ನಿವೃತ್ತ ಸೈನಿಕನ ಪುತ್ರ ಗನ್ ನಿಂದ ಶೂಟ್ ಮಾಡಿಕೊಂಡು ಸಾವು | ಸಾವಿನ ಸುತ್ತ ಎತ್ತಿದೆ ಹಲವಾರು ಪ್ರಶ್ನೆಗಳು !?

ಬೆಂಗಳೂರು ಸಂಜಯ ನಗರದ ನಂದಿನಿ ಬೂತ್ ಬಳಿ ಪಾದಚಾರಿ ಮಾರ್ಗದಲ್ಲಿ ಶುಕ್ರವಾರ ನಸುಕಿನ 5 ಗಂಟೆ ಸುಮಾರಿಗೆ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡಿರುವ ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ.

ಆರ್.ಟಿ. ನಗರ ಗಂಗಾ ಬೇಕರಿ ಬಳಿಯ ನಿವಾಸಿ ಮಿಲಿಟರಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ಭಂಡಾರಿ (17) ಮೃತ ವಿದ್ಯಾರ್ಥಿ.ಅವನ ಜೇಬಿನಲ್ಲಿ ಪಿಸ್ತೂಲ್ ಪತ್ತೆಯಾಗಿದೆ.

ಮಿಲಿಟರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಪ್ರತಿ ದಿನ 3 ಗಂಟೆಗೆ ಎದ್ದು ಓದುತ್ತಿದ್ದ. ಇದರಂತೆ ಇಂದು ಬೆಳಗ್ಗೆ ಎದ್ದು ಕೆಲ ಹೊತ್ತು ಓದಿದ ಬಳಿಕ ಮನೆಯಿಂದ 4 ಗಂಟೆ ವೇಳೆ ವಾಕಿಂಗ್ ಮಾಡಲು ಹೊರ ಬಂದಿದ್ದಾನೆ. ಸುಮಾರು 5 ಗಂಟೆಯ ವೇಳೆ ತಲೆಯ ಎಡಭಾಗಕ್ಕೆ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಇಂದು ಬೆಳಗ್ಗೆ ಪೋಷಕರು ರೂಂನಲ್ಲಿ ರಾಹುಲ್
ಕಾಣದಿದ್ದಾಗ ಕರೆ ಮಾಡಿದ್ದಾರೆ. ಫೋನ್ ಕರೆ
ಸ್ವೀಕರಿಸದೇ ಇದ್ದಾಗ ಚಿಂತೆಗೊಳಗಾಗಿದ್ದಾರೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಯುವಕನೇ ಶೂಟ್ ಮಾಡಿಕೊಂಡಿದ್ದಾನಾ? ಅಥವಾ ಬೇರೆ ಯಾರಾದರೂ ಶೂಟ್ ಮಾಡಿದ್ದಾರಾ ಎಂಬುದರ ಬಗ್ಗೆ ಸದಾಶಿವ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾಹುಲ್ ಭಂಡಾರಿ ಭಗತ್ ಸಿಂಗ್ -ಬಾಬಾ ದಂಪತಿಯ ಪುತ್ರ. ಭಗತ್ ಸಿಂಗ್ ಉತ್ತರಾಖಂಡ ಮೂಲದವರು. ಬೆಂಗಳೂರಿಗೆ ಬಂದು 20 ವರ್ಷವಾಗಿತ್ತು. ಭಗತ್ ಸಿಂಗ್ ನಿವೃತ್ತ ಆರ್ಮಿ ಮ್ಯಾನ್ ಆಗಿದ್ದಾರೆ. ಆರ್.ಟಿ. ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದರು.

ವಿದ್ಯಾರ್ಥಿ 10 ನೇ ತರಗತಿಯಲ್ಲಿ ಶೇ.90ರಷ್ಟು ಅಂಕ ಪಡೆದಿದ್ದ. ಮನೆಯಲ್ಲಿಯೂ ಓದಬೇಕು ಎನ್ನುವ ಒತ್ತಡ ಇರಲಿಲ್ಲ. ಆದರೂ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ.ಘಟನೆಯ ಬಳಿಕ ಮೃತ ಯುವಕನ ತಾಯಿ ಪ್ರತಿಕ್ರಿಯಿಸಿದ್ದು, ಪ್ರತಿ ದಿನ ರಾತ್ರಿ ಮತ್ತು ಮುಂಜಾನೆ ಹೊತ್ತಿನಲ್ಲಿ ಓದುತ್ತಿದ್ದ. ಮಾನಸಿಕ ಒತ್ತಡ ಜಾಸ್ತಿಯಾದಾಗ ಹೊರಗಡೆ ವಾಕಿಂಗ್ ಮಾಡುತ್ತಿದ್ದ. ಇಂದು ಕೂಡ 4 ಗಂಟೆ ಸುಮಾರಿಗೆ ಹೊರಗಡೆ ಬಂದಿದ್ದ. ಬೆಳ್ಳಗೆ 5 ಗಂಟೆಯಿಂದ ಸತತವಾಗಿ ಕರೆ ಮಾಡಿದರೂ ಫೋನ್ ರಿಸೀವ್ ಮಾಡಿರಲಿಲ್ಲ ಎಂದಿದ್ದಾರೆ. ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ. ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ನಾಲ್ಕು ಗಂಟೆಯಿಂದ ನಿರಂತರವಾಗಿ ಕರೆ ಮಾಡುತ್ತಿದ್ದರೂ ಕರೆ ಸ್ವೀಕರಿಸಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಿನ್ನೆ ರಾಹುಲ್ ಭಂಡಾರಿ ತನ್ನ ತಂದೆಯಲ್ಲಿ 500 ರೂ.ಕೇಳಿದ್ದಾನೆ. ಆದರೆ ಕೊಡಲು ನಿರಾಕರಿಸಿದ ತಂದೆ ಕಾರಣವಿಲ್ಲದೆ ಹಣ ನೀಡುವುದಿಲ್ಲ ಎಂದು ಗದರಿಸಿದ್ದಾರೆ. ಇದರಿಂದ ಬೇಸರಗೊಂಡ ರಾಹುಲ್ ಭಂಡಾರಿ ತನ್ನ ತಂದೆ ಹೆಸರಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಮುಂಜಾನೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದುಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ತನಿಖೆಯಿಂದ ರಾಹುಲ್ ಭಂಡಾರಿ 500 ರೂ. ಕೊಡದಿರೋದಕ್ಕೆ ಶೂಟ್ ಮಾಡಿಕೊಂಡಿದ್ದಾನಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಘಟನೆ ಸಂಬಂಧ ಸ್ಥಳಕ್ಕೆ ಡಿಸಿಪಿ ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎನ್ನಲಾಗಿದ್ದು, ಪೋಲಿಸರ ತನಿಖೆಯ ಬಳಿಕ ನಿಜಾಂಶ ಹೊರಬೀಳಲಿದೆ.

Leave A Reply

Your email address will not be published.