ತನ್ನ ಧಣಿಗಾಗಿ ವರ್ಷಕ್ಕೆ 90 ಲಕ್ಷ ದುಡಿದು ಕೊಡುತ್ತಿದ್ದ, 1200 ಕೆಜಿ ತೂಕದ ದೈತ್ಯ ಸುಲ್ತಾನ್ ಧರೆಗೆ !

ಚಂಡೀಗಢ: ಬರೋಬ್ಬರಿ 1200 ಕೆಜಿ ತೂಕದ ಸುಲ್ತಾನ್ ರಾಷ್ಟ್ರವ್ಯಾಪಿಯಾಗಿ ತಾನು ಗಳಿಸಿದ್ದ ಹೆಸರು ಪಕ್ಕಕ್ಕೆ ಇಟ್ಟು ಧರಾಶಾಹಿಯಾಗಿದ್ದಾನೆ.

ಮಿರಿಮಿರಿ ಮಿಂಚುವ ಎಣ್ಣೆ ತಿಕ್ಕಿದ ಕಪ್ಪು ಮೈ, ಮಿರ್ರನೆ ಕನ್ನಡಿಯಂತೆ ಹೊಳೆಯುತ್ತಿದ್ದ ಕಣ್ಣುಗಳು, 6 ಅಡಿ ಉದ್ದದ ಅಜಾನುಬಾಹು ಸುಲ್ತಾನ್‌ನನ್ನು ನೋಡಿ ವಾವ್ ಎಂದು ಉದ್ಗರಿಸದವರೆ ಇಲ್ಲ. ಆ ಮಟ್ಟಿಗೆ ಇತ್ತು ಆತನ ದೈಹಿಕ ದಾರ್ಡ್ಯ. ಆದರೆ ಈ ಸುಲ್ತಾನ್ ಈಗ ಇಹಲೋಕ ತ್ಯಜಿಸಿದ್ದಾನೆ ! ಅಂದಹಾಗೆ ಸುಲ್ತಾನ್ ಜೋಟೆ ಒಂದು ಮುರ್ರಾ ಜಾತಿಗೆ ಸೇರಿದ ಒಂದು ಕೋಣದ ಹೆಸರು. ಹರಿಯಾಣದ ಈ ಸುಲ್ತಾನ್ ಇಷ್ಟೊಂದು ಪ್ರಸಿದ್ಧಿಗೆ ಬರಲು ಅದರ ಬೆಲೆ ಕಾರಣ ಅದರ ದೈತ್ಯ ದೇಹ. 1200 ಕೆಜಿ ತೂಗುತ್ತಿದ್ದ ಮತ್ತದರ ಬರೋಬ್ಬರಿ 21 ಕೋಟಿಗೂ ಅಧಿಕ ಮೌಲ್ಯ !

ತನ್ನ ಸೌಂದರ್ಯದಿಂದ ಹಲವಾರು ಪ್ರಶಸ್ತಿಗಳನ್ನು ಸುಲ್ತಾನ್
ಪಡೆದುಕೊಂಡಿತ್ತು. 2013 ರಲ್ಲಿ ನಡೆದ ಅಖಿಲ ಭಾರತ ಎನಿಮಲ್ ಬ್ಯೂಟಿ ಸ್ಪರ್ಧೆಯಲ್ಲಿ ಹರಿಯಾಣ ಸೂಪರ್ ಬುಲ್, ಜಜ್ಜಾರ್,ಕರ್ನಾಲ್ ಮತ್ತು ಹಿಸಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಆತ ಬಾಚಿಕೊಂಡು ಬಂದಿದ್ದ.

ಸುಲ್ತಾನ ವೀರ್ಯಕ್ಕೆ ದೇಶ-ವಿದೇಶಗಳಿಂದ ಭಾರೀ ಬೇಡಿಕೆಯಿತ್ತು. ಸುಲ್ತಾನ್ ತನ್ನ ಒಡೆಯ ನರೇಶ್ ಗೆ ವರ್ಷಕ್ಕೆ 90 ಲಕ್ಷ ಗಳಿಸಿಕೊಡುತ್ತಿದ್ದ. ಅದು ಆತನ ವೀರ್ಯ ಮಾರಾಟದಿಂದಲೇ ಬರುತ್ತಿತ್ತು. ಅದೇ ಕಾರಣಕ್ಕೆ ಆತ ಬಾಡಿ ಬಿಲ್ಡರ್ ಗಳು ಮಾಡುತ್ತಿದ್ದ ಡಯಟ್ ಪಾಲಿಸುತ್ತಿದ್ದ. ಪ್ರತಿದಿನ 10 ಲೀಟರ್ ಹಾಲು, 20 ಕೆಜಿ ಕ್ಯಾರೆಟ್, 10 ಕೆಜಿ
ಸೊಪ್ಪು ಮತ್ತು 12 ಕೆಜಿ ಒಣಹುಲ್ಲು ನೆಮಳುತ್ತಿದ್ದ ಸುಲ್ತಾನ್. ಸಂಜೆಯ ವೇಳೆ ಒಂದಷ್ಟು ವಿಸ್ಕಿ, ವೈನ್ ನ ಕೂಡ ಚಪ್ಪರಿಸಿ ಹೀರುವ ಕಿಲಾಡಿ ಕೋಣ ಸುಲ್ತಾನ್ ಆಗಿತ್ತು.
ಆತನಿಗೆ 21 ಕೋಟಿ ರೂ. ಕೊಡುವುದಾಗಿ ಪಶು ಮೇಳದಲ್ಲಿ ರಾಜಸ್ಥಾನದ ವ್ಯಾಪಾರಿಯೊಬ್ಬ ಕೇಳಿದ್ದರೂ ನರೇಶ್ ಅದಕ್ಕೆ ಒಪ್ಪಿರಲಿಲ್ಲ. ‘ ಇದು ನನ್ನ ಮಗು,ಎಷ್ಟು ಕೋಟಿ ಕೊಟ್ಟರೂ ನಾನು ಅದನ್ನು ಕೊಡುವುದಿಲ್ಲ’ ಎಂದಿದ್ದರು. ಆದರೆ ಇದೀಗ ಕೋಣ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದು, ಮಾಲೀಕ ನರೇಶ್ ಕಣ್ಣೀರಾಗಿದ್ದಾರೆ. ಸೆಲೆಬ್ರಿಟಿ ಮಗನನ್ನು ಕಳೆದುಕೊಂಡ ಇಡೀ ಕುಟುಂಬ ದೊಡ್ಡದಾಗಿ ರೋದಿಸುತ್ತಿದೆ.

Leave A Reply

Your email address will not be published.