ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕ | ಯುವಕನಿಗೆ ಹಲ್ಲೆಗೈದ ಇಬ್ಬರ ಬಂಧನ

ಮಹಿಳೆಗೆ ಡ್ರಾಪ್ ನೀಡಿದ್ದಕ್ಕಾಗಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಈ ರೀತಿಯ ಘಟನೆಗಳನ್ನು ಸಹಿಸಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬುರ್ಖಾ ಧರಿಸಿದ್ದ ಮಹಿಳೆಯನ್ನು ಬೈಕ್ ಸವಾರ ಡ್ರಾಪ್ ನೀಡಿದ್ದಕ್ಕಾಗಿ ಬೆಂಗಳೂರಿನ ಡೈರಿ ಸರ್ಕಲ್ ಫ್ಲೈಓವರ್ ಬಳಿ ಬೈಕ್ ಸವಾರನನ್ನು ತಡೆದು ಇಬ್ಬರು ಮನ ಬಂದಂತೆ ಥಳಿಸಿದ್ದರು.

ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ಎಚ್ಚೆತ್ತ ಸುದ್ದಗುಂಟೆಪಾಳ್ಯ ಪೊಲೀಸರು ಬೈಕ್ ಸವಾರನನ್ನು ಥಳಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಕುರಿತು ಟ್ವೀಟ್ ಮಾಡಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿ ಅನುಚಿತವಾಗಿ ವರ್ತಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದೀಗ ಈ ಕುರಿತು ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಡ್ರಾಪ್ ಕೊಟ್ಟಿದ್ದಕ್ಕೆ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಕೋರರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ನನ್ನ ಸರ್ಕಾರ ಇಂಥಹ ಘಟನೆಗಳನ್ನು ಎಂದಿಗೂ ಸಹಿಸಲ್ಲ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Leave A Reply

Your email address will not be published.