ಅಬ್ಬರಿಸುತ್ತಿದೆ ಗುಲಾಬ್ ಚಂಡಮಾರುತ | ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮುಂದುವರಿಯಲಿದೆ ವರುಣನ ಅಬ್ಬರ!! ಕರಾವಳಿಯಲ್ಲಿ ಅಲರ್ಟ್ ಘೋಷಣೆ!

ಕರ್ನಾಟಕದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಇನ್ನೂ 2 ದಿನ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಮಾಹಿತಿ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.

ಇಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ರಾಮನಗರ, ತುಮಕೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಅಲರ್ಟ್​ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ಮುಂಗಾರು ಅಂತ್ಯ ನಿಧಾನವಾಗಲಿದ್ದು, ಸೆಪ್ಟೆಂಬರ್ ತಿಂಗಳ ನಂತರವೂ ದೇಶದ ಹಲವೆಡೆ ಮಳೆ ಮುಂದುವರೆಯಲಿದೆ ಎಂದು
ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸೆಪ್ಟೆಂಬರ್ 30ರ ನಂತರ ದೇಶದಲ್ಲಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ, ಆದರೆ, ಅಕ್ಟೋಬರ್ ತಿಂಗಳ ಮಧ್ಯ ಭಾಗದವರೆಗೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ. ವಾಯುಭಾರ ಕುಸಿತ ಹಾಗೂ ಚಂಡಮಾರುತ ಪ್ರಭಾವದಿಂದಾಗಿ ಮುಂಗಾರು ಅಂತ್ಯ ಈ ಬಾರಿ ವಿಳಂಬವಾಗಲಿದೆ. ಸೆಪ್ಟೆಂಬರ್ ವೇಳೆಗೆ ಮುಂಗಾರು ಅಂತ್ಯವಾಗಲು ಸದ್ಯ ದೇಶದಲ್ಲಿ ಹವಾಮಾನ ವ್ಯವಸ್ಥೆ ಸರಿಯಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಗುಲಾಬ್ ಚಂಡಮಾರುತ ಪ್ರಭಾವದಿಂದಾಗಿ ಆಂಧ್ರ ಹಾಗೂ ಒಡಿಶಾದಲ್ಲಿ ಭಾರೀ ಮಳೆಯಾಗುತ್ತಿದ್ದು, ಮಹಾರಾಷ್ಟ್ರದಲ್ಲಿಯೂ ಅಧಿಕ ಮಳೆ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರ ಮತ್ತು ಆಂಧ್ರಾ ಕರಾವಳಿಯಲ್ಲಿನ ಭಾರೀ ಮಳೆ ರಾಜ್ಯಕ್ಕೂ ಸಹ ಪರಿಣಾಮ ಬೀರುತ್ತದೆ ಎಮದು ಹೇಳಲಾಗುತ್ತಿದೆ. ಒಡಿಶಾ, ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೂರು ದಿನಗಳ ಅವಧಿ ದಕ್ಷಿಣ ಕೇಂದ್ರ ವಿಭಾಗದ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.

ಮುಂದಿನ 24 ಗಂಟೆಗಳಲ್ಲಿ, ಮೇಘಾಲಯ, ಸಿಕ್ಕಿಂ, ಪಶ್ಚಿಮ ಬಂಗಾಳ, ಕೇರಳ, ಕರಾವಳಿ ಕರ್ನಾಟಕ, ಲಕ್ಷದ್ವೀಪ, ಪೂರ್ವ ರಾಜಸ್ಥಾನ, ಮಧ್ಯ ಪ್ರದೇಶ, ಜಾರ್ಖಂಡ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 1ರವರೆಗೂ ಕೆಲವು ರಾಜ್ಯಗಳಲ್ಲಿ ಅಧಿಕ ಮಳೆಯಾಗಲಿದ್ದು, ಕೆಲವು ರಾಜ್ಯಗಳಿಗೆ ಯೆಲ್ಲೋ ಹಾಗೂ ಇನ್ನು ಕೆಲವು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದ ಉತ್ತರ ಒಳನಾಡು , ಒಡಿಶಾ, ಮಧ್ಯ ಮಹಾರಾಷ್ಟ್ರ, ಕೊಂಕಣ, ಗೋವಾ, ಗುಜರಾತ್, , ತಮಿಳುನಾಡು, ಪುದುಚೇರಿ, ಕಾರೈಕಾಲ್‌ನಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೇಶದ ಬಹುತೇಕ ಭಾಗಗಳಲ್ಲಿ ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. “ಜೂನ್‌ನಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತಲೂ ಶೇ. 7ರಷ್ಟು ಕಡಿಮೆಯಾಗಿತ್ತು. ಆಗಸ್ಟ್ ತಿಂಗಳಲ್ಲಿ ಶೇ. 24ರಷ್ಟು ಕಡಿಮೆಯಾಗಿದೆ. ಆದರೆ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯ ಕಾರಣದಿಂದಾಗಿ ಕೊರತೆ ಪ್ರಮಾಣ ನೀಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕರ ತಿಳಿಸಿದ್ದಾರೆ. ಕಳೆದ ಜೂನ್-ಜುಲೈ ತಿಂಗಳಲ್ಲಿ ಅಬ್ಬರಿಸಿದ್ದ ಮಳೆರಾಯ, ಆಗಸ್ಟ್​ ತಿಂಗಳಲ್ಲಿ ಕೊಂಚ ವಿರಾಮ ನೀಡಿದ್ದ. ಈಗ ಮತ್ತೆ ಸೆಪ್ಟೆಂಬರ್ ಪ್ರಾರಂಭದಿಂದಲೇ ಮಳೆರಾಯನ ಅಬ್ಬರ ಜೋರಾಗಿದ್ದು, ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.