ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಸೈಬರ್ ಕ್ರೈಂ ಪ್ರಕರಣಗಳು| ಮಹಿಳೆಯರೇ ಸೈಬರ್ ವಂಚಕರ ಟಾರ್ಗೆಟ್ !!

ಕೊರೋನಾ ಸಂಕಷ್ಟದಿಂದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿರುವ ಈ ಸಂದರ್ಭದಲ್ಲೇ ರಾಜ್ಯ ಸೈಬರ್ ವಂಚಕರ ಸುಳಿಯಲ್ಲಿ ಸಿಲುಕಿ ಪರದಾಡುವಂತಾಗಿದೆ. ಈ ವರ್ಷವಂತೂ ಕೇಳಲೇಬೇಡಿ, ಸೈಬರ್ ವಂಚಕರ ಸಂಖ್ಯೆ ದುಪ್ಪಟ್ಟಾಗಿ ಹೋಗಿದೆ. ಅದರಲ್ಲೂ ಮಹಿಳೆಯರೇ ಹೆಚ್ಚು ಈ ವಂಚನೆಗೊಳಗಾಗಿದ್ದಾರೆ ಎಂಬುದು ಶಾಕಿಂಗ್ ವಿಚಾರ.

ಅದಲ್ಲದೆ ಪ್ರಕರಣ ಭೇದಿಸಲು ಬೇಕಾದ ಮೂಲಸೌಕರ್ಯವಿಲ್ಲದ ಕಾರಣ ವಂಚಕರ ಪತ್ತೆ ಸವಾಲಿನ ಕೆಲಸವಾಗಿದೆ. ಇದರಿಂದಾಗಿ ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಗಂಭೀರ ಸೈಬರ್ ಅಪರಾಧ ಕೇಸ್‌ಗಳು ಇತ್ಯರ್ಥವಾಗದೆ ಉಳಿದಿವೆ.

ಅದರಲ್ಲೂ ಸೈಬರ್ ವಂಚಕರ ಟಾರ್ಗೆಟ್ ಮಹಿಳೆಯರೇ ಆಗಿರುವುದು ಮತ್ತಷ್ಟು ಕಳವಳ ಮೂಡಿಸಿದೆ. ಕಳೆದ 18 ತಿಂಗಳಲ್ಲಿ ದೇಶಾದ್ಯಂತ 3,17,439 ಸೈಬರ್ ಅಪರಾಧಗಳು ವರದಿಯಾಗಿವೆ. ಈ ಪೈಕಿ ಕರ್ನಾಟಕದಲ್ಲಿ 21,562 ಪ್ರಕರಣ ದಾಖಲಾದರೆ, ಮಹಾರಾಷ್ಟ್ರದಲ್ಲಿ 50,806 ಅತೀ ಹೆಚ್ಚು ಕೇಸ್ ದಾಖಲಾಗಿವೆ. ದೇಶದಲ್ಲಿ ವಾರ್ಷಿಕವಾಗಿ ಅಂದಾಜು 4 ಸಾವಿರ ಕೋಟಿ ರೂ. ಗೂ ಅಧಿಕ ಹಣ ಸೈಬರ್ ಕಳ್ಳರ ಪಾಲಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ 7 ರಿಂದ 10 ಸಾವಿರ ಸೈಬರ್ ವಂಚನೆ ಪ್ರಕರಣಗಳು ಠಾಣೆ ಮೆಟ್ಟಿಲೇರುತ್ತವೆ. ಬೆಂಗಳೂರಿನಲ್ಲೇ ಹೆಚ್ಚು ಸೈಬರ್ ಕ್ರೈಂ ಕೇಸ್ ದಾಖಲಾಗುತ್ತಿದೆ.

ಉತ್ತರ ಭಾರತ ನೆಲೆ:

ಸೈಬರ್ ವಂಚಕರು ಉತ್ತರ ಭಾರತ ಹಾಗೂ ವಿದೇಶಗಳಲ್ಲಿ ಕುಳಿತು ಎಲ್ಲೂ ತಮ್ಮ ಸುಳಿವು ಸಿಗದಂತೆ, ಮೂಲ ದಾಖಲೆ ಬಿಟ್ಟುಕೊಡದಂತೆ ಅಪರಾಧ ಎಸಗುತ್ತಾರೆ.

