ರಾಜ್ಯದಲ್ಲಿ ಈ ವರ್ಷ ಐದು ಸಾವಿರ ಶಿಕ್ಷಕರ ನೇಮಕ | ಶಿಕ್ಷಕರ ದಿನಾಚರಣೆಯಂದು ಮಹತ್ವದ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಶಿಕ್ಷಕರ ದಿನಾಚರಣೆಯಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಶಿಕ್ಷಕರ ಕುರಿತು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಇದೇ ವರ್ಷ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಶಿಕ್ಷಣ ಸಚಿವ ನಾಗೇಶ್ ಮನವಿಗೆ ಸ್ಪಂದಿಸಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ನೀಡಿರುವುದಾಗಿ ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಲು ಶಿಕ್ಷಕರ ಪಾತ್ರ ದೊಡ್ಡದಿದೆ. ಶಿಕ್ಷಕರ ಕೊರತೆಯಾದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಈ ವರ್ಷ 5 ಸಾವಿರ ಶಿಕ್ಷಕರ ನೇಮಕಕ್ಕೆ ನಿರ್ಧಾರ ಮಾಡಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಆಸಕ್ತಿಯಿಂದ ಶಿಕ್ಷಣ ನೀತಿ ರೂಪುಗೊಂಡಿದೆ. ಯಾವುದೇ ಬದಲಾವಣೆಯ ಸಂದರ್ಭದಲ್ಲಿ ವಿರೋಧಿಗಳು ಬರುತ್ತವೆ, ಈಗಲೂ ಬಂದಿದೆ ಎಂದು ಸಿಎಂ ಹೇಳಿದರು. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನದತ್ತ ಮುನ್ನಡೆಯುತ್ತಿರುವ ದೇಶ, ಇದೀಗ ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನದತ್ತ ವೇಗವಾಗಿ ಸಾಗಿದೆ. ಈ ವೇಗಕ್ಕೆ ಶಿಕ್ಷಕರು ಹೊಂದಿಕೊಳ್ಳುವುದು ಅನಿವಾರ್ಯ. ಉತ್ತಮ ವಿದ್ಯಾರ್ಥಿಗಳಾದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಸಿಎಂ ಕಿವಿ ಮಾತು ಹೇಳಿದರು.

ಒಮ್ಮೆ ವಿದ್ಯಾರ್ಥಿಯಾದವನು ಸಾಯುವ ತನಕ ವಿದ್ಯಾರ್ಥಿಯಾಗಿರುತ್ತಾನೆ. ದಿನ ನಿತ್ಯ ಕಲಿಯುವುದು ಇದ್ದೇ ಇರುತ್ತದೆ. ಎಂದಿಗೂ ಕಲಿಕೆಯಿಂದ ಹಿಂದೆ ಸರಿಯಬಾರದು. ಶಿಕ್ಷಕರಾದರೂ ಸಹ ನೀವು ಸಹ ವಿದ್ಯಾರ್ಥಿಗಳಂತೆ ಕಲಿಯುತ್ತಿರಬೇಕು ಎಂದು ಹೇಳಿದರು. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಾತ್ವಿಕತೆ, ವೈಚಾರಿಕತೆ ಹೊಂದಿದ ಅಪರೂಪದ ನಾಯಕರಾಗಿದ್ದರು. ನೈತಿಕ ನಡೆಯ ಧೀಮಂತ ನಾಯಕರಾದ ರಾಧಾಕೃಷ್ಣನ್ ಅವರ ಆದರ್ಶದ ಜೀವನ ನಮಗೆ ದಾರಿದೀಪ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ನಾಗೇಶ್ ಮಾತನ , ಬುದ್ಧಿ, ಕರುಣೆ, ಕೌಶಲ್ಯ ತರಬೇತಿ ಮೈಗೂಡಿಸಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ, ಭಾರತಕ್ಕೆ ಸ್ವಾಭಿಮಾನಿ, ಸ್ವಾವಲಂಬಿ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಅಡ್ಡಿಯಾಗದ ಶ್ರಮಿಸಿದ ಹಾಗೂ ಯಶಸ್ವಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿಕೊಟ್ಟ ಶಿಕ್ಷಕರನ್ನು ಶ್ಲಾಘಿಸಿದರು. ಕೋವಿಡ್ ನಿಂದ ಪ್ರಾಣ ಕಳೆದುಕೊಂಡ 31 ಶಿಕ್ಷಕರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಶಾಲೆಗಳ ಅಭಿವೃದ್ಧಿಗೆ ದೇಣಿಗೆ ವರ್ಗಾವಣೆಗಾಗಿ ರೂಪಿಸಲಾದ ನಮ್ಮ ಶಾಲೆ ನನ್ನ ಕೊಡುಗೆ ತಂತ್ರಾಂಶವನ್ನು ಉದ್ಘಾಟಿಸಿದರು.

Leave A Reply

Your email address will not be published.