್ ರೆಹಮಾನ್ ಹಾಗೂ ಸಾಯಿರಾ ಬಾನು ಪ್ರಕರಣ ವಿಚಾರ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಆಗಸ್ಟ್ 12, 2011ರಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಅಡೀಶನಲ್ ಪ್ರಿನ್ಸಿಪಲ್ ಜಡ್ಜ್ ನೀಡಿದ ಆದೇಶವನ್ನು ರದ್ದು ಗೊಳಿಸುವಂತೆ ಕೋರಿ ಎಜಾಜೂರ್ ರೆಹಮಾನ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಈ ಮಹತ್ವದ ಅಂಶವನ್ನು ಉಲ್ಲೇಖಿಸಿದೆ.

1991ರ ನವೆಂಬರ್ 25 ರಂದು ರೆಹಮಾನ್ ಪತ್ನಿ ಸಾಯಿರಾ ಬಾನುಗೆ ತಲಾಖ್ ಮೂಲಕ ವಿಚ್ಛೇದನ ನೀಡಿದ್ದರು. ಮುಸ್ಲಿಂ ಸಂಪ್ರದಾಯದಂತೆ 5,000 ರೂಪಾಯಿ ಮೆಹರ ನೀಡಿ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ರಹೆಮಾನ್ ಮತ್ತೊಂದು ವಿವಾಹವಾಗಿದ್ದಾರೆ. ವರ್ಷಗಳ ಬಳಿಕ ಮಗುವಿನ ತಂದೆಯಾಗಿದ್ದಾರೆ. ಇತ್ತ ಸಾಯಿರಾ ಬಾನು ಆಗಸ್ಟ್ 24, 2002ರಂದು ನಿರ್ವಹಣೆ ವೆಚ್ಚ ನೀಡಬೇಕು ಎಂದು ಸಿವಿಲ್ ಮೊಕದ್ದಮೆ ಹೊಡಿದ್ದರು. ಸಾಯಿರಾ ಬಾನು ಪ್ರಕರಣ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಮಾಸಿಕ ನಿರ್ವಹಣೆಗೆ ಮಾಸಿಕ 3,000 ರೂಪಾಯಿ ನೀಡಬೇಕು ಎಂದು ಸೂಚಿಸಿತ್ತು. ಸಾಯಿರಾ ಬಾನು ಮರು ವಿವಾಹವಾಗುವವರೆಗೆ ಅಥವಾ ಸಾಯಿರಾ ಬಾನು ಮರಣದವರೆಗೆ ಮಾಸಿಕ ನಿರ್ವಹಣೆ ವೆಚ್ಚ ನೀಡಬೇಕು ಎಂದು ಆದೇಶಿಸಿತ್ತು.

ಆದೇಶ ರದ್ದುಗೊಳಿಸುವಂತೆ ಕೋರಿದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ದೀಕ್ಷಿತ್, ಮುಸ್ಲಿಂ ವಿವಾಹ ಒಂದು ಸಂಸ್ಕಾರವಲ್ಲ, ವಿಚ್ಚೇದನದಿಂದ ವಿವಾಹದ ಎಲ್ಲಾ ಕಟ್ಟುಪಾಡುಗಳು ಮುರಿದುಬೀಳುತ್ತದೆ. ಮುಸ್ಲಿಮರ ವಿವಾಹವೂ ಒಪ್ಪಂದವಾಗಿದೆ. ಹೀಗಾಗಿ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ ಸಂಪ್ರದಾಯದಂತೆ ಸಂಸ್ಕಾರಯುತ ಮದುವೆ ಅಲ್ಲದ ಕಾರಣ, ಕೆಲ ನ್ಯಾಯಯುತ ಬಾಧ್ಯತೆಗೆ ಕಾರಣವಾಗುತ್ತಿದೆ. ಜೊತೆಗೆ ಹೊಸ ಬಾಧ್ಯತೆಗಳು ಕೂಡ ಉದ್ಭವಿಸುವ ಸಾಧ್ಯತೆಗಳಿವೆ. ವಿಚ್ಛೇದನದಿಂದ ನಿರ್ಗತಿಕರಾಗಿರುವ ಮಾಜಿ ಪತ್ನಿಗೆ ಜೀವನಾಂಶ ನೀಡುವುದು ವ್ಯಕ್ತಿಯ ಕರ್ತವ್ಯವಾಗಿದೆ. ಆದರೆ ಮುಸ್ಲಿಂ ತಲಾಖ್ ಇಲ್ಲಿ ಕೆಲ ತೊಡಕುಗಳನ್ನು ಮುಂದಿಡುತ್ತದೆ ಎಂದು ಜಸ್ಚೀಸ್ ದೀಕ್ಷಿತ್ ಹೇಳಿದ್ದಾರೆ.

ಮಾಜಿ ಪತ್ನಿಯ ನಿರ್ವಹಣಾ ಹಕ್ಕು ಇದ್ದತ್‌ಗಿಂತ ವಿಸ್ತರಿಸುವುದಿಲ್ಲ. ಇಸ್ಲಾಮಿಕ್ ನ್ಯಾಯಾಶಾಸ್ತ್ರ ಇದನ್ನು ಹೆಬ್ಬೆರಳಿನ ನಿಯಮ ಎಂದು ಪರಿಗಣಿಸುವುದಿಲ್ಲ. ಮಾಜಿ ಪತ್ನಿಗೆ ಪಾವತಿಸುವ ಮೆಹರ್ ಮೊತ್ತದ ಆಧಾರದ ಮೇಲೆ ಅರ್ಹವಾದ ಮೊತ್ತವಾಗಿರಲಿದೆ ಅಥವಾ ಅಸಮರ್ಪಕ ಮೊತ್ತವಾಗಬಲ್ಲದು ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದ್ದಾರೆ.

Leave A Reply

Your email address will not be published.