ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ

ಕಾವೇರಿ ನದಿಯ ಉಗಮ ಸ್ಥಳವಾದ ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್ 17 ರಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಲಿದೆ.

ತೀರ್ಥ ಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ ನೀಡಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಲಕಾವೇರಿ ಮತ್ತು ಭಾಗಮಂಡಲ ಇದಕ್ಕಾಗಿ ಸಜ್ಜಾಗಿದ್ದು, ಕಾವೇರಿ ತೀರ್ಥೋದ್ಭವ ಕಣ್ಣುಂಬಿಕೊಳ್ಳಲು ಭಕ್ತರು ಕಾತರಿಸಿದ್ದಾರೆ. ಕಾವೇರಿ ದರ್ಶನದ ನಂತರ ಒಂದು ತಿಂಗಳು ತಲಕಾವೇರಿ ಕ್ಷೇತ್ರದಲ್ಲಿ ಜಾತ್ರೆಯ ಸಂಭ್ರಮ ಇರಲಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಎಂ.ಪಿ.ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಎಸ್.ಎಲ್.ಭೋಜೇಗೌಡ, ಆಯನೂರು ಮಂಜುನಾಥ್, ಸಂಸದರಾದ ಪ್ರತಾಪ್ ಸಿಂಹ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷರಾದ ಪೆಮಿತ ಅವರು ಭಾಗವಹಿಸಲಿದ್ದಾರೆ.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಬೆಂಗಳೂರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಭಗಂಡೇಶ್ವರ-ತಲಕಾವೇರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ ಮೊದಲಾದವರು ಪಾಲ್ಗೊಳ್ಳುವರು.

ದರ್ಶನಕ್ಕೆ ಎಲ್ಲರಿಗೂ ಅವಕಾಶ

ಕೊಡಗು ಜಿಲ್ಲೆಯ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಮಳೆಯ ವಾತಾವರಣ ನಡುವೆಯೇ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಶಾಸಕ ಕೆ.ಜಿ. ಬೋಪಯ್ಯ ಶನಿವಾರ ಎರಡೂ ಕ್ಷೇತ್ರಗಳಿಗೂ ಭೇಟಿ ನೀಡಿ ಸಿದ್ಧತೆಯ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ”ಹಲವು ವರ್ಷಗಳ ನಂತರ ಹಗಲು ವೇಳೆ ತೀರ್ಥೋದ್ಭವ ಸಂಭವಿಸುತ್ತಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚು ಇರುವ ನಿರೀಕ್ಷೆ ಇದೆ. ಹಾಗಾಗಿ ಭಕ್ತರ ಮನಸ್ಸಿಗೆ ಮನಸ್ಸಿಗೆ ನೋವಾಗಬಾರದು ಎನ್ನುವ ಕಾರಣಕ್ಕೆ ಕೋವಿಡ್‌ ನಿಯಮವನ್ನು ಸಡಿಲ ಮಾಡಲಾಗಿದೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ತಲಕಾವೇರಿಯಲ್ಲಿ ಕೊಳದಲ್ಲಿ ಸ್ನಾನಕ್ಕೆ ಅವಕಾಶ ಇಲ್ಲ. ತಕ್ಕ ಮುಖ್ಯಸ್ಥರು, ಅರ್ಚಕರಿಗೆ ಮಾತ್ರ ಕೊಳದ ಸುತ್ತ ಅವಕಾಶ ನೀಡಲಾಗಿದೆ. ಅತಿಥಿಗಳಿಗೆ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ”ಎಂದು ಹೇಳಿದರು.

”ಕಿರು ಸಂಕ್ರಮಣದ ತನಕವೂ ಭಕ್ತರಿಗೆ ಒಂದು ತಿಂಗಳ ಕಾಲ ಕ್ಷೇತ್ರದ ಭೇಟಿಗೆ ಮುಕ್ತ ಅವಕಾಶ ಇದೆ. ಕೊಡಗು ಏಕೀಕರಣ ರಂಗದಿಂದ ಅ.17 ಮತ್ತು 18ರಂದು ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಭಕ್ತರಿಗೆ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಳೆಯ ಕಾರಣ ನದಿಯಲ್ಲಿ ಹೆಚ್ಚು ನೀರು ಇರುವುದರಿಂದ ಅಲ್ಲಲ್ಲಿ ಹಗ್ಗ ಕಟ್ಟಲಾಗಿದ್ದು, ನುರಿತ ಈಜುಗಾರರೂ ಇರಲಿದ್ದಾರೆ. 450ಕ್ಕೂ ಹೆಚ್ಚು ಪೊಲೀಸ್‌, ಗೃಹರಕ್ಷಕರನ್ನು ನಿಯೋಜಿಸಲಾಗಿದೆ. ಪಾರ್ಕಿಂಗ್‌ ವ್ಯವಸ್ಥೆಗೆ ಜಾಗ ಕಡಿಮೆ ಇರುವುದರಿಂದ ಭಕ್ತರು ಸಹಕರಿಸುವಂತೆ” ಬೋಪಯ್ಯ ಮನವಿ ಮಾಡಿದ್ದಾರೆ.

Leave A Reply

Your email address will not be published.