ಪುತ್ತೂರು: ಸಂತ ಫಿಲೋಮಿನಾ ಪ್ರೌಢಶಾಲಾ ನಿವೃತ್ತ ಶಿಕ್ಷಕ ಜೋಸೆಫ್ ಡಿ’ಮೆಲ್ಲೋ ಹೃದಯಾಘಾತದಿಂದ ನಿಧನ

ಪುತ್ತೂರು : ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಸುದೀರ್ಘ 37 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ಇತ್ತೀಚೆಗೆ ಸೇವಾ ನಿವೃತ್ತಿ ಹೊಂದಿದ ಜೋಸೆಫ್ ಡಿ’ಮೆಲ್ಲೋ(60ವ.)ರವರು ಹೃದಯಾಘಾತದಿಂದ ಅ.10 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಪುತ್ತೂರು ತಾಲೂಕಿನ ಪರ್ಲಡ್ಕ ಎಂಬಲ್ಲಿ ಡೆನ್ನಿಸ್ ಡಿ’ಮೆಲ್ಲೋ ಹಾಗೂ ಮೇರಿ ಲೋಬೋ ದಂಪತಿಯ ಏಳು ಮಕ್ಕಳಲ್ಲಿ ಹಿರಿಯವರಾಗಿ ಜನಿಸಿದ ಜೋಸೆಫ್ ಡಿ’ಮೆಲ್ಲೋರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಾಯಿದೆ ದೇವುಸ್ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಫಿಲೋಮಿನಾ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಡೆದಿದ್ದರು. ಬಳಿಕ ಮಂಗಳೂರಿನ ಸರಕಾರಿ ಬಿಎಡ್ ಕಾಲೇಜಿನಲ್ಲಿ ಬಿ.ಎಡ್ ಶಿಕ್ಷಣವನ್ನು ಪಡೆದು, 1984, ಎಪ್ರಿಲ್ 16ರಿಂದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಕ್ಲರ್ಕ್ ಕಮ್ ಟೈಪಿಸ್ಟ್ ಆಗಿ ಸೇವೆ ಸಲ್ಲಿಸಿದ್ದು, 2000, ಡಿಸೆಂಬರ್ 21 ರಿಂದ ಫಿಲೋಮಿನಾ ಪ್ರೌಢಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿ ವೃತ್ತಿಯನ್ನು ಆರಂಭಿಸಿದ್ದರು.

