ಒಂದೇ ದಿನದಲ್ಲಿ ಮೀನುಗಾರನ ಅದೃಷ್ಟವನ್ನೇ ಬದಲಾಯಿಸಿದ ‘ಘೋಲ್’ | ಬರೋಬ್ಬರಿ 1.33 ಕೋಟಿ ರೂ.ಗೆ ಮಾರಾಟವಾದ ‘ಸೀ ಗೋಲ್ಡ್’ ಮೀನು !

ಒಬ್ಬ ಮೀನುಗಾರ ಒಂದು ದಿನಕ್ಕೆ ಎಷ್ಟು ದುಡಿಯಬಹುದು ಹೇಳಿ? ದಿನಗಟ್ಟಲೆ ಸಮುದ್ರದ ಜೊತೆಗೆ ಸೆಣಸಾಡಿದ್ರು ಅನೇಕ ಬಾರಿ ಅಲ್ಲಿಗಲ್ಲಿಗೆ ಎನ್ನುವಂತೆ ಆಗಿಬಿಟ್ಟಿರುತ್ತೆ ಅವರ ಪಾಡು. ಆದರೆ
ಮಹಾರಾಷ್ಟ್ರದ ಪಾಲ್ಘರ್ ನ ಮೀನುಗಾರ ಚಂದ್ರಕಾಂತ್ ತಾರೆಗೆ ನಿಜಕ್ಕೂ ಅಮೂಲ್ಯವಾದ ಕ್ಯಾಚ್ ಸಿಕ್ಕಿದೆ. ಕೋವಿಡ್ -19 ನಿರ್ಬಂಧದಿಂದಾಗಿ ಸುದೀರ್ಘ ವಿರಾಮದ ನಂತರ ತಾರೆ ಮೀನುಗಾರಿಕೆಗೆ ಹೋದಾಗ ಆತನ ಅದೃಷ್ಟವು ಹೇಗೆ ತಿರುಗುತ್ತದೆ ಎಂದು ಆತನಿಗೆ ತಿಳಿದಿರಲಿಲ್ಲ.

ಆತ ಹಿಡಿದ ಒಂದು ಗುಂಪಿನ ಮೀನಿಗೆ ಜನ ಕಾಂಪಿಟೇಶನ್ ಮೇಲೆ ಹಣ ಕೊಟ್ಟು ಖರೀದಿಸಿದ್ದಾರೆ. ಅದೂ 1.33 ಕೋಟಿ ರೂಪಾಯಿ ನೀಡಿ! ಅದಿನ್ನೆಂಥಾ ಮೀನು, ಅದ್ಯಾಕೆ ಅಷ್ಟೊಂದು ದುಬಾರಿ. ಜನರಿಗೆ ಅಷ್ಟು ಹಣ ಕೊಡುವಷ್ಟರ ಮಟ್ಟಿಗೆ ಆ ಮೀನು ಉಪಯುಕ್ತವಾ? ಈ ಬಗ್ಗೆ ಫುಲ್ ಡೀಟೆಲ್ಸ್ ಇಲ್ಲಿದೆ.

ಎಂದಿನಂತೆ ಮೀನು ಹಿಡಿಯೋಕೆ ಸಮುದ್ರಕ್ಕೆ ಇಳಿದಿದ್ದ ಬೆಸ್ತ ಚಂದ್ರಕಾಂತ್ ತಾರೆಗೆ ತಾನು ಅಂದು ಹಿಡಿಯುವ ಮೀನು ತನ್ನ ನಸೀಬನ್ನೇ ಬದಲಿಸಿಬಿಡುತ್ತದೆ ಎಂದು ಖಂಡಿತಾ ಗೊತ್ತಿರಲಿಲ್ಲ. ಮಹಾರಾಷ್ಟ್ರದ ಪಾಲ್​ಘರ್ ಕರಾವಳಿ ಪ್ರದೇಶದಲ್ಲಿ ತಡರಾತ್ರಿ ಮೀನು ಹಿಡಿಯೋಕೆ ಹೋದ ಚಂದ್ರಕಾಂತ್ ಬರುವಾಗ ಭಾಗ್ಯವನ್ನೇ ಪಡೆದು ಬಂದಿದ್ದ. ಘೋಲ್ ಎನ್ನುವ ಮೀನು ಅಂದು ಆತನ ಬಲೆಗೆ ಸಿಕ್ಕಿತ್ತು. ಒಂದಲ್ಲ, ಎರಡಲ್ಲ, ಬರೋಬ್ಬರಿ 157 ಘೋಲ್ ಮೀನುಗಳನ್ನು ಬುಟ್ಟಿಯಲ್ಲಿ ತಂದಿದ್ದ ಆತನಿಂದ ಎಲ್ಲಾ ಮೀನುಗಳನ್ನು ಉತ್ತರ ಪ್ರದೇಶ ಮತ್ತು ಬಿಹಾರದ ವ್ಯಾಪಾರಿಗಳು ಕೊಂಡುಕೊಂಡರು. ಅದೂ 1.33 ಕೋಟಿ ರೂಪಾಯಿಗಳಿಗೆ! ಅದೃಷ್ಟ ಅಂದ್ರೆ ಇದೇ ತಾನೇ?

