ಪಾಪ ಪಾಂಡು ಖ್ಯಾತಿಯ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ಇನ್ನಿಲ್ಲ

ಬೆಂಗಳೂರು :ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಪಾಪ ಪಾಂಡು ಧಾರವಾಹಿ ಮೂಲತ ಅತ್ಯಂತ ಜನಪ್ರೀಯ ಖ್ಯಾತಿಯನ್ನು ಗಳಿಸಿದ್ದಂತ, ಹಿರಿಯ ಕಲಾವಿದ ಶಂಕರ್ ರಾವ್ (84) ಇಂದು ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಹಿರಿಯ ನಟ ಶಂಕರ್ ರಾವ್ ಅವರಿಗೆ ಚಿಕಿತ್ಸೆ ಕೂಡ ಕೊಡಿಸಲಾಗುತ್ತಿತ್ತು.ಅಂತಹ ಅವರು ಇಂದು ಬೆಳಿಗ್ಗೆ 6.30ಕ್ಕೆ ತಮ್ಮ ಅರಕೆರೆಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಪಾಪ ಪಾಂಡು ಖ್ಯಾತಿಯ ಹಿರಿಯ ನಟ ಶಂಕರ್ ರಾವ್ ಇನ್ನಿಲ್ಲವಾಗಿದ್ದಾರೆ.

ಪಾಪ ಪಾಂಡು ಧಾರಾವಾಹಿಯ ಪಾತ್ರದಿಂದ ಜನಮನ್ನಣೆಗಳಿಸಿದ್ದರು. ಕನ್ನಡದ ಹಲವಾರು ಜನಪ್ರಿಯ ನಟರೊಂದಿಗೆ ನಟಿಸಿ ಕನ್ನಡದ ಸಿನಿ ಪ್ರೇಕ್ಷಕರನ್ನು ತಮ್ಮ ಹಾಸ್ಯದ ಮೂಲಕ ರಂಜಿಸಿದ ಕಲಾವಿದ ಇಂದು ಇಹಲೋಕ ತ್ಯಜಿಸಿದ್ದಾರೆ. ಕಲಾವಿದನ ಆಗಲಿಕೆಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಅಂದಹಾಗೇ, ಶಾಲಾ ದಿನಗಳಿಂದಲೂ ನಟನೆಯಲ್ಲಿ ತುಂಬಾನೇ ಆಸಕ್ತಿಯನ್ನು ಹೊಂದಿದ್ದಂತ ಕಲಾವಿಧ ಶಂಕರ್ ರಾವ್, ಹವ್ಯಾಸಿ ರಂಗಭೂಮಿಯಲ್ಲಿ ಕಲಾವಿಧರಾಗಿ ಪಾದಾರ್ಪಣೆ ಮಾಡಿದ್ದರು. ಹಲವಾರು ಸಿನಿಮಾ ಸೇರಿದಂತೆ ನಾಟಕಗಳಲ್ಲಿ ನಟಿಸಿದ್ದರು.ಸಿನಿಮಾ ರಂಗದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಪ್ಪು, ಧ್ರುವ, ಖುಷಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದರು. ಶಂಕರ್ ರಾವ್ ಅವರ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ.

Leave A Reply

Your email address will not be published.