ಮೃತ ಜೋಸೆಫ್ ಡಿ’ಮೆಲ್ಲೋರವರು ಜ್ಯೋ’ ಡಿ’ಮೆಲ್ಲೋ ಎಂದೇ ಎಲ್ಲರಿಗೂ ಚಿರಪರಿತರು. ಸದಾ ಕ್ರಿಯಾಶೀಲತೆ, ವೃತ್ತಿ ಪ್ರಿಯತೆ ಹಾಗೂ ವೃತ್ತಿ ಬದ್ಧತೆಯನ್ನು ಹೊಂದಿರುವ ಜೋಸೆಫ್ ಡಿ’ಮೆಲ್ಲೋರವರು ಫಿಲೋಮಿನಾ ಪ್ರೌಢಶಾಲೆಯಲ್ಲಿ ಹಾಗೂ ಮಾಯಿದೆ ದೇವುಸ್ ಚರ್ಚ್‌ನಲ್ಲಿನ ಗಾಯನ ಮಂಡಳಿ(ಕೊಯರ್)ಯನ್ನು ಕಳೆದ 15 ವರ್ಷಗಳಿಂದ ಮುನ್ನೆಡೆಸುತ್ತಾ ಬಂದಿರುತ್ತಾರೆ. ಆಡಳಿತ ಸಿಬ್ಬಂದಿಯಾಗಿ ಶಾಲಾ ಆಡಳಿತ ಮತ್ತು ಲೆಕ್ಕ ಖಾತೆಗಳನ್ನು ನಿರ್ವಹಿಸುವುದು, ಅಧಿಕೃತ ಪತ್ರಗಳನ್ನು ರಚಿಸುವ ಮೂಲಕ ಟೈಪಿಂಗ್ ಕೆಲಸ ಮತ್ತು ಇಲಾಖೆಯೊಂದಿಗೆ ಪತ್ರ ವ್ಯವಹಾರ, ಕಟ್ಟಡ ಮತ್ತು ವಿದ್ಯುತ್ ಕೆಲಸದ ನಿರ್ವಹಣೆಯ ಮೇಲ್ವಿಚಾರಣೆ, ಬೋಧನಾ ಸಿಬ್ಬಂದಿಯಾಗಿ ಜಿಲ್ಲಾ ಮಟ್ಟದಪ್ರತಿಭಾಕಾರಂಜಿ’ ಸ್ಪರ್ಧೆ, ಶಾಲಾ ದಿನದ ಸಾಂಸ್ಕೃತಿಕ ಕಾರ್ಯಕ್ಕಾಗಿ ತುಳು ನಾಟಕ ನಿರ್ದೇಶನೆ, ರಾಜ್ಯಮಟ್ಟದ ತುಳು ನಾಟಕ ಸ್ಪರ್ಧೆ(ರಾಣಿಅಬ್ಬಕ್ಕ)ದಲ್ಲಿ ಅಭಿನಯ, ಮೂವತ್ತು ವರ್ಷಕ್ಕೂ ಹೆಚ್ಚು ವರ್ಷಗಳ ಕಾಲ ನಾಟಕ, ಭರತನಾಟ್ಯ ಮೇಕಪ್, ಮೈಸೂರು, ಹಾವೇರಿ ಮತ್ತು ತುಮಕೂರಿನಲ್ಲಿ ತಲಾ ೫ ದಿನಗಳ ರಾಜ್ಯ ಮಟ್ಟದ ಮಾಸ್ಟರ್ ರಿಸೋರ್ಸ್ ಪರ್ಸನ್ ತರಬೇತಿಯಲ್ಲಿ ಭಾಗವಹಿಸುವಿಕೆ, ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿ, ೧೦ನೇ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವಿಕೆ, ವಿದ್ಯಾರ್ಥಿಗಳಿಗೆ ಆಧುನಿಕ ಡಿಜಿಟಲ್ ಬೋಧನಾ ಸಾಧನಗಳನ್ನು ಬಳಕೆಯ ಅರಿವು ಮೂಡಿಸುವುದು, ಕಂಪ್ಯೂಟರ್ ಜ್ಞಾನ, ಡಿಟಿಪಿ ಮತ್ತು ಪುಟ ವಿನ್ಯಾಸಕಾರರಾಗಿಯೂ ಜೋಸೆಫ್ ಡಿ’ಮೆಲ್ಲೋರವರು ಕಾರ್ಯ ನಿರ್ವಹಿಸಿದ್ದರು.

ಮಾಯಿದೆ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಕಾರ್ಯದರ್ಶಿಯಾಗಿ, ಸದಸ್ಯರಾಗಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ, ಡೊನ್ ಬೊಸ್ಕೊ ಕ್ಲಬ್‌ನ ಮಾಸ ಪತ್ರಿಕೆ ಪುತ್ತೂರ್‍ಚೆ ನೆಕೆತ್ರ್’ ಹಾಗೂ ಮಾಯಿದೆ ದೇವುಸ್ ಚರ್ಚ್‌ನ ಪತ್ರಿಕೆಆವಯ್’ನಲ್ಲಿ ಪುಟ ವಿನ್ಯಾಸಕಾರರಾಗಿ ಸೇವೆಯನ್ನು ನೀಡಿರುತ್ತಾರೆ. ಹಲವು ಕೊಂಕಣಿ ನಾಟಕಗಳಲ್ಲಿ ಅಭಿನಯ ಹಾಗೂ ಗೀತೆ ರಚನೆ, ವೈಸಿಎಸ್ ಹಾಗೂ ವೈಸಿಎಂ ಸಚೇತಕರಾಗಿ ಜೋಸೆಫ್ ಡಿ’ಮೆಲ್ಲೋರವರು ಸೇವೆಯನ್ನು ಸಲ್ಲಿಸಿರುತ್ತಾರೆ.

ಮೃತ ಜೋಸೆಫ್ ಡಿ’ಮೆಲ್ಲೋರವರು ಪತ್ನಿ ಎಮಿಲ್ಡಾ ಕೊರೆಯಾ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

Leave A Reply

Your email address will not be published.