ತರಗೆಲೆಯಂತೆ ಉದುರಿ ಹೋಗುವ ಮುನ್ನ ನಮ್ಮವರೆನ್ನುವವರು ಈಡೇರಿಸುವರೇ ಕೊನೆಯಾಸೆ!! ಅನಿಶ್ಚಿತತೆಗಳ ಬದುಕಿನಲ್ಲಿ ಮುದಿ ಜೀವಗಳಿಗೆ ಮೂಡುವುದೇ ಆ ಭರವಸೆ

ನವ ಚೈತನ್ಯದ ಭವ್ಯತೆಯಲ್ಲಿ ಮುಳುಗಿಹ ಜಗದ ನಡುವೆ ಮೋಜು ಮಸ್ತಿಗಳ ಜೊತೆ ಜೀವನವೇ ಬ್ಯುಸಿ
. ಈ ನಡುವೆ ಜಂಟಾಟಗಳು, ಹೊಟ್ಟೆಪಾಡಿಗಾಗಿ ಕಳ್ಳತನ, ದರೋಡೆ, ದ್ವೇಷ ಸಾಧಿಸಲು ಕೊಲೆಯಂತಹ ಸನ್ನಿವೇಶಗಳು, ರಾಜಕೀಯದಂತಹ ಸುದ್ದಿಗಳ ಅನಾವರಣ.ಆದರೆ ಇದ್ಯಾವುದರ ಪರಿಜ್ಞಾನವೇ ಇಲ್ಲವೆಂಬಂತೆ ಮನೆಯ ಒಂದು ಮೂಲೆಯಲ್ಲಿ ಕೂತು ತನ್ನ ಮುದಿ ಪತಿಗಾಗಿ ಪತ್ನಿ, ಹಾಗೂ ಪತ್ನಿಗಾಗಿ ಪತಿಯು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು.ಆ ಎರಡು ಮುದಿ ಜೀವಗಳು ಕಂಡ ಕಷ್ಟಗಳು ಹೇಳತೀರಾದಾದರೂ ಹೇಳುವುದು ಅನಿವಾರ್ಯ.

