ಆರನೇ ತರಗತಿಯ ಬಾಲಕರಿಬ್ಬರ ಖಾತೆಗೆ ಜಮೆಯಾಯಿತು ಬರೋಬ್ಬರಿ 96 ಕೋಟಿ ರೂಪಾಯಿ !! | ಅಷ್ಟಕ್ಕೂ ಈ ಮೊತ್ತದ ನಿಜವಾದ ವಾರಸುದಾರರಾದರೂ ಯಾರು??

ತನ್ನ ಬ್ಯಾಂಕ್ ಖಾತೆಗೆ 5.5 ಲಕ್ಷ ರೂ. ಜಮೆ ಆಗಿರುವುದು ಮೋದಿಯಿಂದ ಎಂದು ತಿಳಿದ ವ್ಯಕ್ತಿಯೊಬ್ಬ ಆ ದುಡ್ಡನ್ನು ಖರ್ಚು ಮಾಡಿದ್ದು ಇತ್ತೀಚಿಗೆ ಭಾರಿ ವೈರಲ್ ಆಗಿತ್ತು. ಇದೀಗ ಅದೇ ರೀತಿಯ ಘಟನೆಯೊಂದು ಸಂಭವಿಸಿದೆ. ಬಿಹಾರದ ಇಬ್ಬರು ಮಕ್ಕಳ ಬ್ಯಾಂಕ್ ಖಾತೆಗೆ ಬರೋಬ್ಬರಿ ₹96 ಕೋಟಿ ಹಣ ಜಮೆಯಾಗಿದ್ದು, ಅಲ್ಲಿನ ಜನರಿಗೆ ಅಚ್ಚರಿಯನ್ನುಂಟುಮಾಡಿದೆ.

ಸೆಪ್ಟೆಂಬರ್ 15 ರಂದು ಕತಿಹಾರ್ ಜಿಲ್ಲೆಯ 6 ನೇ ತರಗತಿ ವಿದ್ಯಾರ್ಥಿಗಳಾದ ಆಶಿಶ್ ಕುಮಾರ್ ಮತ್ತು ಗುರುಚರಣ್ ಬಿಸ್ವಾಸ್ ಅವರ ಖಾತೆಗೆ ಕ್ರಮವಾಗಿ ₹6,20,11,100 ಮತ್ತು ₹90,52,21,223 ಹಣ ಜಮೆಯಾಗಿದೆ.

ಮಕ್ಕಳಿಬ್ಬರೂ ಬಗಹುರ ಪಂಚಾಯತ್‌ನ ಪಾಸ್ಟಿಯಾ ಗ್ರಾಮದವರಾಗಿದ್ದಾರೆ. ಅವರು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿದ್ದು, ಇದೇ ಖಾತೆಗಳಿಗೆ ಈಗ ಕೋಟಿ ಕೋಟಿ ಹಣ ಬಂದು ಬಿದ್ದಿದೆ.

ಮಕ್ಕಳ ಖಾತೆಗೆ ಭಾರೀ ಮೊತ್ತದ ಹಣ ಜಮೆಯಾಗಿರುವುದನ್ನು ಕತಿಹಾರ್‌ನ ಜಿಲ್ಲಾಧಿಕಾರಿ ಉದಯನ್ ಮಿಶ್ರಾ ದೃಢಪಡಿಸಿದ್ದಾರೆ. ‘ಈ ಇಬ್ಬರೂ ಮಕ್ಕಳ ಖಾತೆಗಳಿಗೆ ದೊಡ್ಡ ಮೊತ್ತದ ಹಣ ಜಮಾ ಮಾಡಲಾಗಿದೆ. ಮಿನಿ ಸ್ಟೇಟ್‌ಮೆಂಟ್‌ಗಳಲ್ಲಿ ಅದನ್ನು ಕಾಣಬಹುದು. ಈ ಬಗ್ಗೆ ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತಿದೆ’ ಎಂದು ಮಿಶ್ರಾ ಹೇಳಿದರು.

‘ಮಕ್ಕಳ ಖಾತೆಗಳಿಗೆ ಹಣ ಜಮಾ ಆಗುತ್ತಿರುವ ಬಗ್ಗೆ ತಿಳಿದ ತಕ್ಷಣ, ನಾವು ಖಾತೆಗಳನ್ನು ಸ್ಥಗಿತಗೊಳಿಸಿದ್ದೇವೆ ಮತ್ತು ಹಿಂಪಡೆಯುವಿಕೆಯನ್ನು ತಡೆ ಹಿಡಿದಿದ್ದೇವೆ. ಈ ಬಗ್ಗೆ ಮಕ್ಕಳ ಪೋಷಕರನ್ನು ವಿಚಾರಿಸಿದಾಗ, ಹಣದ ಮೂಲದ ಬಗ್ಗೆ ಅವರಿಗೂ ತಿಳಿದಿಲ್ಲ ಎಂಬುದು ಗೊತ್ತಾಗಿದೆ. ಈಗ, ಹಣ ಕಳುಹಿಸಿದವರು ಯಾರು ಎಂದು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದೇವೆ ’ ಎಂದು ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನ ಎಲ್‌ಡಿಎಂ ಎಂ.ಕೆ. ಮಧುಕರ್ ತಿಳಿಸಿದ್ದಾರೆ.

Leave A Reply

Your email address will not be published.