ತಾನು ಹಿಡಿದಿದ್ದು ಅತಿ ಅಪರೂಪದ ಘೋಲ್ ಮೀನು ಅನ್ನೋದು ಬಹಳ ಸಮಯದವರಗೆ ಚಂದ್ರಕಾಂತ್​ಗೆ ಗೊತ್ತೇ ಇರಲಿಲ್ವಂತೆ. ಈತ ಘೋಲ್ ಮೀನು ಹಿಡಿದಿದ್ದಾನೆ ಎನ್ನುವ ವಿಚಾರ ಕ್ಷಣಮಾತ್ರದಲ್ಲಿ ಎಲ್ಲರಿಗೂ ಗೊತ್ತಾಗಿ ಹೋಯ್ತಂತೆ. ನಾ ಮುಂದು ತಾ ಮುಂದು ಎಂದು ವ್ಯಾಪಾರಿಗಳು, ಪ್ರವಾಸಿಗರು ಎಲ್ಲರೂ ಬಂದು ಕೊಳ್ಳುವ ಆಸಕ್ತಿ ತೋರಿಸಿದ್ರಂತೆ. ಅತೀ ಹೆಚ್ಚು ಹಣ ನೀಡಿದ ವ್ಯಕ್ತಿಗೆ ಮೀನು ಮಾರಿದ್ದಾನೆ ಚಂದ್ರಕಾಂತ್.

ಅಂದು 10 ಜನ ಸಹಚರರ ಜೊತೆಗೆ ದೋಣಿಯಲ್ಲಿ ಮೀನು ಹಿಡಿಯೋಕೆ ಸಮುದ್ರಕ್ಕೆ ಇಳಿದಿದ್ದ ಚಂದ್ರಕಾಂತ್, ಮರಳಿ ಬಂದ ನಂತರ ಬದಲಾದ ತನ್ನ ಅದೃಷ್ಟದಿಂದ ಇದುವರಗೆ ತನಗೆ ಇರುವ ಎಲ್ಲಾ ಸಾಲಗಳು ಒಂದೇ ಏಟಿಗೆ ತೀರಿ ಹೋದವು ಎಂದಿದ್ದಾನೆ.

ಏನಿದು ಘೋಲ್ ಮೀನು?

ಫೋಟೋನಿಬಿಯಾ ಡಯಾಕ್ಯಾಂತಸ್ ಎನ್ನುವ ವೈಜ್ಞಾನಿಕ ಹೆಸರಿರುವ ಘೋಲ್ ಮೀನನ್ನು ಬ್ಲಾಕ್ ಸ್ಪೋಟೆಡ್ ಕ್ರೋಕರ್ ಫಿಶ್ ಎಂದೂ ಕರೆಯುತ್ತಾರೆ. ಥೈಲ್ಯಾಂಡ್, ಹಾಂಕಾಂಗ್, ಸಿಂಗಾಪೊರ್, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಈ ಮೀನಿಗೆ ಭಾರೀ ಬೇಡಿಕೆ ಇದೆ. ಈ ಮೀನನ್ನು ಸಮುದ್ರದ ಬಂಗಾರ ಎಂದೂ ಕರೆಯುತ್ತಾರಂತೆ. ಘೋಲ್ ಮೀನುಗಳ ರೆಕ್ಕೆಗಳಿಗೆ ಅತ್ಯುತ್ತಮ ಔಷಧೀಯ ಗುಣಗಳಿವೆ. ಇವು ಕರಗಬಲ್ಲ ಹೊಲಿಗೆಗಳ ತಯಾರಿಕೆಯಲ್ಲಿ ಬಳಕೆಯಾಗುತ್ತವೆ. ಸಿಂಗಾಪುರದಲ್ಲಿ ಇದನ್ನು ವೈನ್ ಪ್ಯೂರಿಫಿಕೇಶನ್​ಗೂ ಬಳಸುತ್ತಾರೆ.

ಸಮುದ್ರದಲ್ಲಿ ಮಾಲಿನ್ಯ ಹೆಚ್ಚಾಗಿರೋದ್ರಿಂದ ಈ ಮೀನುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಹಾಗಾಗಿ ಈ ಮೀನುಗಳಿಗಾಗಿ ಮೀನುಗಾರರು ಸಮುದ್ರದಲ್ಲಿ ಬಹಳ ಆಳದವರಗೆ ಹೋಗಬೇಕಾಗುತ್ತದೆ. ಅದಕ್ಕಾಗಿ ತಗಲುವ ಖರ್ಚು ಕೂಡಾ ಹೆಚ್ಚಾಗಿರುವುದರಿಂದ ಮೀನಿನ ಬೆಲೆಯೂ ದುಬಾರಿಯಾಗಿದೆ ಎನ್ನಲಾಗಿದೆ.

Leave A Reply

Your email address will not be published.