ತಮ್ಮ ಯೌವ್ವನದ ಆ ಜೀವನದಲ್ಲಿ ತಮ್ಮೆಲ್ಲ ನೋವನ್ನು ಮರೆತು ತಮ್ಮ ಇಬ್ಬರು ಮುದ್ದಾದ ಗಂಡು ಮಕ್ಕಳಿಗೆ ಯಾವುದೇ ಕೊರತೆ ಇಲ್ಲದಂತೆ ಕಾಪಾಡಿಕೊಂಡು ಬಂದಿದ್ದರು. ಮಕ್ಕಳು ದೊಡ್ಡವರಾಗಿ ಇವೆಲ್ಲವನ್ನೂ ಅರ್ಥೈಸಿಕೊಂಡು ನಮ್ಮ ಕೊನೆಯ ಕ್ಷಣಗಳಲ್ಲಿ ಹೂವಂತೆ ನೋಡಿಕೊಳ್ಳಬಹುದು ಎಂಬ ನಂಬಿಕೆಯಲ್ಲಿ ದಿನಕಳೆಯುತ್ತಿದ್ದ ಆ ಬಡಪಾಯಿಗಳಿಗಿಂದು ನಿಶ್ಚಯಿಸಿದ ಎಲ್ಲವೂ ಸಿಗಲಿಲ್ಲ.ತಮ್ಮ ಊಹೆಗಳೆಲ್ಲಾ ಮಕ್ಕಳು ದೊಡ್ಡವರಾಗುತ್ತಲೇ ಒಲೆಯಲ್ಲಿ ಉರಿಯುವ ಕಟ್ಟಿಗೆಯ ಬೂದಿಯಂತಾಗತೊಡಗಿದವು. ಇಬ್ಬರೂ ಗಂಡು ಮಕ್ಕಳು ವಿದ್ಯಾಭ್ಯಾಸ ಪಡೆದು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿದ್ದು,ಇಂದು ಹೆತ್ತವರಿಗೆ ಒಂದು ಮಾತೂ ತಿಳಿಸದೇ ವಿವಾಹವಾಗಿ ಅಲ್ಲಿಯೇ ಜೀವನ ನಡೆಸಲು ಪ್ರಾರಂಭಿಸಿದ್ದಾರೆ.ಇತ್ತ ಹಳ್ಳಿಯಲ್ಲಿ ಮಕ್ಕಳನ್ನು ಯಾವತ್ತು ಕಾಣುವೆವೋ ಎಂದು ಹಾತೊರೆಯುತ್ತಿದ್ದ ಆ ಜೀವಗಳು, ತಮ್ಮ ಆಸೆ, ಕನಸುಗಳನ್ನು ದೂರ ತಳ್ಳುತ್ತಾ ದಿನದೂಡುತ್ತಿದ್ದವು.ಪ್ರತೀ ದಿನ ದೂರವಾಣಿ ಕರೆ ಮಾಡಿದಾಗಲೂ ಗಡುಸಾದ ಧ್ವನಿಯಿಂದ ‘ಅಮ್ಮ, ಅಪ್ಪ ನಾನು ಬ್ಯುಸಿ ಆಗಿದ್ದೇನೆ, ಈಗ ಮಾತಾಡಲು ಸಮಯ ಇಲ್ಲ, ಮುಂದಿನ ದೀಪಾವಳಿಗೆ ಮನೆಗೆ ಬರುತ್ತೇವೆ, ಪ್ರತೀದಿನ ಕರೆ ಮಾಡಿ ತಲೆ ತಿನ್ನಬೇಡಿ ‘ಎಂದು ಒದರಿ ಕರೆ ತುಂಡರಿಸುತ್ತಿದ್ದಾಗ ಪ್ರವಾಹದ ರಭಸಕ್ಕೆ ಸಿಲುಕಿ ವಿಲವಿಲ ಒದ್ದಾಡುವ ಮೀನಿನಂತೆ ಮಕ್ಕಳ ಬರುವಿಕೆಗಾಗಿ ಶಬರಿ ರಾಮನಿಗೆ ಕಾದಂತೆ ಕಾದು ಕಾದು ಒದ್ದಾಡುತ್ತಿದ್ದವು ಆ ಮುದಿ ಜೀವಗಳು.

ಅಂದ ಹಾಗೆ ಕಾತುರದಿಂದ ಕಾಯುತ್ತಿದ್ದ ಆ ದಿನಗಳು ಬಂದೇ ಬಿಟ್ಟಿತು. ಇಂದಾದರೂ ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳೊಂದಿಗೆ ಸಂತೋಷವಾಗಿ ಕಾಲ ಕಳೆಯುವರೇ?..ಇಲ್ಲ,ಅಂದು ಕೊಂಡಂತೆ ಸಂಭ್ರಮ ಸಡಗರದಿಂದ ಹಬ್ಬವೂ ನಡೆಯಿತು.ಆದರೆ ಹಬ್ಬದ ಮರುದಿವಸವೇ ಆಸ್ತಿ ಭಾಗದ ವಿಚಾರವಾಗಿ ಮಕ್ಕಳಿಬ್ಬರ ನಡುವೆ ಜಗಳ ನಡೆಯಿತು.ಇದು ಮುಂದುವರೆದು ಅಪ್ಪ ಅಮ್ಮ ಇವರಿಬ್ಬರನ್ನು ನೋಡಿಕೊಳ್ಳುವವರ್ಯಾರು? ಎಂಬ ಕಠೋರ ಮನಸ್ಸಿನ ಮಾತುಕತೆ ಮೂಡಿತ್ತು.ವಾದ ವಿವಾದಗಳ ನಂತರ ದೊಡ್ಡ ಮಗ ತಂದೆಯನ್ನು ಹಾಗೂ ಸಣ್ಣ ಮಗ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡರು.

