ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ದುಪ್ಪಟ್ಟು | ಎರಡು ವಾರದಲ್ಲಿ ಸೂಕ್ತ ನಿರ್ಧಾರ| ಉಚಿತ ಬಸ್‌ಪಾಸ್‌ಗೂ ಚಿಂತನೆ – ಕೋಟ ಶ್ರೀನಿವಾಸ ಪೂಜಾರಿ

ಗ್ರಾಮ ಪಂಚಾಯತ್‌‌ನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ವೇತನ ಪರಿಷ್ಕರಣೆಗೆ ಸಂಬಂಧಿಸಿ ಎರಡು ವಾರಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬುಧವಾರ ನಿಯಮ 330ರ ಅಡಿ ಕಾಂಗ್ರೆಸ್‌ ಸದಸ್ಯ ಸುನೀಲ್‌ ಗೌಡ ಪಾಟೀಲ್‌ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ 3 ಸಾವಿರ, ಉಪಾಧ್ಯಕ್ಷರಿಗೆ 2 ಸಾವಿರ ಮತ್ತು ಸದಸ್ಯರಿಗೆ ಒಂದು ಸಾವಿರ ರೂ. ಮಾಸಿಕ ಗೌರವಧನ ನೀಡಲಾಗುತ್ತಿದೆ. ಇದನ್ನು ಕನಿಷ್ಠ ದುಪ್ಪಟ್ಟುಗೊಳಿಸುವ ಪ್ರಸ್ತಾವ ಆರ್ಥಿಕ ಇಲಾಖೆಯ ಪರಿಶೀಲನೆಯ ಹಂತದಲ್ಲಿದೆ, ಅದು ಶೀಘ್ರ ಜಾರಿಗೆ ಬರಲಿದೆ ಎಂದರು.

ಈ ಮಧ್ಯೆ ಮುಂದಿನ ಎರಡು ವಾರಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಮಂದಿ ಪರಿಷತ್ತಿನ ಸದಸ್ಯರ ಸಭೆ ಕರೆಯಲಾಗುವುದು. ಅಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

ಜಿಲ್ಲಾ ಅಥವಾ ಕೊನೆ ಪಕ್ಷ ತಾಲೂಕು ವ್ಯಾಪ್ತಿಯಲ್ಲಾದರೂ ಉಚಿತ ಪ್ರಯಾಣಕ್ಕೆ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಬಸ್‌ ಪಾಸ್‌ ವ್ಯವಸ್ಥೆ ಕಲ್ಪಿಸುವ ಸಂಬಂಧ ಸಾರಿಗೆ ನಿಗಮಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

Leave A Reply

Your email address will not be published.