ಜೆಡಿಎಸ್‌ನ ಮಿಷನ್ 123 ಅಲ್ಲ,ಮಿಷನ್ 23 -ಬಿ.ವೈ.ವಿಜಯೇಂದ್ರ

ಕಡಬ : ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಲು ಜೆಡಿಎಸ್ ಇದೀಗ ಮಿಷನ್ 123 ಎಂಬ ಕಾರ್ಯಾಗಾರ ನಡೆಸುತ್ತಿದೆ. ಅದು ಮಿಷನ್ 123 ಅಲ್ಲ, ಬದಲಾಗಿ ಅದು ಮಿಷನ್ 23 ಅಷ್ಟೆನೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಅವರು ಬುಧವಾರ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜೆಡಿಎಸ್ ಪಕ್ಷಕ್ಕೆ ಕಡಿಮೆ ಸೀಟು ಬಂದರೆ ಸಂತಸವಾಗುತ್ತದೆ. ಯಾವುದೇ ಪಕ್ಷಕ್ಕೆ ಬಹುಮತ ಬಾರದೆ ಇದ್ದಾಗ ಅಧಿಕಾರ ಹಂಚಿಕೊಳ್ಳಲು ಸುಲಭವಾಗುವಂತೆ ಕಡಿಮೆ ಸೀಟು ಬರುವಂತೆ ನೋಡಿಕೊಳ್ಳುವುದು ಜೆಡಿಎಸ್‌ನ ಧ್ಯೇಯ. ಅವರಿಗೆ ಬಹುಮತವಂತೂ ಬರುವುದಿಲ್ಲ, ಬದಲಾಗಿ ಇತರರಿಗೂ ಬಹುಮತ ಬಾರದೆ ಇರಲಿ ಎಂದು ಪ್ರಾರ್ಥಿಸುವ ಪಕ್ಷ ಅದಾಗಿದೆ. ರಾಜ್ಯದಲ್ಲಿ ಹಂಗ್ ಎಸೆಂಬ್ಲಿ ಇರಬೇಕು ಎನ್ನುವುದು ಆ ಪಕ್ಷದ ಮಹದಾಸೆಯಾಗಿದೆ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

ಬಿಜೆಪಿ ತನ್ನ ಅಭಿವೃದ್ಧಿ ಕಾರ್ಯಗಳಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳು ಗೆಲುವಿಗೆ ಪೂರಕವಾಗಿದೆ.

ಕಾಂಗ್ರೆಸ್ ತನ್ನನ್ನು ತಾನು ಮುಗಿಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಇದೆ. ಕಾಂಗ್ರೆಸ್ ಗೆಲುವು ಕನಸಿನ ಮಾತು, ಅವರು ಅವರ ಅಸ್ತಿತ್ವ ಉಳಿಸಲು ಪ್ರಯತ್ನಿಸುವುದು ಒಳಿತು ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

Leave A Reply

Your email address will not be published.