ಹೊಸ ಅಡಿಕೆಗೆ ಬಂಪರ್ ಬೆಲೆ ,ಏರಿಕೆಯ ಹಾದಿಯಲ್ಲೇ ಸಾಗಿದೆ ಧಾರಣೆ | ಬೆಳೆಗಾರ ಫುಲ್ ಖುಷ್…

ಚೌತಿ ಬಳಿಕ ಅಡಿಕೆಯ ಬೆಲೆ ನಿರೀಕ್ಷೆಗೂ ಮೀರಿ ಏರಿಕೆ ಕಂಡಿದೆ.ಸೆಪ್ಟೆಂಬರ್‌ ಅಂತ್ಯಕ್ಕೆ 500 ಆಗುವ ನಿರೀಕ್ಷೆ ಕೃಷಿಕರಲ್ಲಿ ಇತ್ತು.ಆದರೆ ಅದಕ್ಕೂ ಮುಂಚೆಯೇ ದಾಖಲೆಯ ಧಾರಣೆ ಹೊಸ ಅಡಿಕೆಗೆ ಸಿಕ್ಕಿದೆ.

ಹೊಸ ಅಡಿಕೆ ಧಾರಣೆ ಸೆ.17ರ ಶುಕ್ರವಾರವೂ 505 ರೂಪಾಯಿಗೆ ಖರೀದಿಯಾಗಿದೆ. ಅಡಿಕೆ ಮಾರುಕಟ್ಟೆಯ ಇತಿಹಾಸದಲ್ಲಿಯೇ ದಾಖಲೆಯ ಧಾರಣೆ ಇದಾಗಿದೆ. ಹಳೆ ಅಡಿಕೆ ಹಾಗೂ ಹೊಸ ಅಡಿಕೆ ಎರಡೂ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು ದಾಖಲೆಯಾಗಿದೆ.ಇತ್ತ ಕ್ಯಾಂಪ್ಕೋ ಕೂಡ ಧಾರಣೆ ಏರಿಕೆ ಮಾಡಿದೆ.

ಉತ್ತರ ಭಾರತದಲ್ಲಿ ಅಡಿಕೆಗೆ ಹೆಚ್ಚುತ್ತಿರುವ ಬೇಡಿಕೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಬೆಲೆ ಏರಿಕೆಯಾದರೂ
ಬೆಳೆಗಾರರು ಹೊಸ ಅಡಿಕೆಯನ್ನು ಮಾರುಕಟ್ಟೆ ಗೆ ಬಿಡುತ್ತಿಲ್ಲ,ಹೊರ ರಾಜ್ಯ ದಿಂದ ಅಡಿಕೆ ಬರುತ್ತಿಲ್ಲ. ಬೆಳ್ಳಾರೆಯಲ್ಲಿ,ಉಪ್ಪಿನಂಗಡಿಯಲ್ಲಿ ಶುಕ್ರವಾರವೂ 505+ಕ್ಕೆ ಅಡಿಕೆ ಖರೀದಿಯಾಗಿದೆ.

ಅಡಿಕೆಯ ಬೆಳೆ ಕಡಿಮೆಯಾಗಿರುವುದರಿಂದ, ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಅಡಿಕೆ ಬಾರದಿರುವುದು ಹಾಗೂ ಕಳೆದ ವರ್ಷ ಕೊರತೆಯಾದ ಅಡಿಕೆ ಇನ್ನೂ ಭರ್ತಿಯಾಗದೇ ಇರುವುದು ಪ್ರಮುಖ ಕಾರಣಗಳಲ್ಲಿ ಒಂದು.ಜತೆಗೆ ದೇಶದೊಳಗೆ ಅಡಿಕೆ ಆಮದು ತಡೆಯೂ ಪ್ರಮುಖ ಕಾರಣವಾಗುತ್ತಿದೆ.

