ಮಗುವನ್ನು ನೋಡಿಕೊಳ್ಳಲೆಂದು ಬಿಟ್ಟಿದ್ದ ಕೆಲಸದಾಳುವಿನಿಂದಲೇ ಕೂಸಿನ ಕಿಡ್ನಾಪ್!|ಮಗು ಬೇಕಾದರೆ 1.10 ಕೋಟಿ ಹಣ ಕೊಡುವಂತೆ ತಾಯಿಗೆ ಡಿಮ್ಯಾಂಡ್

ದೂರವಿರುವ ಶತ್ರುವನ್ನಾದರೂ ನಂಬಬಹುದು, ಆದರೆ ಹತ್ತಿರವಿದ್ದುಕೊಂಡೇ ನಗುಮುಖ ತೋರಿಸಿ ಮೋಸ ಮಾಡುವವರನ್ನು ನಂಬಬಾರದು ಎಂಬ ಮಾತಿದೆ. ನಾವು ನಂಬಿದವರೇ ಹೆಚ್ಚಾಗಿ ನಮಗೆ ನಂಬಿಕೆ ದ್ರೋಹ ಬಗೆಯುತ್ತಾರೆ. ಇಂತಹ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇರುತ್ತವೆ. ದೆಹಲಿಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.

ಮಗುವನ್ನು ನೋಡಿಕೊಳ್ಳಲು ಕೆಲಸಕ್ಕೆ ಸೇರಿಸಿಕೊಂಡಿದ್ದವನೇ, ಆ ಮಗುವನ್ನ ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ. ಅದು ಬರೋಬ್ಬರಿ ಒಂದು ಕೋಟಿ ಹತ್ತು ಲಕ್ಷಕ್ಕೆ ಆತ ಡಿಮ್ಯಾಂಡ್​ ಮಾಡಿದ್ದ. ತಾವೇ ಆತನ ಒಳ್ಳೆಯ ಗುಣಗಳನ್ನು ನೋಡಿ ಮಗುವನ್ನು ನೋಡಿಕೊಳ್ಳಲು ಕೆಲಸ ಕೊಟ್ಟವರು, ಇದೀಗ ಆತನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯಲು ಹೋದ ಆತ ಪೊಲೀಸರ ಅತಿಥಿಯಾಗಿದ್ದಾನೆ. ಹಣದ ಆಸೆಗೆ ಬಿದ್ದು, ದುಡುಕಿ ತಪ್ಪು ಮಾಡಿ ಈಗ ಜೈಲು ಸೇರಿದ್ದಾನೆ. ತನ್ನ ಭವಿಷ್ಯವನ್ನ ತನ್ನ ಕೈಯಾರೆ ಹಾಳು ಮಾಡಿಕೊಂಡಿದ್ದಾನೆ.

ದೆಹಲಿಯ ಗಾಂಧಿನಗರದ ಸುಭಾಷ್​ ಮೊಹೊಲ್ಲಾ ಏರಿಯಾದಲ್ಲಿ ವಾಸಿಸುತ್ತಿರುವ ಕುಟುಂಬವೊಂದು ತಮ್ಮ ಮಗುವನ್ನು ನೋಡಿಕೊಳ್ಳುವ ಕೆಲಸವನ್ನು ಒಂದು ತಿಂಗಳ ಹಿಂದೆ ಮೋನು ಎಂಬಾತನಿಗೆ ನೀಡಿದ್ದರು. ಆದರೆ ಮೋನು ಕೇವಲ 9 ದಿನಗಳ ಕಾಲ ಕೆಲಸವನ್ನು ಮಾಡಿ ಕಡಿಮೆ ಸಂಬಳ ಎಂದು ಬಿಟ್ಟು ಹೋಗಿದ್ದ. ಬಳಿಕ ಆರು ದಿನಗಳ ಹಿಂದೆ ಮಗುವಿನ ಕುಟುಂಬಸ್ಥರು ಮತ್ತೆ ಮೋನುಗೆ ಕರೆ ಮಾಡಿ ಹೆಚ್ಚು ಸಂಬಳ ನೀಡುತ್ತೇವೆ, ಕೆಲಸಕ್ಕೆ ಬಾ ಎಂದು ಹೇಳಿದ್ದರು.

