ಇನ್ನು ಮುಂದೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ‘ಜೀವಶಾಸ್ತ್ರ’ ವನ್ನು ಒಂದು ವಿಷಯವಾಗಿ ಬೋಧನೆ ಕಡ್ಡಾಯ | ಈ ಶೈಕ್ಷಣಿಕ ವರ್ಷದಿಂದಲೇ ಜಾರಿ- ವಿಟಿಯು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ವಿಷಯವೊಂದನ್ನು ಅಭ್ಯಸಿಸಲು ತೀರ್ಮಾನ ಮಾಡಿದೆ.
ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ತಾಂತ್ರಿಕ ಕೋರ್ಸ್‌ಗಳ ಜೊತೆಗೆ ‘ಜೀವಶಾಸ್ತ್ರ’ ವನ್ನು ಒಂದು ವಿಷಯವಾಗಿ ಅಭ್ಯಾಸ ನಡೆಸಬೇಕಿದೆ.

ಹೌದು. ವಿಟಿಯು ಈ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರವನ್ನು ಬೋಧನೆ ಕಡ್ಡಾಯ ಮಾಡಿದೆ. ಜೀವಶಾಸ್ತ್ರದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವ ಉದ್ದೇಶದಿಂದ ‘ಬಯೋಲಜಿ ಆಫ್ ಇಂಜಿನಿಯರ್ಸ್’ ಎಂಬ ವಿಷಯವನ್ನು 4ನೇ ಸೆಮಿಸ್ಟರ್‌ಗೆ ಸೇರ್ಪಡೆ ಮಾಡುತ್ತಿದೆ.

ಕೊರೋನಾ ವೇಳೆಯಲ್ಲಿ ಎಷ್ಟು ವೈದ್ಯರು ಮತ್ತು ಇಂಜಿನಿಯರ್‌ಗಳು ಯಾವ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಜ್ಞಾನ ಕೂಡ ಮುಖ್ಯ ಎಂಬುದನ್ನು ಅರಿತು ನಾವು ಕೋರ್ಸ್ ಆರಂಭಿಸಿದ್ದೇವೆ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯೋಗಾವಕಾಶ:

ವೈದ್ಯಕೀಯ ಉತ್ಪನ್ನಗಳ ಉತ್ಪಾದನೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಾತ್ರ ಅತ್ಯವಶ್ಯಕವಾಗಿದೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಸಹ ಹೆಚ್ಚಿವೆ. ಇಂದು ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನವನ್ನು ಸಾಕಷ್ಟು ವೈದ್ಯಕೀಯ ಶಾಸ್ತ್ರದ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವೈದ್ಯಕೀಯ ಜ್ಞಾನ ಸಿಕ್ಕಾಗ ಮತ್ತಷ್ಟು ಉತ್ತಮವಾದ ಉತ್ಪನ್ನಗಳನ್ನು ರೂಪಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಸ್ ಪರಿಚಯಿಸುತ್ತಿದೆ ಎಂದು ವಿವಿ ವಿಷಯ ತಜ್ಞರು ತಿಳಿಸಿದ್ದಾರೆ.

ಕೈಗಾರಿಕೋದ್ಯಮಿಗಳಿಂದಲೇ ಪಠ್ಯಕ್ರಮವನ್ನು ವಿವಿ ಸಿದ್ಧಪಡಿಸಿದೆ. ಈ ಉದ್ಯಮಿಗಳೇ ವಿದ್ಯಾರ್ಥಿಗಳಿಗೆ ತರಗತಿಯನ್ನು ತೆಗೆದುಕೊಳ್ಳಲಿದ್ದಾರೆ. ಅಲ್ಲದೆ, ಹೊರಗಡೆಯಿಂದಲೂ ವಿಷಯ ತಜ್ಞರನ್ನು ಕರೆಯಿಸಿ ಬೋಧನೆ ಮಾಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

Leave A Reply

Your email address will not be published.