ಎರಡು ತಲೆ, ಮೂರು ಕಣ್ಣು ಇರುವ ಕರುವಿನ ಜನನ | ನವರಾತ್ರಿ ದಿನ ಜನಿಸಿದ್ದರಿಂದ ದುರ್ಗಾಮಾತೆಯ ಪ್ರತಿರೂಪ ಎಂದು ಕರುವಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಗ್ರಾಮಸ್ಥರು

ಪ್ರಪಂಚದಲ್ಲಿ ಒಮ್ಮೊಮ್ಮೆ ಚಿತ್ರ ವಿಚಿತ್ರವಾದ ಘಟನೆಗಳು ಸಂಭವಿಸುತ್ತಿರುತ್ತವೆ. ಅದರಲ್ಲೂ ವಿಚಿತ್ರವೆನಿಸುವ ಪ್ರಾಣಿಗಳ ಜನನವಂತೂ ಎಲ್ಲರನ್ನೂ ಒಂದು ಕ್ಷಣ ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಹಾಗೆಯೇ ಇಲ್ಲೊಂದು ವಿಶೇಷವಾದ ಕರುವಿನ ಜನನವಾಗಿದೆ.

2 ತಲೆ, ಮೂರು ಕಣ್ಣು ಇರುವ ಕರುವಿನ ಜನನವಾಗಿದೆ. ನವರಾತ್ರಿ ಸಂದರ್ಭದಲ್ಲಿಯೇ ಇಂಥಹ ವಿಚಿತ್ರ ಕರುವೊಂದು ಜನಿಸಿದ್ದರಿಂದ ದುರ್ಗಾದೇವಿಯ ಅವತಾರ ಎಂದು ಜನರು ಪೂಜೆ ಮಾಡಿರುವ ಘಟನೆ ಒರಿಸ್ಸಾದ ನಬ್ರಂಗ್​ಪುರದಲ್ಲಿ ನಡೆದಿದೆ. ಅಂತೆಯೇ ಕರುವಿನ ವಿಡಿಯೋ ಸಖತ್ ವೈರಲ್ ಆಗಿದೆ.

ನಬ್ರಂಗ್‍ಪುರದ ಧನಿರಾಂ ಅವರ ಕೊಟ್ಟಿಗೆಯಲ್ಲಿರುವ ಹಸುವಿಗೆ ಈ ಅಪರೂಪವಾದ, ವಿಶೇಷವಾದ ಕರು ಜನಿಸಿದೆ. ಈ ಕರುಗೆ ಎರಡು ತಲೆ, ಮೂರು ಕಣ್ಣುಗಳಿವೆ. ಹೀಗೆ ವಿಶೇಷವಾಗಿ ಜನಿಸಿದ ಈ ಕರುವನ್ನು ನೋಡಿದ ಹಸುವಿನ ಮಾಲೀಕ ಕೂಡ ಅಚ್ಚರಿ ಪಟ್ಟಿದ್ದಾರೆ. ಬಳಿಕ ಈ ವಿಷಯವನ್ನು ಊರಿನವರಿಗೆ ತಿಳಿಸಿದ್ದಾರೆ. ಕರು ಆರೋಗ್ಯದಿಂದಿದ್ದು, ದುರ್ಗಾ ಮಾತೆಯ ಪ್ರತಿರೂಪ ಎಂದು ಗ್ರಾಮಸ್ಥರು ಪೂಜೆ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ಧನಿರಾಂ ಈ ಹಸುವನ್ನು ಖರೀದಿಸಿದ್ದರು. ಈ ಹಸು ಇತ್ತೀಚೆಗೆ ಗರ್ಭ ಧರಿಸಿತ್ತು. ನವರಾತ್ರಿಯ ದಿನವೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಹೀಗೆ ವಿಶೇಷವಾಗಿರುವ ಈ ಕರು ಎಲ್ಲರ ಗಮನ ಸೆಳೆಯುತ್ತಿದೆ.

ಮುಕ್ಕಣ್ಣನಂತಿರುವ ಈ ಕರುವಿಗೆ ಎರಡು ತಲೆಗಳಿರುವುದರಿಂದ ಹಾಲು ಕುಡಿಯಲು ಕಷ್ಟವಾಗುತ್ತಿದೆ. ಹಸುವಿನ ಕೆಚ್ಚಲಿನಿಂದ ಕರುವಿಗೆ ಹಾಲು ಕುಡಿಯುವುದು ಕಷ್ಟವಾದ್ದರಿಂದ ಹೊರಗಿನಿಂದ ಪ್ಯಾಕೆಟ್ ಹಾಲನ್ನು ಖರೀದಿಸಿ ನೀಡಲಾಗುತ್ತಿದೆ. ಈ ಕರುವಿನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Leave A Reply

Your email address will not be published.