ಕೇಂದ್ರದಿಂದ ಬಿಡುಗಡೆಯಾಗಿದೆ ಹೊಸ ಯೋಜನೆ | ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದರೆ ಇನ್ನು ಮುಂದೆ ಸಿಗಲಿದೆ ನಗದು ಬಹುಮಾನ !!

ಒಂದೆಡೆ ಮಾನವೀಯತೆಯ ಕೊರತೆ, ಮತ್ತೊಂದೆಡೆ ಪೊಲೀಸ್ ಭಯ. ಈ ಎರಡು ಕಾರಣಗಳಿಂದ ಸಾರ್ವಜನಿಕರು ಅದೆಷ್ಟೋ ಬಾರಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕುತ್ತಿದ್ದರು. ರಸ್ತೆಯ ಮೇಲೆ ಹೋಗುತ್ತಿರುವಾಗ ಅಪಘಾತವಾದರೆ ಅವರ ನೆರವಿಗೆ ಬರುವವರು ತುಂಬಾ ಅಪರೂಪ. ನೆರವು ನೀಡಲು ಹೋಗಿ ಪೊಲೀಸರು, ಕೋರ್ಟ್, ಕಚೇರಿ ಎಂದೆಲ್ಲಾ ಅಲೆದಾಡಬೇಕು, ಯಾರಿಗೆ ಬೇಕಪ್ಪಾ ಇದರ ಉಸಾಬರಿ ಎಂದುಕೊಂಡು ಆಸ್ಪತ್ರೆಗೆ ದಾಖಲು ಮಾಡುವ ಮನಸ್ಸು ಇದ್ದರೂ ನೋಡದವರ ಹಾಗೆ ಹೋಗುವವರೇ ಹೆಚ್ಚು.

ಈ ಸ್ಥಿತಿ ತುಂಬಾ ವರ್ಷಗಳ ಹಿಂದೆ ಇದ್ದದ್ದು ನಿಜ. ಆದರೆ ವರ್ಷಗಳಿಂದ ಹಿಂದೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ, ಏನೆಂದರೆ ಅಪಘಾತ ಆದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೆ ಅಂಥವರಿಗೆ ಪೊಲೀಸರು ತನಿಖೆ ನಡೆಸಲ್ಲ, ಅವರು ಕೋರ್ಟ್ ಅಲೆಯಬೇಕಾಗಿಲ್ಲ. ಆದ್ದರಿಂದ ಧೈರ್ಯವಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ನೆರವಾಗಿ ಎಂದಿತ್ತು. ಆದರೆ ಜನರಿಗೆ ಇನ್ನೂ ಭಯ ಹೋಗಿಲ್ಲ. ಇದಕ್ಕೆ ಉದಾಹರಣೆಯಾಗಿ ಹಲವಾರು ಘಟನೆಗಳನ್ನು ನಾವು ನೋಡಬಹುದಾಗಿದೆ.

ಈ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂಥ ಉಪಕಾರ ಮಾಡಿದವರಿಗೆ ನೆರವಾಗಲು ಮುಂದೆ ಬಂದಿದೆ. ನಗದು ಬಹುಮಾನವನ್ನು ಘೋಷಿಸಿದೆ. 2020ರಲ್ಲಿ ಕೊರೋನಾ, ಲಾಕ್‌ಡೌನ್ ಇತ್ಯಾದಿ ಇದ್ದರೂ ರಸ್ತೆ ಅಪಘಾತದಲ್ಲಿ 1,31,714 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರ ಗಂಭೀರತೆ ಪರಿಶೀಲಿಸಿ ಸರ್ಕಾರ ಈ ಯೋಜನೆ ರೂಪಿಸಿದೆ. ಈ ಯೋಜನೆಯಡಿ, ಜಿಲ್ಲಾಡಳಿತವು ಒಬ್ಬ ಉತ್ತಮ ನಾಗರಿಕನಿಗೆ ಒಂದು ವರ್ಷದಲ್ಲಿ ಗರಿಷ್ಠ ಐದು ಬಾರಿ ರೂ. 5000 ನಗದು ಬಹುಮಾನವನ್ನು ನೀಡುವ ಯೋಜನೆ ಇದಾಗಿದೆ. ಪ್ರತಿ ವರ್ಷ ನಡೆಯುವ ಸರ್ಕಾರಿ ಅಭಿನಂದನಾ ಸಮಾರಂಭದಲ್ಲಿ ಅವರಿಗೆ 1ಲಕ್ಷ ರೂ. ನಗದು ನೀಡಲಾಗುವುದು. ಈ ಯೋಜನೆ ಮಾರ್ಚ್ 2026 ರವರೆಗೆ ಜಾರಿಯಲ್ಲಿ ಇರಲಿದೆ.