ಹೆಣ್ಮಕ್ಕಳೇ ಹುಷಾರ್:

ಮಹಿಳೆಯರ ಮೇಲೆ ನಡೆಯುತ್ತಿರುವ ಸೈಬರ್ ಕ್ರೈಂ ಪ್ರಕರಣಗಳ ಪೈಕಿ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಅಧಿಕ ಕೇಸ್ ದಾಖಕಲಾಗುತ್ತಿದ್ದು, ದೇಶದಲ್ಲೇ ಬೆಂಗಳೂರು ಮೊದಲ ಸ್ಥಾನದಲ್ಲಿದೆ. 2020ರಲ್ಲಿ ರಾಜ್ಯ ರಾಜಧಾನಿಯಲ್ಲಿ 135 ಕೇಸ್‌ಗಳು ದಾಖಲಾಗಿವೆ. ಲಖನೌ-97, ಚೆನ್ನೈ-80 ನಂತರದ ಸ್ಥಾನಗಳಲ್ಲಿವೆ. ಇದೇ ವರ್ಷ ದೇಶಾದ್ಯಂತ ಒಟ್ಟು 232 ಕೇಸ್ ಬೆಳಕಿಗೆ ಬಂದಿದೆ. ಮಹಿಳೆಯರನ್ನು ಗುರಿಯಾಗಿಸಿ ನಡೆಯುತ್ತಿರುವ ಸೈಬರ್ ಕೈಂಗಳ ಪೈಕಿ ದೇಶದಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದು, 2020ರಲ್ಲಿ 143 ಕೇಸ್ ದಾಖಲಾಗಿದೆ. ಒಡಿಶಾದಲ್ಲಿ 526 ಕೇಸ್ ದಾಖಲಾಗಿ ಮೊದಲ ಸ್ಥಾನದಲ್ಲಿದ್ದರೆ, ಅಸ್ಸಾಂ-395, ಉತ್ತರ ಪ್ರದೇಶ-338, ತಮಿಳುನಾಡಿನಲ್ಲಿ 198 ಕೇಸ್ ದಾಖಲಾಗಿದೆ. 2018ರಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ 1,224 ಸೈಬರ್ ಕ್ರೈಂ ಪ್ರಕರಣಗಳು ದಾಖಲಾದರೆ, 2019ರಲ್ಲಿ 1,608ಕ್ಕೆ ಏರಿಕೆಯಾಗಿದೆ. 2020ರಲ್ಲಿ 2,302ಕ್ಕೆ ಹೆಚ್ಚಾಗಿದೆ.

ಕೇಸ್ ಬಾಕಿಗೆ ಕಾರಣ?

ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ, ಮೂಲಸೌಕರ್ಯ ಇಲ್ಲ. ಆಧುನಿಕ ಉಪಕರಣಗಳ ಕೊರತೆ, ಕಡಿಮೆ ಸಂಖ್ಯೆಯಲ್ಲಿರುವ ಸೈಬರ್ ಠಾಣೆಗಳು, ಪ್ರಕರಣದ ತನಿಖೆಗೆ ಸರ್ಕಾರ ಆರ್ಥಿಕವಾಗಿ ಸಹಕಾರ ನೀಡದಿರುವುದು ಕೂಡ ಕಾರಣವಾಗಿದೆ. ಅದಲ್ಲದೆ ‌ಸಾವಿರಾರು ರೂ. ಮೊತ್ತದ ವಂಚನೆ ಪ್ರಕರಣ ಭೇದಿಸಲು ಲಕ್ಷಾಂತರ ರೂ. ಖರ್ಚು ಕೂಡ ಆಗುತ್ತದೆ.

ಗೋಲ್ಡನ್ ಹವರ್ ವ್ಯವಸ್ಥೆ:

ಸೈಬರ್ ವಂಚನೆಯಾದ 1 ಗಂಟೆ ಅವಧಿ ಗೋಲ್ಡನ್ ಹವರ್ ಆಗಿರಲಿದೆ. ಆ ಅವಧಿಯಲ್ಲಿ ‘100’ಗೆ ಕರೆ ಮಾಡಿ ಮಾಹಿತಿ ನೀಡಿದರೆ, ಹಣ ಜಮೆ ಮಾಡಿರುವ ಖಾತೆ ಫ್ರೀಜ್ ಮಾಡಲು ಅವಕಾಶಗಳಿವೆ.

ಆದರೂ ಇದು ಬಹಳ ಗಂಭೀರವಾದ ವಿಷಯವಾಗಿದೆ. ಎಲ್ಲಾ ರೀತಿಯ ಆನ್ಲೈನ್ ಕೆಲಸಗಳಲ್ಲಿ ನಾವು ಜಾಗರೂಕರಾಗಿರಬೇಕಾಗುತ್ತದೆ. ಯಾವುದೇ ರೀತಿಯ ನಕಲಿ ಜಾಹೀರಾತುಗಳನ್ನು ನಂಬಲು ಹೋಗಬೇಡಿ. ಅದಲ್ಲದೆ ಓಟಿಪಿ ಅಥವಾ ಪಿನ್ ನಂಬರ್ ಗಳನ್ನು ಯಾರಿಗೂ ನೀಡದಿರುವುದೇ ಇದಕ್ಕೆ ಒಂದು ಉತ್ತಮ ಮಾರ್ಗ.

Leave A Reply

Your email address will not be published.