ಸರ್ಕಾರಿ ನೌಕರರಿಗೆ ಇನ್ನುಮುಂದೆ ವರದಕ್ಷಿಣೆ ಪಡೆದುಕೊಂಡಿಲ್ಲ ಎಂಬ ಅಫಿಡೆವಿಟ್ ಸಲ್ಲಿಸುವುದು ಕಡ್ಡಾಯ | ಹೊಸ ಕಠಿಣ ಕಾನೂನು ಜಾರಿಗೆ ಮಾಡಿದ ಸರ್ಕಾರ

ವರದಕ್ಷಿಣೆ ಎಂಬುದು ಇಂದು ನಿನ್ನೆಯ ಕಥೆಯಲ್ಲ. ಅನಾದಿಕಾಲದಿಂದಲೂ ಸಮಾಜದಲ್ಲಿ ಬಹುದೊಡ್ಡ ಪಿಡುಗಾಗಿಯೇ ಉಳಿದಿದೆ. ದೇಶದಲ್ಲಿ ಅದೆಷ್ಟೋ ಕಾನೂನುಗಳು ಜಾರಿಗೆ ಬಂದರೂ ಈ ಪಿಡುಗನ್ನು ನಿರ್ಮೂಲನೆ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ.

ಹೀಗಿರುವಾಗ ವರದಕ್ಷಿಣೆ ನಿಷೇಧದ ಕುರಿತಾಗಿ ಉತ್ತರಪ್ರದೇಶ ಸರ್ಕಾರವು ಹೊಸ ಕಾನೂನನ್ನು ಜಾರಿ ಮಾಡಿದೆ. ಇದರಿಂದ ಅದೆಷ್ಟೋ ವರದಕ್ಷಿಣೆ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. ಇಂತಹ ಕಠಿಣ ಕಾನೂನನ್ನು ಉತ್ತರ ಪ್ರದೇಶ ರಾಜ್ಯ ಹೊರತರುವಲ್ಲಿ ಇದೀಗ ಯಶಸ್ವಿಯಾಗಿದೆ.

ಆ ಕಾನೂನು ಏನೆಂದರೆ, ಮದುವೆಯಾದ ಸಂದರ್ಭದಲ್ಲಿ ವರದಕ್ಷಿಣೆ ಪಡೆದುಕೊಂಡಿಲ್ಲ ಎಂದು ಅಫಿಡೆವಿಟ್ ಸಲ್ಲಿಸುವಂತೆ ಮಹಿಳಾ ಕಲ್ಯಾಣ ಇಲಾಖೆ ಸರ್ಕಾರಿ ನೌಕರರಿಗೆ ಸುತ್ತೋಲೆಯಲ್ಲಿ ಸೂಚಿಸಿದೆ. ಉತ್ತರ ಪ್ರದೇಶ ಸರ್ಕಾರವು ಸರ್ಕಾರಿ ನೌಕರರಿಗೆ ಈ ಹೊಸ ಆದೇಶವನ್ನು ಹೊರಡಿಸಿದೆ.

ಏಪ್ರಿಲ್ 31, 2004ರ ನಂತರ ಮದುವೆಯಾದ ಎಲ್ಲ ಸರ್ಕಾರಿ ನೌಕರರು ಅಫಿಡೆವಿಟ್ ಅನ್ನು ಅಕ್ಟೋಬರ್ 18 ಒಳಗೆ ಸಲ್ಲಿಸಬೇಕೆಂದು ಅ. 12ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ರಾಜ್ಯದ ಎಲ್ಲ ಇಲಾಖೆಯ ಮುಖ್ಯಸ್ಥರಿಗೆ, ಆಯುಕ್ತರಿಗೆ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಮಹಿಳಾ ಕಲ್ಯಾಣ ಇಲಾಖೆ ಸುತ್ತೋಲೆ ತಲುಪಿಸಿದ್ದು, ಪ್ರತಿಯೊಬ್ಬರು ಅಫಿಡೆವಿಟ್ ಸಲ್ಲಿಸುವಂತೆ ಆಯಾ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಮನವಿ ಮಾಡಿದೆ.

ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದ ಎಲ್ಲಾ ಸರ್ಕಾರಿ ನೌಕರರು ಕೆಲಸಕ್ಕೆ ಸೇರುವ ಸಮಯದಲ್ಲಿ ದೃಢೀಕೃತ ಹೇಳಿಕೆಯನ್ನು ಕಡ್ಡಾಯವಾಗಿ ನೀಡುತ್ತಾರೆ. ಉತ್ತರ ಪ್ರದೇಶವು 1999ರಲ್ಲಿ ವರದಕ್ಷಿಣೆ ನಿಷೇಧ ನಿಯಮಗಳನ್ನು ಫೆಡರಲ್ ಕಾನೂನಿನ ಅನುಸಾರವಾಗಿ ರೂಪಿಸಿತು. ನಿಯಮಗಳನ್ನು ಮಾರ್ಚ್ 31, 2004 ರಂದು ತಿದ್ದುಪಡಿ ಮಾಡಲಾಯಿತು, ನಿರ್ದಿಷ್ಟವಾಗಿ ನಿಯಮ 5ರಲ್ಲಿ ಪ್ರತಿ ಸರ್ಕಾರಿ ನೌಕರನು ತನ್ನ ನೇಮಕಾತಿಯ ಸಮಯದಲ್ಲಿ, ತನ್ನ ಮದುವೆಯಲ್ಲಿ ಯಾವುದೇ ವರದಕ್ಷಿಣೆ ಸ್ವೀಕರಿಸಿಲ್ಲ ಎಂದು ನೇಮಕಾತಿ ಪ್ರಾಧಿಕಾರಕ್ಕೆ ಸ್ವಯಂ ದೃಢೀಕರಿಸಿದ ಪ್ರಮಾಣಪತ್ರವನ್ನು ಒದಗಿಸಬೇಕು.

ವರದಕ್ಷಿಣೆ ಎಂಬುದು ಭಾರತದಲ್ಲಿ ಇಂದಿಗೂ ಜೀವಂತವಾಗಿರುವ ಪೆಡಂಭೂತವಾಗಿದೆ. ಇದು ಭಾರತದಲ್ಲಿ ಅಕ್ರಮವಾಗಿದ್ದರೂ ಕೂಡ ಸಂಪೂರ್ಣವಾಗಿ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಉಡುಗೊರೆ ರೂಪದಲ್ಲಿ ವರದಕ್ಷಿಣೆ ಪಡೆಯುವುದು ಇದೀಗ ಸಾಮಾನ್ಯವಾಗಿದೆ. ವರದಕ್ಷಿಣೆ ಪ್ರಕರಣದಡಿಯಲ್ಲಿ ಆರೋಪ ಸಾಬೀತಾದಲ್ಲಿ ಅವರಿಗೆ 15 ಸಾವಿರ ರೂ. ದಂಡ ಮತ್ತು 5 ವರ್ಷದವರೆ ಶಿಕ್ಷೆ ವಿಧಿಸಲಾಗುತ್ತದೆ.

ಆದರೆ ವರದಕ್ಷಿಣೆಯನ್ನು ಹೋಗಲಾಡಿಸಲು ಉತ್ತರಪ್ರದೇಶ ಸರ್ಕಾರ ಕೈಗೊಂಡ ಕಾನೂನು ಎಲ್ಲಾ ರಾಜ್ಯಗಳಲ್ಲೂ ಜಾರಿಯಾದರೆ ವರದಕ್ಷಿಣೆ ಪಡೆಯುವವರ ಸಂಖ್ಯೆ ಕಡಿಮೆಯಾಗಬಹುದು. ಇಂತಹ ದಿಟ್ಟ ನಿರ್ಧಾರ ಕೈಗೊಳ್ಳಲು ನಮ್ಮ ರಾಜ್ಯ ಸರ್ಕಾರವು ಮನಸ್ಸು ಮಾಡಬೇಕಾಗಿದೆ. ಮಾಡಿದ್ದಲ್ಲಿ ನಮ್ಮಲ್ಲಿ ಕೂಡ ವರದಕ್ಷಿಣೆ ಪಡೆಯುವವರ ಸಂಖ್ಯೆ ಆದಷ್ಟು ಬೇಗ ಕ್ಷೀಣಿಸಬಹುದು.

Leave A Reply

Your email address will not be published.