ಇನ್ನು ಮುಂದೆ ಐಸ್ ಕ್ರೀಮ್ ಕಡ್ಡಿಯಲ್ಲಿ ಇಡ್ಲಿಯನ್ನು ತಿನ್ನಬಹುದಂತೆ !! | ವೈರಲ್ ಆಗಿದೆ ಐಸ್ ಕ್ರೀಮ್ ಕಡ್ಡಿ ಇಡ್ಲಿ ಫೋಟೋ, ನೆಟ್ಟಿಗರಿಂದ ಭಾರೀ ಆಕ್ರೋಶ !!

ಇಡ್ಲಿ ದಕ್ಷಿಣ ಭಾರತದ ಪ್ರಾಚೀನ ತಿನಿಸುಗಳಲ್ಲಿ ಒಂದು. ಇಲ್ಲಿನ ‌ಮನೆ ಮನೆಗಳಲ್ಲಿ ಇಡ್ಲಿ ಬೆಳಗ್ಗಿನ ಉಪಹಾರದ ಪ್ರಧಾನ ತಿನಿಸಾಗಿದೆ. ಇಂತಹ ಇಡ್ಲಿ ಈಗ ಬೇರೆ ಬೇರೆ ಶೈಲಿಯಲ್ಲಿ ಗ್ರಾಹಕರಿಗೆ ಲಭ್ಯವಾಗುವ ಕಾಲ ಬಂದುಬಿಟ್ಟಿದೆ. ಇದೀಗ ಐಸ್ ಕ್ರೀಮ್ ಕಡ್ಡಿಯಲ್ಲಿ ಇಡ್ಲಿ ತಿನ್ನಲು ಲಭ್ಯವಿದೆಯಂತೆ !!

ಹೌದು, ಐಸ್‌ಕ್ರೀಂ ಕಡ್ಡಿಯಲ್ಲಿ ಇಡ್ಲಿಯನ್ನು
ತಿನ್ನಬಹುದೆ ಎಂದು ಕೇಳಿದರೆ ಎಲ್ಲರೂ ನಗಬಹುದು. ಆದರೆ ಈಗಿನ ಯುಗದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಅಲ್ಲವೆ? ಭಿನ್ನ ವಿಭಿನ್ನ ಪ್ರಯೋಗಗಳು ಅಡುಗೆ ಕ್ಷೇತ್ರಕ್ಕೂ ಕಾಲಿಟ್ಟು ದಶಕಗಳೇ ಕಳೆದಿವೆ. ಇದೀಗ ಇಂಥದ್ದೊಂದು ಪ್ರಯೋಗ ಇಡ್ಲಿಯಲ್ಲಿಯೂ ಆಗಿದೆ.

ಇಡ್ಲಿಯನ್ನು ಐಸ್‌ಕ್ರೀಂ ಕಡ್ಡಿಗೆ ಸಿಕ್ಕಿಸಿ ತಿನ್ನಬಹುದು ಎಂದ ಬೆಂಗಳೂರಿನ ರೆಸ್ಟೋರೆಂಟ್ ಒಂದು ತೋರಿಸಿಕೊಟ್ಟಿದೆ. ಇಂಥದ್ದೊಂದು ವಿಭಿನ್ನ ಪ್ರಯೋಗ ಮಾಡಿರುವ ಹೋಟೆಲ್ ಯಾವುದು ಎಂದು ತಿಳಿಯದಿದ್ದರೂ ಟ್ವಿಟರ್ ಬಳಕೆದಾರರೊಬ್ಬರು ಐಸ್‌ಕ್ರೀಂ ಕಡ್ಡಿಯಲ್ಲಿ ಇಡ್ಲಿ ಇರುವ ಫೋಟೋ ಒಂದನ್ನು ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಆದರೆ ಇದೊಂದು ವಿಭಿನ್ನ ಪ್ರಯೋಗ, ಚೆನ್ನಾಗಿದೆ ಎನ್ನುವ ಬದಲು ನೆಟ್ಟಿಗರಿಂದ ಈ ಇಡ್ಲಿಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅನಗತ್ಯವಾಗಿ ಇಡ್ಲಿಯ ಸ್ವಾದವನ್ನು ಹಾಳು ಮಾಡಲಾಗುತ್ತಿದೆ ಎಂದು ಕೆಲವರು ಹೇಳಿದ್ದರೆ, ನಮ್ಮ ದೇಸೀಯ ಆಹಾರವಾಗಿರುವ ದೋಸೆಯ ಮೇಲೆ ಚಿತ್ರ ವಿಚಿತ್ರ ಪ್ರಯೋಗ ಮಾಡಿ ಅದರ ಸ್ವಾದಿಷ್ಟ ಹಾಳು ಮಾಡಲಾಗಿದೆ. ಇದೀಗ ಇವರ ದೃಷ್ಟಿ ಇಡ್ಲಿಯ ಮೇಲೂ ಬಿದ್ದಿದ್ದು, ಇಂಥ ವಿಲಕ್ಷಣ ಪ್ರಯೋಗ ಮಾಡಿ ನಮ್ಮ ಆಹಾರದ ಮೂಲ ಸ್ವಾದವನ್ನು ಹಾಳು ಮಾಡಬೇಡಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸುಖಾ ಸುಮ್ಮನೆ ಐಸ್‌ಕ್ರಿಂ ಕಡ್ಡಿಯನ್ನು ಇಂಥ ಪ್ರಯೋಗಕ್ಕೆ ಬಳಸಿ ಮರಗಳನ್ನು ಹಾಳು ಮಾಡಲಾಗುತ್ತಿದೆ ಎಂದೂ ಕಮೆಂಟಿಗರು ಗರಂ ಆಗಿದ್ದಾರೆ.

ಫೋಟೋದಲ್ಲಿ, ಕಡ್ಡಿಗಳ ಮೇಲೆ ಮೂರು ಇಡ್ಲಿಗಳನ್ನು ತಟ್ಟೆಯಲ್ಲಿ ನೀಡಲಾಗಿದ್ದು, ಇನ್ನೊಂದು ಇಡ್ಲಿಯನ್ನು ಸಾಂಬಾರ್ ಬಟ್ಟಲಿನಲ್ಲಿ ಅದ್ದಿಡಲಾಗುತ್ತದೆ. ಪಕ್ಕದಲ್ಲಿ ಸಾಮಾನ್ಯ ತೆಂಗಿನ ಚಟ್ನಿ ಕೂಡ ಇರುವುದನ್ನು ನೋಡಬಹುದು.

Leave A Reply

Your email address will not be published.