ಹಿಂದಿ ಜನಪ್ರಿಯ ನಟ, ಬಿಗ್ ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ

ಹಿಂದಿ ಕಿರುತೆರೆಯ ಜನಪ್ರಿಯ ನಟ, ಬಿಗ್‌ ಬಾಸ್‌ 13ನೇ ಆವೃತ್ತಿಯ ವಿಜೇತ ಸಿದ್ಧಾರ್ಥ್​ ಶುಕ್ಲಾ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ‌.

40 ವರ್ಷದ ಸಿದ್ಧಾರ್ಥ್‌ ಶುಕ್ಲಾರವರಿಗೆ ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ಕರೆದೊಯ್ಯುವಾಗ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಬಳಿಕ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.

ಇತ್ತೀಚೆಗಷ್ಟೇ ನಡೆದಿದ್ದ ರಿಯಾಲಿಟಿ ಶೋಗಳಾದ ಬಿಗ್‌ ಬಾಸ್‌ ಒಟಿಟಿ ಹಾಗೂ ಡಾನ್ಸ್‌ ದಿವಾನೆ 3ರಲ್ಲೂ ಕಾಣಿಸಿಕೊಂಡಿದ್ದರು. ಹೀಗಿರುವಾಗ ಸಿದ್ಧಾರ್ಥ್‌ ಶುಕ್ಲಾರವರ ಅಕಾಲಿಕ ನಿಧನ ವಾರ್ತೆ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

ಹಿಂದಿಯ ಜನಪ್ರಿಯ ಧಾರಾವಾಹಿ ‘ಬಾಲಿಕಾ ವಧು’ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿದ್ದ ಸಿದ್ಧಾರ್ಥ್‌, ಹಮ್ಟಿ ಶರ್ಮಾ ಕಿ ದುಲ್ಹನಿಯಾ ಸಿನಿಮಾದಲ್ಲೂ ನಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

1980ರ ಡಿಸೆಂಬರ್ 12ರಂದು ಮುಂಬೈನಲ್ಲಿ ಜನಿಸಿದ್ದ ಸಿದ್ಧಾರ್ಥ್ ಶುಕ್ಲಾರ ತಂದೆ, ತಾಯಿ ಮೂಲತಃ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವರು. ಸಿದ್ಧಾರ್ಥ್‌ ತಮ್ಮ ಶಿಕ್ಷಣವನ್ನು ಮುಂಬೈನಲ್ಲೇ ಪೂರೈಸಿದ್ದಾರೆ. ಇವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Leave A Reply

Your email address will not be published.