ಆದರೆ ಆ ಎರಡು ಮುದಿ ಜೀವಗಳಿಗೆ ಒಬ್ಬರನ್ನೊಬ್ಬರು ಬಿಟ್ಟು ಬದುಕುವ ಶಕ್ತಿ ಇಲ್ಲವಾಗಿತ್ತು. ಮಕ್ಕಳಿಬ್ಬರ ಜಗಳದಿಂದ ಕಂಗೆಟ್ಟು ಏನನ್ನೂ ಹೇಳಲಾರದೇ ಮನಸ್ಸಿನಲ್ಲೇ ನೊಂದುಕೊಂಡವು. ಮಕ್ಕಳಿಬ್ಬರೂ ವಿದೇಶಗಳಲ್ಲಿ ಕೆಲಸ ಮಾಡುವುದರಿಂದ ಒಬ್ಬರನ್ನೊಬ್ಬರು ಭೇಟಿಯಾಗುವ ಸನ್ನಿವೇಶಗಳೂ ಕೂಡ ಬಹು ವಿರಳವಾಗಿದ್ದಿತು.ಕೊನೆಯ ಬಾರಿ ಎರಡು ಹಿರಿಜೀವಗಳು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ದುಃಖವೆಂಬ ಭಾರದ ಮೂಟೆಯನ್ನು ಹೊತ್ತು ಮಕ್ಕಳೊಂದಿಗೆ ಹೊರಟೇ ಬಿಟ್ಟರು.ಕಡಲು ತನ್ನೊಳಗಿರುವ ಉಪ್ಪನ್ನು ಎದುರಿಗೆ ತೋರಿಸದಂತೆ ಮುದಿ ಜೀವಗಳು ಕೂಡ ಎಷ್ಟೇ ದುಃಖವಿದ್ದರೂ ತೋರಿಸಿಕೊಳ್ಳದೇ ಕತ್ತಲೆ ಕೋಣೆಯಲ್ಲಿ ಕೂತು ಅತ್ತು ಅತ್ತು ಬೇಸತ್ತು ಹೋಗಿದ್ದರು.ಯಾವಾಗ ತನ್ನ ಪತಿಯನ್ನು ನೋಡುವೇನೋ ಎಂದು ಕಾಯುತ್ತಿತ್ತು ಆ ಜೀವ. ಫೋನ್ ಮಾಡೋಣವೆಂದರೆ ಸೊಸೆ ಬಿಡುತ್ತಿರಲಿಲ್ಲ.

