ಜೈಲಿನಲ್ಲಿ ನಡೆಯಿತು ಭೀಕರ ಅಗ್ನಿ ದುರಂತ | ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋದರು 40ಕ್ಕೂ ಅಧಿಕ ಖೈದಿಗಳು

ಇಂಡೋನೇಷ್ಯಾದ ಬಾಂಟೆನ್ ಪ್ರಾಂತ್ಯದ ಜೈಲೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಈ ಘಟನೆಯಲ್ಲಿ ಖೈದಿಗಳು ಸೇರಿದಂತೆ ಕನಿಷ್ಠ 41 ಮಂದಿ ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿವೆ.

ಮೃತಪಟ್ಟವರಲ್ಲಿ ಪೋರ್ಚಗಲ್ ಮತ್ತು ದಕ್ಷಿಣ ಆಫ್ರಿಕಾದ ಖೈದಿಗಳೂ ಇದ್ದರು. ಇವರೆಲ್ಲರೂ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ ಎನ್ನಲಾಗಿದೆ.

ರಾಜಧಾನಿ ಜಕಾರ್ತಾದ ಹೊರಗಿರುವ ಟಾಂಗರಾಂಗ್ ಪೆನಿಟರಿಯಲ್ಲಿ ಮುಂಜಾನೆ ಈ ಘಟನೆ ಸಂಭವಿಸಿದೆ. ಮಾದಕ ದ್ರವ್ಯ ಅಪರಾಧಿಗಳಿಗಾಗಿ ಇರುವ ಜೈಲು ಇದಾಗಿದ್ದು, ಜೈಲಿನ ಬ್ಲಾಕ್ ಸಿ ಯಲ್ಲಿ ಈ ದುರಂತ ಸಂಭವಿಸಿದೆ ಎಂಬ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವಾಲಯದ ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ಮಾಹಿತಿ ನೀಡಿದ್ದಾರೆ.

1,225 ಕೈದಿಗಳನ್ನು ಇಡುವಷ್ಟು ಸಾಮರ್ಥ್ಯವಿರುವ ಈ ಜೈಲಿನಲ್ಲಿ 2 ಸಾವಿರಕ್ಕೂ ಅಧಿಕ ಕೈದಿಗಳನ್ನು ಇಡಲಾಗಿದೆ ಎಂದು ಕೂಡ ಆರೋಪಿಸಲಾಗಿದೆ. ಬೆಂಕಿ ಅವಘಡ ಸಂಭವಿಸಿದ್ದ ಸಿ ಬ್ಲಾಕ್‌ನಲ್ಲಿ 122 ಅಪರಾಧಿಗಳಿದ್ದರು. ಇವರ ಪೈಕಿ ಹೆಚ್ಚಿನವರು ಅಗ್ನಿಗೆ ಬಲಿಯಾಗಿದ್ದಾರೆ. ಬೆಂಕಿ ನಿಯಂತ್ರಿಸಲು ನೂರಾರು ಪೋಲಿಸರು ಮತ್ತು ಸೈನಿಕರನ್ನು ನಿಯೋಜಿಸಲಾಗಿದೆ ಎಂದು ರಿಕಾ ವಿವರಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಗಲಭೆಗಳು ಸಾಮಾನ್ಯವಾಗಿದ್ದು, ಕಡಿಮೆ ವ್ಯವಸ್ಥೆಗಳಿರುವ ಜೈಲಿನಲ್ಲಿ ಅತಿಯಾದ ಖೈದಿಗಳಿರುವುದು ಸಮಸ್ಯೆಯಾಗಿದೆ ಎನ್ನಲಾಗಿದೆ. ಅಗ್ನಿ ದುರಂತಕ್ಕೆ ಸ್ಪಷ್ಟ ಕಾರಣ ಇದುವರೆಗೆ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರಂತ ಸಂಭವಿಸಿರಬಹುದು ಎನ್ನಲಾಗುತ್ತಿದ್ದರೂ ನಿಖರ ಕಾರಣ ತಿಳಿಯಬೇಕಿದೆಯಷ್ಟೇ.

Leave A Reply

Your email address will not be published.