ವಿಟಮಿನ್-ಡಿ ಕೊರತೆ ಮನುಷ್ಯನ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ?| ಈ ಸಮಸ್ಯೆ ನಿವಾರಣೆಗೆ ನೀವು ಮಾಡಬೇಕಿರುವುದು ಇಷ್ಟೇ..!!

ನಮ್ಮ ದೇಹ ಉತ್ಪತ್ತಿ ಮಾಡುವ ವಿಟಮಿನ್ ಅಂದರೆ ಅದು ವಿಟಮಿನ್ ಡಿ. ಸೂರ್ಯನ ಕಿರಣಗಳು ನಮ್ಮ ದೇಹದ ಮೇಲೆ ಬಿದ್ದಾಗ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಆದರೆ ಈಗೀನ ಲೈಫ್‌ಸ್ಟೈಲ್‌ನಲ್ಲಿ ಎಷ್ಟೋ ಜನರು ಸೂರ್ಯನ ಬೆಳಕಿಗೆ ಹೋಗುವುದೇ ಇಲ್ಲ.

ನೈಟ್‌ ಶಿಫ್ಟ್‌ನಲ್ಲಿ ಕೆಲಸ ಮಾಡುವವರು ಸೂರ್ಯ ಮುಳುಗುವಾಗ ಎದ್ದರೆ, ಸೂರ್ಯ ಉದಯಿಸುವಾಗ ಮಲಗುತ್ತಾರೆ, ಇಂಥವರ ಮೇಲೆ ಸೂರ್ಯನ ಕಿರಣಗಳು ಸೋಕುವುದೇ ಇಲ್ಲ. ಶೇ.50ರಷ್ಟು ಜನರು ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದೇ ಇಲ್ಲ, ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ಉತ್ಪತ್ತಿಯಾಗದೆ, ವಿಟಮಿನ್ ಡಿ ಕೊರತೆ ಕಂಡು ಬರುವುದು.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು, ಮಕ್ಕಳನ್ನು ಬರೀ ಮೈಯಲ್ಲಿ ನಿಲ್ಲಿಸಿದರೆ ಅವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ವಿಟಮಿನ್ ಡಿ ಎನ್ನುವುದು ನಮ್ಮ ದೇಹದಲ್ಲಿ ಹಾರ್ಮೋನ್‌ನಂತೆ ಕಾರ್ಯ ನಿರ್ವಹಿಸುತ್ತದೆ. ದೇಹದ ಪ್ರತಿಯೊಂದು ಕಣವೂ ವಿಟಮಿನ್ ಡಿಯನ್ನು ಹೀರಿಕೊಳ್ಳುತ್ತದೆ. ನಮ್ಮ ತ್ವಚೆಯ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್‌ನಿಂದ ವಿಟಮಿನ್ ಡಿ ಉತ್ಪತ್ತಿ ಮಾಡುತ್ತದೆ.

ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣಗಳು

  • ಹೊರಗಡೆ ಹೋಗುವ ಸನ್‌ಸ್ಕ್ರೀನ್ ಲೋಷನ್ ಹಚ್ಚದೆ ಹೋಗುವುದಿಲ್ಲ ಎಂದಾದರೆ ನೀವು ಒಂದು ಅಂಶವನ್ನು ಗಮನಿಸಲೇಬೇಕು, ಸೂರ್ಯನ ಕಿರಣಗಳು ತ್ವಚೆಗೆ ತಾಗದಿದ್ದರೆ ವಿಟಮಿನ್‌ ಡಿ ಕೊರತೆ ಉಂಟಾಗುವುದು.
  • ಮನೆಯೊಳಗೆ ಇರುವುದು ಕೂಡ ವಿಟಮಿನ್ ಡಿ ಕೊರತೆಗೆ ಪ್ರಮುಖ ಕಾರಣವಾಗಿದೆ.

ವಿಟಮಿನ್ ಡಿ ಕೊರತೆ ಉಂಟಾದರೆ ಈ ಪ್ರಮುಖ ಲಕ್ಷಣಗಳು ಕಂಡು ಬರುತ್ತದೆ:

  • ಆಗಾಗ ಕಾಯಿಲೆ ಬೀಳುವುದು
  • ವಿಟಮಿನ್ ಡಿ ಕೊರತೆ ಉಂಟಾದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ನಮ್ಮ ದೇಹಕ್ಕೆ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುವುದು. ಆಗಾಗ ಶೀತ, ಕೆಮ್ಮು ಸಮಸ್ಯೆ ಕಾಡುತ್ತಿದ್ದರೆ ವಿಟಮಿನ್ ಡಿ ಕೂಡ ಒಂದು ಕಾರಣವಿರಬಹುದು.
  • ವಿಟಮಿನ್ ಡಿ ಕೊರತೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು.
  • ತಲೆಸುತ್ತು ಹಾಗೂ ಸುಸ್ತು, ಸ್ನಾಯುಗಳಲ್ಲಿ ನೋವು,ಗಾಯ ಬೇಗನೆ ಒಣಗದಿರುವುದು,
    ಆಗಾಗ ತಲೆನೋವು ಕಂಡು ಬರುತ್ತಿದ್ದರೆ ಅದಕ್ಕೆ ವಿಟಮಿನ್ ಡಿ ಕೊರತೆ ಕಾರಣವಿರಬಹುದು. ರಕ್ತದಲ್ಲಿ 20ng/mlಕ್ಕಿಂತ ಕಡಿಮೆ ವಿಟಮಿನ್ ಡಿ ಕಂಡು ಬಂದರೆ ಡಿ ವಿಟಮಿನ್‌ನ ಕೊರತೆ ಇದೆ ಎಂದರ್ಥ.

ವಿಟಮಿನ್ ಡಿ ಕೊರತೆ ಉಂಟಾಗದಿರಲು ಏನು ಮಾಡಬೇಕು?

ವಿಟಮಿನ್ ಡಿ ಕೊರತೆಗೆ ಪ್ರಮುಖ ಮದ್ದು ಎಂದರೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲುವುದು. ತ್ವಚೆಯ ಮೇಲೆ ಯುವಿ-ಬಿ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್ ವಿಟಮಿನ್ ಡಿ ಆಗಿ ಪರಿವರ್ತನೆ ಆಗುವುದು.ಮೀನು ಹಾಗೂ ಸಮುದ್ರ ಆಹಾರಗಳನ್ನು ತಿನ್ನುವುದು, ವಿಟಮಿನ್ ಡಿ ಕೊರತೆ ನೀಗಿಸಲು ಅಣಬೆ ತುಂಬಾ ಒಳ್ಳೆಯದು. ಮೊಟ್ಟೆಯ ಹಳದಿ,ದನದ ಹಾಲು, ಸೋಯಾ ಹಾಲು, ಕಿತ್ತಳೆ ಜ್ಯೂಸ್‌ ಇವುಗಳನ್ನು ಕೂಡ ಡಯಟ್‌ನಲ್ಲಿ ಸೇರಿಸಿ. ಓಟ್‌ಮೀಲ್ ಹಾಗೂ ಧಾನ್ಯಗಳಲ್ಲಿ ಕೂಡ ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಡಿ ಇರುತ್ತದೆ.

Leave A Reply

Your email address will not be published.