ಸಂಬಳ ಕಡಿಮೆ ಎಂದು ಕೆಲಸ ಬಿಟ್ಟು ಹೋಗಿದ್ದ ಮೋನುವನ್ನು ಮತ್ತೆ ಹೆಚ್ಚಿನ ಸಂಬಳಕ್ಕೆ ಮಗುವಿನ ತಾಯಿ ಕರೆಸಿದ್ದಳು. ಮೋನು ಕೆಲಸ ಬಿಟ್ಟು ಹೋದಾಗ 7 ವರ್ಷದ ಮಗುವಿಗೆ ಬೇಜಾರಾಗಿತ್ತು ಎಂಬ ಕಾರಣಕ್ಕೆ ಆತನನ್ನು ವಾಪಸ್​​ ಕರೆಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮೋನು, ಮಗುವನ್ನು ಆಟವಾಡಿಸಲು ಒಂದಷ್ಟು ದೂರು ವಾಕಿಂಗ್​ಗೆ ಕರೆದುಕೊಂಡು ಹೋಗಿ ಬರುವುದಾಗಿ ತಾಯಿ ಬಳಿ ಹೇಳಿದ್ದ. ಈತನನ್ನು ನಂಬಿದ್ದ ತಾಯಿ ಮಗುವನ್ನು ಮೋನು ಜೊತೆ ಕಳಿಸಿಕೊಟ್ಟಿದ್ದರು.

ಮಗುವನ್ನು ಜೊತೆಗೆ ಕರೆದುಕೊಂಡು ಹೋದ ಮೋನು, 5 ನಿಮಿಷಗಳ ಬಳಿಕ ಮಗುವಿನ ತಾಯಿ ಫೋನ್​​ಗೆ ಕರೆಮಾಡಿದ್ದ. 1.10 ಕೋಟಿ ಹಣ ಕೊಟ್ಟರೆ ಮಾತ್ರ ನಿಮ್ಮ ಮಗ ಮನೆಗೆ ಬರುತ್ತಾನೆ. ಇಲ್ಲವಾದರೆ ಆತನನ್ನು ಮರೆತುಬಿಡಿ ಎಂದು ಬೆದರಿಸಿದ್ದ. ಮೊದಲು ಮೋನು ಹೇಳಿದ್ದನ್ನು ಕೇಳಿ ತಮಾಷೆ ಎಂದುಕೊಂಡಿದ್ದರು. ಬಳಿಕ ಮತ್ತೆ ಫೋನ್ ಮಾಡಿ ಹಣಕ್ಕೆ ಡಿಮ್ಯಾಂಡ್​ ಇಟ್ಟಿದ್ದ. ಎಷ್ಟೇ ಹೊತ್ತು ಕಾದರೂ ಇಬ್ಬರು ಮನೆಗೆ ಬರಲಿಲ್ಲ. ಇದರಿಂದ ಗಾಬರಿಗೊಂಡ ಮಗುವಿನ ಕುಟುಂಬಸ್ಥರು ಹತ್ತಿರದ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡಿದ್ದರು.

ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಏರಿಯಾ ಫುಲ್​ ಸರ್ಚ್​ ಮಾಡಿದ್ದಾರೆ. 3 ಗಂಟೆಗಳ ಸತತ ಕಾಯಾಚರಣೆ ನಡೆಸಿದ ಬಳಿಕ ಆತ ಮಗು ಜೊತೆ ಗೋಕುಲ್​ಪುರ್​ ಮೆಟ್ರೋ ಸ್ಟೇಷನ್​ ಬಳಿ ಇರುವ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಸುರಕ್ಷಿತವಾಗಿ ಮಗುವನ್ನು ರಕ್ಷಿಸಿ ಕುಟುಂಬಸ್ಥರಿಗೆ ನೀಡಿದ್ದಾರೆ. ಇದಕ್ಕೆ ಹೇಳುವುದು ನಂಬಿದವರೇ ಹೆಚ್ಚು ದ್ರೋಹ ಬಗೆಯುತ್ತಾರೆ ಎಂದು. ಕೆಲಸ ನೀಡುವ ಮೊದಲು ಆತನ ಹಿನ್ನಲೆ ವಿಚಾರಿಸಿದ್ದರೆ ಈ ರೀತಿ ಘಟನೆ ನಡೆಯುತ್ತಿರಲಿಲ್ಲ.

Leave A Reply

Your email address will not be published.