ಲಾಕ್‌ಡೌನ್‌ ಪರಿಣಾಮದಿಂದ ಸ್ಥಗಿತಗೊಂಡಿದ್ದ ಮಾರುಕಟ್ಟೆ ಚಿಗಿತುಕೊಂಡು ಉತ್ತರ ಭಾರತದಲ್ಲಿ ಅಡಿಕೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಇದೇ ವೇಳೆ ಕೊರೊನಾ ಕಾರಣದಿಂದ ವಿದೇಶದಿಂದ ಅಡಿಕೆ ಆಮದಾಗುತ್ತಿಲ್ಲ. ಈ ಎಲ್ಲ ಕಾರಣದಿಂದ ಪೂರೈಕೆ ಕಡಿಮೆ ಇದ್ದು, ಬೆಲೆ ಏರಿಕೆಗೆ ಇದೇ ಕಾರಣ ಎನ್ನಲಾಗಿದೆ. ಈ ಅಂಶವನ್ನು ಅರ್ಥ ಮಾಡಿಕೊಂಡ ಬೆಳೆಗಾರರು ಇನ್ನಷ್ಟು ಪೂರೈಕೆ ಕೊರತೆ ಉಂಟಾಗಲು ಯತ್ನಿಸುತ್ತಿದ್ದಾರೆ. ಈ ಮೂಲಕ ಧಾರಣೆ ಹೆಚ್ಚಿಸುವುದು ಅವರ ತಂತ್ರ.

ಮಾರುಕಟ್ಟೆಗೆ ಅಡಿಕೆ ಬಿಡದೇ ಇರುವುದು ಯಾವುದೇ ಸಂಘಟಿತ ನಿರ್ಣಯವಲ್ಲದಿದ್ದರೂ, ಬೆಳೆಗಾರರ ಬುದ್ಧಿವಂತಿಕೆ ಏಕ ಕಾಲದಲ್ಲಿ ಫಲ ನೀಡುತ್ತಿರುವ ಕಾರಣ ಈಗ ಅಡಿಕೆ ಮಾರುಕಟ್ಟೆ ಬೆಳೆಗಾರರ ನಿಯಂತ್ರಣದಲ್ಲಿದೆ.

ತೆಂಗಿನ ಕಾಯಿಗೆ ಧಾರಣೆ ಇಳಿಕೆ

ಅತ್ತ ಅಡಿಕೆಗೆ ದಾಖಲೆಯ ಧಾರಣೆ ಏರಿಕೆ ಕಂಡರೆ ಇತ್ತ ತೆಂಗಿನಕಾಯಿ ಬೆಲೆಯಲ್ಲಿ ಕುಸಿತ ಕಂಡಿದೆ‌.
ಹಸಿ ತೆಂಗಿನಕಾಯಿಗೆ ಕಿಲೋಗೆ 30 ರೂ., ಒಣ ತೆಂಗಿನ ಕಾಯಿಗೆ 30 ರೂ. ನಿಂದ 32 ರೂ. ವರೆಗೆ ಬೆಲೆ ಇದೆ.

ಹಸಿ ತೆಂಗಿನ ಕಾಯಿಗೆ ಕಿಲೋಗೆ 45 ರೂ.ವರೆಗೆ ಲಭಿಸುತ್ತಿತ್ತು. ಈಗ 30ರೂ.ನಿಂದ 32ರೂ.ಗೆ ಕುಸಿದಿದೆ. ಸಮಾನ ರೀತಿಯಲ್ಲಿ ಕೊಬ್ಬರಿಗೂ ಬೆಲೆ ಕುಸಿದಿದೆ. ಎರಡು ತಿಂಗಳ ಹಿಂದೆ ಇದೇ ರೀತಿ ಬೆಲೆ ಕುಸಿದಿದ್ದರೂ ಬಳಿಕ ಮತ್ತೆ ಏರಿಕೆಯಾಗಿತ್ತು. ಆದರೆ ಈಗ ಮತ್ತೆ ಇಳಿಕೆಯಾಗಿದೆ.

Leave A Reply

Your email address will not be published.