ಕಳೆದ ವರ್ಷವೇ ಸರ್ಕಾರ ಇಂಥಹ ಉಪಕಾರ ಮಾಡುವವರಿಗೆ 5 ಸಾವಿರ ರೂವರೆಗೆ ಬಹುಮಾನ ಘೋಷಿಸಿತ್ತು. ಇದೀಗ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದರಲ್ಲಿ ಒಂದು ಲಕ್ಷ ರೂ.ವರೆಗಿನ ಬಹುಮಾನ ಘೋಷಿಸಿದೆ.

ಮಾರ್ಗಸೂಚಿಯಲ್ಲಿ ಏನಿದೆ?

ಅಪಘಾತವಾದ ಒಂದು ಗಂಟೆಯೊಳಗೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದರೆ ಅಂಥ ಒಬ್ಬ ವ್ಯಕ್ತಿಗೆ ಒಂದು ಸಮಯದಲ್ಲಿ 5000 ರೂ. ಧನಸಹಾಯ ಸಿಗಲಿದೆ. ಒಂದು ವರ್ಷದಲ್ಲಿ ಗರಿಷ್ಠ ಐದು ಬಾರಿ ಒಬ್ಬ ವ್ಯಕ್ತಿಗೆ ನೀಡಲಾಗುವುದು. ಅಂದರೆ ಒಬ್ಬ ವ್ಯಕ್ತಿ ವರ್ಷಕ್ಕೆ 25 ಸಾವಿರ ರೂ.ವರೆಗೆ ನಗದು ಬಹುಮಾನ ಪಡೆಯಬಹುದು.

ಇದೇ ಅಕ್ಟೋಬರ್ 15ರಿಂದ ಮಾರ್ಚ್, 2026 ರವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ನಗದು ಯೋಜನೆಗೆ ರಾಜ್ಯ ಸರ್ಕಾರಗಳು ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ತೆರೆಯುತ್ತವೆ. ಈ ರೀತಿ ಸಹಾಯ ಮಾಡಿದ ಬಳಿಕ ಅಂಥ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ನೀಡಿದರೆ, ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿ ಅಕ್ನಾಲೆಡ್ಜ್ಮೆಂಟ್ ನೀಡುತ್ತಾರೆ. ಜಿಲ್ಲಾಡಳಿತ ಗಾಯಾಳುವಿಗೆ ಸಹಾಯ ಮಾಡಿದ ನಾಗರಿಕನ ಹೆಸರು,ವಿಳಾಸ, ಮೊಬೈಲ್ ಸಂಖ್ಯೆ, ಘಟನೆ ಮಾಹಿತಿ ಇತ್ಯಾದಿಗಳನ್ನು ದಾಖಲಿಸಲಿದೆ. ಇದಲ್ಲದೆ, ಸ್ಥಳೀಯ ಪೊಲೀಸ್ ಅಥವಾ ಆಸ್ಪತ್ರೆ-ಆಘಾತ ಕೇಂದ್ರದ ಆಡಳಿತವು ವ್ಯಕ್ತಿಯ ಬಗ್ಗೆ ಈ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತದೆ.

Leave A Reply

Your email address will not be published.