ಅಮಾವಾಸ್ಯೆಯಂದು ನಡೆಯಿತು ಘೋರ ದುರಂತ | ಧಾರಾಕಾರ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ ಏಳು ಮಂದಿ ಜೀವಂತ ಸಮಾಧಿ!!

ಬೆಳಗಾವಿ: ಜಿಲ್ಲೆಯಲ್ಲಿ ಭಾರಿ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ 7 ಜನ ಜೀವಂತ ಸಮಾಧಿಯಾದ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಬುಧವಾರ ರಾತ್ರಿ 8 ಗಂಟೆಗೆ ಸಂಭವಿಸಿದೆ. ಅಮಾವಾಸ್ಯೆ ದಿನ ನಡೆದ ಈ ಕರಾಳ ಘಟನೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಭೀಮಪ್ಪ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಘಟನೆಯಲ್ಲಿ ಬಡಾಲ ಅಂಕಲಗಿ ಗ್ರಾಮದ ಗಂಗವ್ವ ಖನಗಾವಿ (50), ಸತ್ಯವ್ವ ಖನಾಗಾವಿ (45), ಅರ್ಜುನ ಖನಗಾವಿ (45), ಸವಿತಾ ಖನಗಾವಿ (28), ಲಕ್ಷ್ಮೀ ಖನಗಾವಿ (15), ಪೂಜಾ ಖನಗಾವಿ (8), ಕಾಶವ್ವ ಕೊಳೆಪ್ಪನವರ (8) ಮೃತಪಟ್ಟಿದ್ದಾರೆ. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತಪಟ್ಟ ಕುಟುಂಬದವರು ಹೊಸ ಮನೆ ನಿರ್ಮಿಸುವ ಸಲುವಾಗಿ ಹಳೇ ಮನೆಯನ್ನು ಕೆಡವುತ್ತಿದ್ದರು. ಅಲ್ಲದೆ ಅದೇ ಗ್ರಾಮದಲ್ಲಿ ಪ್ರತ್ಯೇಕವಾಗಿ ಬೇರೆ ಮನೆಯಲ್ಲಿ ವಾಸವಿದ್ದರು. ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದಾಗಿ ಹಳೆಯ ಮನೆ ಕುಸಿದಿತ್ತು. ಅದನ್ನು ವೀಕ್ಷಿಸಲು ಬುಧವಾರ ರಾತ್ರಿ ಹೋದ ಸಂದರ್ಭದಲ್ಲಿ ಅದೇ ಮನೆಯ ಮತ್ತೊಂದು ಗೋಡೆ ಕುಸಿದು ಈ ದುರಂತ ಸಂಭವಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಆಂಬುಲೆನ್ಸ್​ನೊಂದಿಗೆ ಸ್ಥಳಕ್ಕೆ ತೆರಳಿದರು. ಸಂಬಂಧಿಕರಿಗೆ ಸಾಂತ್ವನ ಹೇಳಿದರಲ್ಲದೆ, ಶವ ಹೊರ ತೆಗೆಯುವ ಕಾರ್ಯಾಚರಣೆ ವೇಳೆ ತಡರಾತ್ರಿವರೆಗೆ ಗ್ರಾಮದಲ್ಲಿಯೇ ಇದ್ದರು.

ಮೃತರಿಗೆ ಸಂತಾಪ ಸೂಚಿಸಿರುವ ಸಿಎಂ ಬೊಮ್ಮಾಯಿ, ಮನೆ ಕುಸಿತದಿಂದ ಸಂಭವಿಸಿರುವ ಈ ಅನಾಹುತ ದುರದೃಷ್ಟಕರ. ಒಂದೇ ಕುಟುಂಬದ 7 ಜನರು ಸಾವನ್ನಪ್ಪಿರುವುದು ನನಗೆ ಬಹಳ ದುಃಖ ತಂದಿದೆ. ಮೊದಲಿಗೆ ನಾನು ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದಿದ್ದಾರೆ.ಅಲ್ಲದೆ ಮೃತಪಟ್ಟವರ ಕುಟುಂಬಕ್ಕೆ ತಲಾ 7 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

Leave A Reply

Your email address will not be published.