ಮಗನಲ್ಲಿ ಹೇಳಿದರೆ ‘ ನೀನು ಸುಮ್ಮನೆ ಇರು, ಮಾತಾಡದೆ ಇದ್ದರೆ ಜೀವ ಏನೂ ಹೋಗಲ್ಲ ‘ಎಂದು ಹೃದಯ ಒಡೆದು ಹೋಗುವಂತೆ ಗದರಿಸುತ್ತಿದ್ದ. ತಾನು ಕೊನೆಯುಸಿರೆಳೆಯುವ ಮುನ್ನ ತನ್ನ ಪತಿಯನ್ನು ನೋಡಬೇಕೆಂದು ತಾಯಿ ಹೇಳಿಕೊಳ್ಳುತ್ತಿದ್ದಳು.ಇದರಂತೆಯೇ ದೊಡ್ಡ ಮಗನೊಂದಿಗೆ ಇದ್ದ ತಂದೆಯು ತನ್ನ ಪತ್ನಿಯನ್ನು ಒಮ್ಮೆ ಕಂಡು ಮಾತನಾಡಬೇಕು ಎಂದು ಪರಿಪರಿಯಾಗಿ ಬೇಡಿದರೂ ಮಗ ಸೊಸೆ ಅದನ್ನು ಅಸಡ್ಡೆ ಮಾಡುತ್ತಿದ್ದರು. ಕತ್ತಲೆಯೊಳಗೆ ಒದ್ದಾಡುತ್ತಿದ್ದ ಜೀವಗಳು ಭರವಸೆಯೆಂಬ ಬೆಳಕಿಗಾಗಿ ಕಾಯುತ್ತ ಕುಳಿತಿದ್ದವು. ಸಾಯಬೇಕು ಎನ್ನುವಷ್ಟು ನೋವಿದ್ದರೂ ತಮ್ಮ ಕೊನೆಯುಸಿರು ಹೋಗುವ ಮುಂಚೆ ಒಬ್ಬರನ್ನೊಬ್ಬರು ಕಾಣಬೇಕೆಂಬ ಬಯಕೆಯನ್ನು ಮಕ್ಕಳು ಒಂದಲ್ಲಾ ಒಂದು ದಿನ ಈಡೇರಿಸಬಹುದು ಎಂಬ ಒಂದು ಸಣ್ಣ ಭರವಸೆಯೊಂದಿಗೆ ಕತ್ತಲೆ ಕೋಣೆಯಲ್ಲಿ ನರಳಾಡುತ್ತಿದ್ದವು. ಕತ್ತಲೆಯ ಹಾದಿಗೆ ಬೆಳಕಿನ ಆಗಮನ ಯಾವಾಗ ಬರಬಹುದೋ ಎಂದು ಚಿಂತಿಸುತ ತರಗೆಲೆಯಂತೆ ಉದುರಿಹೋಗುವ ಮುನ್ನ ಈಡೇರಿಸುವರೇ ಕೊನೆಯಾಸೆ!! ಅನಿಶ್ಚಿತತೆಗಳ ಬದುಕಿನಲ್ಲಿ ಮೂಡುವುದೇ ಆ ಭರವಸೆ ಎಂದು ತಮ್ಮಲ್ಲೇ ಪ್ರಶ್ನೆಗಳನ್ನು ಕೇಳುತ್ತ, ಯೋಚಿಸುತ್ತ ದುಃಖ, ವಿರಹ ವೇದನೆಯನ್ನು ಮನದಲ್ಲೇ ಮುಚ್ಚಿಡುತ್ತ ಇನ್ನು ಕಾಯುತ್ತಾ ಕುಳಿತಿವೆ ಆ ಮುಗ್ಧ ಜೀವಗಳು ಭರವಸೆಯ ಕಡೆ ನೋಡುತ್ತಾ …….!ಪರಿ ಪರಿಯಾಗಿ ಭಗವಂತನಲ್ಲಿ ಮೊರೆ ಇಡುತ್ತಾ ಜೊತೆಗಿದ್ದ ಮಧುರ ಕ್ಷಣಗಳ ನೆನಪುಗಳ ಸವಿಯುತ, ಕ್ಷಣಗಣನೆ ಮಾಡುತ್ತಾ, ಇನ್ನೂ ಜೀವವನ್ನು ಕೈಯಲ್ಲಿಹಿಡಿದಿಟ್ಟುಕೊಂಡು ಒಬ್ಬರನ್ನೊಬ್ಬರು ಕಾಣುವ ಬಯಕೆಯು ಈಡೇರಬಹುದು ಎಂಬ ಭರವಸೆಯಲ್ಲಿಯೇ ದಿನದೂಡುತ್ತಾ ಕಾಯುತ್ತಾ ಕುಳಿತಿದೆ ಆ ಎರಡು ಜೀವಗಳು ಒಬ್ಬರನ್ನೊಬ್ಬರು ಬಿಟ್ಟಿರದೆ.

?ದೀಕ್ಷಾ ಪೂಜಾರಿ ಮಾದೇರಿಕೆ

Leave A Reply

Your email address will not be published.