ಕೊಯಿಲ : ಅಮೃತ ಸಿರಿ ಯೋಜನೆಯಡಿ ಸುಳ್ಯ ಹಾಗೂ ಕಡಬ ತಾಲೂಕಿನ ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳ ವಿತರಣೆ

ಕಡಬ : ಅಡಿಕೆ ಕೃಷಿ ಇವತ್ತು ಲಾಭದಾಯಕವಾಗಿದ್ದರೂ ಅಡಿಕೆಗೆ ಹಳದಿ ರೋಗ ಬಾಧಿಸಿ ರೈತರು ಸಂಕಷ್ಟದಲ್ಲಿದ್ದಾರೆ. ಇಂಥಾ ರೈತರು ಅಡಿಕೆ ಬೆಳೆಗೆ ಪರ‍್ಯಾಯವಾಗಿ ಮೀನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುವ ಕಾರ್ಯವನ್ನು ರೂಪಿಸಲಾಗುವುದು ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.

ಅವರು ಶುಕ್ರವಾರ ಕಡಬ ತಾಲೂಕಿನ ಕೊಯಿಲ ಪಶು ಸಂಗೋಪನಾ ಕ್ಷೇತ್ರದಲ್ಲಿ ರಾಜ್ಯ ಸರಕಾರದ ಅಮೃತ ಸಿರಿ ಯೋಜನೆಯಡಿ ಸುಳ್ಯ ಹಾಗೂ ಕಡಬ ತಾಲೂಕಿನ ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರು ಹಾಗೂ ಕಡಸುಗಳನ್ನು ವಿತರಿಸಿ ಮಾತನಾಡಿದರು.

ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದ ಆಹಾರ ಪದ್ದತಿಯನ್ನು ನಾವು ಮರೆಯುತಿರುವುದರಿಂದ ಅರೋಗ್ಯವಂತ ಬದುಕಿನಿಂದ ವಿಮುಖರಾಗುತ್ತಿದ್ದೇವೆ ಎಂದು ಸಚಿವ ಅಂಗಾರ ಅಭಿಪ್ರಾಯಪಟ್ಟರು.

ಮಲೆನಾಡು ಗಿಡ್ಡ ತಳಿಯ ಹಸುಗಳಿಂದ ಪೌಷ್ಠಿಕಾಂಶ ಯುಕ್ತ ಹಾಲು ದೊರೆಯುತ್ತದೆ. ಆದ್ದರಿಂದ ಸರಕಾರ ಇದಕ್ಕೆ ಒತ್ತು ನೀಡಿ ಅಮೃತ ಸಿರಿ ಯೋಜನೆಯನ್ನು ಜಾರಿಗೊಳಿಸಿದೆ. ಮಾತ್ರವಲ್ಲ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಸಚಿವ ಅಂಗಾರ ಹೇಳಿದರು.

ರೈತರು ಮತ್ಸ್ಯ ಸಾಕಣೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸ್ಥಳೀಯ ತಳಿಯ ಮಡೆಂಜಿ ಹಾಗೂ ಮಲೆಜ್ಜಿ ಮೀನುಗಳ ಸಾಕಾಣೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಈ ಮೀನುಗಳು ಆರೋಗ್ಯಕ್ಕೆ ಪೂರಕವಾಗಿರುವುದರಿಂದ ಅದಕ್ಕೆ ಹೆಚ್ಚಿನ ಬೇಡಿಕೆ ಸಿಗಲಿದೆ. ಬೇಡಿಕೆ ಹೆಚ್ಚಾದಂತೆ ವಿದೇಶಕ್ಕೆ ರಫ್ತು ಮಾಡುವ ಉದೇಶ ಕೂಡಾ ಇದೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಸಚಿವರು ಹೇಳಿದರು. ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ತಾಲೂಕು ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಯಿಲ ಜಾನುವಾರ ತಳಿ ಸಂವರ್ಧನ ತರಬೇತಿ ಕೇಂದ್ರದ ಉಪ ನಿರ್ದೆಶಕ ಡಾ. ವೆಂಕಟೇಶ್ ಸ್ವಾಗತಿಸಿದರು. ಕೊಯಿಲ ಪಶು ಸಂಗೋಪನಾ ಕ್ಷೇತ್ರದ ಮುಖ್ಯ ಪಶುವೈದ್ಯ ಡಾ. ಧರ್ಮಪಾಲ ಗೌಡ ಕರಂದ್ಲಾಜೆ ವಂದಿಸಿದರು. ಸಿಬ್ಬಂದಿ ಸುನಿತಾ ಪ್ರಾರ್ಥಿಸಿದರು. ಹಿರಿಯ ಪಶು ವೈದ್ಯೆ ಡಾ. ಅಪರ್ಣ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.