ಬೆಳ್ಳಾರೆ : ರಬ್ಬರ್ ಸೊಸೈಟಿ ಅಧ್ಯಕ್ಷರಾದ ರಾಜೇಶ್ ಗುಂಡಿಗದ್ದೆ ನಾಪತ್ತೆ | ಆರ್ಥಿಕ ಸಮಸ್ಯೆಯಿಂದ ನಾಪತ್ತೆ ಶಂಕೆ ?

ಬೆಳ್ಳಾರೆಯ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಉದ್ಯಮಿ ಹಾಗೂ ಕೃಷಿಕ ರಾಜೇಶ್ ಗುಂಡಿಗದ್ದೆಯವರು ಸೆ.4 ರಂದು ಮನೆಯಿಂದ ಕಾಣೆಯಾಗಿದ್ದು ಈ ಬಗ್ಗೆ ಸೆ.೫ ರಂದು ಬೆಳ್ಳಾರೆ ಠಾಣೆಯಲ್ಲಿ ಅವರ ಪತ್ನಿ ಪೊಲೀಸು ದೂರು ನೀಡಿದ ಘಟನೆ ವರದಿಯಾಗಿದೆ.

ರಾಜೇಶ್ ಗುಂಡಿಗದ್ದೆ (೪೭) ಎಂಬವರು ಸೆ. ೪ ರಂದು ಬೆಳಿಗ್ಗೆ ಮನೆಯಿಂದ ತಮ್ಮ ಇಕೋ ಸ್ಪೋರ್ಟ್ಸ್ ಕಾರಿನಲ್ಲಿ ಸುಳ್ಯ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ಅವರ ಪತ್ನಿ ವಿನಯಶ್ರೀ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ರಾಜೇಶ್ ಗುಂಡಿಗದ್ದೆಯವರು ಸುಳ್ಯಕ್ಕೆ ಬಂದು ನಂತರ ಕಲ್ಲುಗುಂಡಿ ಪೇಟೆಯಾಗಿ ಸಂಪಾಜೆ ಕಡೆಗೆ ಪ್ರಯಾಣಿಸಿರುವ ದೃಶ್ಯ ಸಿ.ಸಿ. ಟೀವಿಯಲ್ಲಿ ಸೆರೆಯಾಗಿರುವುದಾಗಿ ಮತ್ತು ಬಂದಡ್ಕ ಟವರ್ ನಲ್ಲಿ ಇವರ ಮೊಬೈಲ್ ಸ್ವಿಚ್ ಆಫ್ ಆಗಿರುವುದಾಗಿ ತಿಳಿದು ಬಂದಿದೆ.

ಹಲವು ವರ್ಷಗಳ ಹಿಂದೆ ಬಾಳಿಲದಲ್ಲಿ ಸ್ಥಾಪನೆಯಾದ ರಬ್ಬರ್ ಉತ್ಪಾದಕರ ಸಂಘ ನಂತರದ ದಿನಗಳಲ್ಲಿ ಬೆಳ್ಳಾರೆಗೆ ಸ್ಥಳಾಂತರಗೊಂಡು ಬಳಿಕ ಬೆಳ್ಳಾರೆ ರಬ್ಬರ್ ಉತ್ಪಾದಕರ ಸಂಘ ಎಂಬ ಹೆಸರಿನಲ್ಲಿ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಭಾಗದಲ್ಲಿ ವ್ಯವಹಾರ ನಡೆಸುತ್ತಿತ್ತು.

ರಾಜೇಶ್ ಗುಂಡಿಗದ್ದೆ ಇದರ ಅಧ್ಯಕ್ಷರಾಗಿದ್ದರು. ಬೆಳ್ಳಾರೆ, ಪೆರುವಾಜೆ, ಬಾಳಿಲ, ಐವರ್ನಾಡು, ಕೊಡಿಯಾಲ ಸೇರಿದಂತೆ ಆಸುಪಾಸಿನ ಗ್ರಾಮಗಳ ರಬ್ಬರ್ ಬೆಳೆಗಾರರು ರಬ್ಬರ್ ಹಾಲನ್ನು ಸಂಘಕ್ಕೆ ನೀಡುತ್ತಿದ್ದು ತಮಗೆ ಅವಶ್ಯಕತೆ ಇರುವಾಗ ಹಣ ತೆಗೆದುಕೊಳ್ಳುತ್ತಿದ್ದರು. ವ್ಯವಹಾರದ ಅನುಕೂಲಕ್ಕಾಗಿ ಮಣಿಕ್ಕಾರ ಕಾಂಪ್ಲೆಕ್ಸ್ ನಲ್ಲಿ ಕಚೇರಿ ಶಾಖೆಯನ್ನು ತೆರೆದಿದ್ದರು.

ಇತ್ತೀಚೆಗಿನ ವರ್ಷಗಳಿಂದ ಹಾಲು ನೀಡಿದ ಗ್ರಾಹಕರಿಗೆ ಹಣ ಕೊಡಲು ಬಾಕಿ ಇರುವ ಮೊತ್ತ ಏರುತ್ತಾ ಹೋಗಿ ಕೋಟಿಗಟ್ಟಲೆ ಹಣ ಕೊಡಲು ಬಾಕಿ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿದೆ. ಅಲ್ಲದೆ ಇತರ ಕಡೆಗಳಲ್ಲೂ ಹಣ ಸಂದಾಯಕ್ಕೆ ಬಾಕಿ ಇದೆ ಎನ್ನಲಾಗಿದೆ.

ಈ ಕಾರಣದಿಂದ ಆರ್ಥಿಕ ಅಡಚಣೆಯಿಂದಾಗಿಯೇ ರಾಜೇಶ್ ಗುಂಡಿಗದ್ದೆ ಅವರು ನಾಪತ್ತೆಯಾಗಿರುವ ಸಾಧ್ಯತೆ ಎನ್ನಲಾಗಿದೆ.

Leave A Reply

Your email address will not be published.